ಶಿವಮೊಗ್ಗದಲ್ಲಿ ಸಂಕೇತ್‌ ಹತ್ಯೆ| ಕೋಮು ಗಲಭೆ ಹುಟ್ಟು ಹಾಕಲು ಕೃತ್ಯ ಎಸಗಿದಂತಿದೆ – ಸಿಟಿ ರವಿ

2 Min Read

– ರಾಜ್ಯ ಉಡ್ತಾ ಕರ್ನಾಟಕ ಆಗುತ್ತಿದೆ

ಬೆಂಗಳೂರು: ಶಿವಮೊಗ್ಗದಲ್ಲಿ ಅನ್ಯ ಕೋಮಿನ ಹುಡುಗರಿಂದ ಸಂಕೇತ್‌ ಕೊಲೆ (Sanketh Murder) ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಸರ್ಕಾರವನ್ನ ಬಿಜೆಪಿ ನಾಯಕ ಸಿಟಿ ರವಿ (CT Ravi) ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, 10ನೇ ತರಗತಿ ಓದುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯನ್ನು ಯಾವುದೇ ಕಾರಣ ಇಲ್ಲದೇ ಹತ್ಯೆ ಮಾಡಿದ್ದಾರೆ. 10ನೇ ಕ್ಲಾಸ್‌ ವಿಶೇಷ ತರಗತಿ ಮುಗಿಸಿಕೊಂಡು ಬರುತ್ತಿದ್ದಾಗ ಕೊಂದಿದ್ದಾರೆ. ಭಟ್ಕಳ, ಬಾಗಲಕೋಟೆ ಯಲ್ಲಿ ಇಂತಹ ಗಲಾಟೆಗಳು ನಡೆದಿವೆ. ದೇಶದ ಹಲವು ಕಡೆ ಕೋಮು ಗಲಭೆ ನಡೆಸೋ ಸಂಚಿನ ಹಿನ್ನಲೆಯಲ್ಲಿ ಭಯೋತ್ಪಾದನಾ ಷಡ್ಯಂತ್ರದ ಕಾರಣಕ್ಕೆ ಕೆಲವರ ಬಂಧನವಾಗಿದೆ. ಇವೆಲ್ಲವನ್ನು ನೋಡಿದರೆ ಯೋಜಿತವಾಗಿ ಕೋಮು ಗಲಭೆ ಹುಟ್ಟು ಹಾಕಲು ಇದನ್ನು ಮಾಡುತ್ತಿದ್ದಾರೆ ಎಂದು ಕಾಣಿಸುತ್ತಿದೆ. ಹತ್ಯೆ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹ ಮಾಡಿದರು.

ಎಲ್ಲಾ ಕಡೆ ಇಂತಹ ಘಟನೆಯಲ್ಲಿ ಒಂದೇ ಕೋಮಿನ ಅಪ್ರಾಪ್ತರು ಇದ್ದಾರೆ‌. ಇದು ಕಾಕತಾಳಿಯನಾ? ಯೋಜಿತವಾಗಿ ಮಾಡುತ್ತಿರುವುದೇ ಎನ್ನುವುದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಜಾಸ್ತಿಯಾಗುತ್ತಿದೆ. ರಾಜ್ಯ ಉಡ್ತಾ ಕರ್ನಾಟಕ ಆಗುತ್ತಿದ್ದು ಎಲ್ಲಾ ಕಡೆ ಡ್ರಗ್ಸ್ ಸಿಕ್ತಿದೆ ಎಂದು ದೂರಿದರು.

 

ದಾವಣಗೆರೆ, ಮೈಸೂರಿನಲ್ಲಿ ‌ಡ್ರಗ್ಸ್ ಫ್ಯಾಕ್ಟರಿ ಸಿಕ್ಕಿದೆ. ಇದೊಂದು ರಾಕೆಟ್ ಇದ್ದಂತೆ ಕಾಣ್ತಿದೆ. ಆಡಳಿತ ಪಕ್ಷದ ಬೇಜವಾಬ್ದಾರಿ, ಕೆಲ ಪೊಲೀಸರು ಶಾಮೀಲಾಗಿದ್ದಾರೆ. ಡ್ರಗ್ಸ್ ಹಾವಳಿಯಿಂದ ಯೋಜಿತ ‌ಪ್ರಮಾಣ ಹಿಂಸೆ, ಕೊಲೆ ಎಲ್ಲಾ ಜಾಸ್ತಿ ಆಗುತ್ತಿದೆ. ಸಿಎಂ, ಡಿಸಿಎಂ, ಮಂತ್ರಿಗಳಿಗೆ ಇದರ ಬಗ್ಗೆ ಕಾಳಜಿ ಇಲ್ಲ. ‌ ಕುರ್ಚಿ ಉಳಿಸಿಕೊಳ್ಳೋದು, ಲೂಟಿ ಹೊಡೆಯೋದು ಅಷ್ಟೆ ಇವರ ಚಿಂತೆ. ಸಿಎಂ ಆಗಾಗ ಒಂದು ಹೇಳಿಕೆ ಕೊಡ್ತಾರೆ. ಸಿಎಂ ಅವರೇ ಸಾಮಾಜಿಕ ನ್ಯಾಯ ಅಂದರೆ ಏನು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನಕ್ಕಾಗಿ ಶಾಸಕರ ಪತ್ರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಈ ಸರ್ಕಾರದಲ್ಲಿ 150 ಹೆಚ್ಚು ಜನರಿಗೆ ಸಂಪುಟ ದರ್ಜೆ ಸ್ಥಾನಮಾನ ಕೊಡಲಾಗಿದೆ. ಆಡಳಿತ ಪಕ್ಷದ ಎಲ್ಲಾ ಶಾಸಕರಿಗೆ ಸಂಪುಟ ‌ದರ್ಜೆ ಸ್ಥಾನ ಅಂತ ಆದೇಶ ಹೊರಡಿಸಿದರೆ ಎಲ್ಲರ ಬೇಡಿಕೆ ಈಡೇರಿಕೆ ಆಗುತ್ತದೆ. ಎಲ್ಲರು ಕ್ಯಾಬಿನೆಟ್ ರ‍್ಯಾಂಕ್ ಅಂದರೆ ರಾಜ್ಯ ಉದ್ದಾರ ಆಗುತ್ತದೆ. ಸಾಲದ ಹೊರೆಯೂ ಜಾಸ್ತಿ ಆಗುತ್ತದೆ. ಈಗಾಗಲೇ 7.5 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇನ್ನು ಸಾಲ ಮಾಡಿ ಕರ್ನಾಟಕವನ್ನು ಮುಳುಗಿಸಿ. ಇವರು ಮಜಾ ಮಾಡಿ ಹೋಗಬಹುದು ಅಂತ ಕಾಂಗ್ರೆಸ್ ವಿರುದ್ದ ಸಿಟಿ ರವಿ ಕಿಡಿಕಾರಿದರು.

ಧಾರವಾಡದಲ್ಲಿ ಖಾಲಿ ಹುದ್ದೆ ಭರ್ತಿಗೆ ಸರ್ಕಾರದ ವಿರುದ್ದ ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಗುತ್ತಿಗೆ ನೌಕರರಿಗೆ ಸಂಬಳ ಕೊಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. ಸರ್ಕಾರಿ ಆಸ್ಪತ್ರೆಗೆ ಔಷಧಿ ಕೊಡಲು ಹಣ ಇಲ್ಲ. ಡಯಾಲಿಸೀಸ್ ಮಾಡುವ ಏಜೆನ್ಸಿಗೆ ದುಡ್ಡು ಕೊಡ್ತಿಲ್ಲ. ರೋಗಿಗಳೇ ಡಯಾಲೀಸಿಸ್ ಗೆ ಔಷಧಿ ತಂದು ಡಯಾಲೀಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಇಂತಹವರು ಖಾಲಿ ಹುದ್ದೆ ಭರ್ತಿ ಮಾಡುತ್ತಾರಾ? ಒಳ ಮೀಸಲಾತಿ ಬಗ್ಗೆ ನಿರ್ಣಯವಾದರೂ ಇದೂವರೆ ಒಳ ಮೀಸಲಾತಿ ಅನುಷ್ಠಾನ ಮಾಡಿಲ್ಲ. ಇವರಿಂದ ನ್ಯಾಯದ ನಿರೀಕ್ಷೆ ಮಾಡೋಕೆ ಸಾಧ್ಯವೇ? ಅವರು ಕುರ್ಚಿಯಲ್ಲಿ ಕೂತಿದ್ದರೆ ಸಾಮಾಜಿಕ ನ್ಯಾಯ. ಇನ್ನುಳಿದವರಿಗೆಲ್ಲಾ ಅನ್ಯಾಯ ಅಷ್ಟೇ ಎಂದು ಸರ್ಕಾರದ ವಿರುದ್ದ ಸಿಟಿ ರವಿ ಕಿಡಿಕಾರಿದರು.

Share This Article