ಕಮಲಕ್ಕೆ ಕೈ ಹಾಕಿದ ಕಾಂಗ್ರೆಸ್‌ – ಕಲಬುರಗಿ ಪಾಲಿಕೆಯಲ್ಲಿ ಈಗ ‘ಲೋಗೋ’ ಯುದ್ಧ!

1 Min Read

ಕಲಬುರಗಿ: ಮಹಾನಗರ ಪಾಲಿಕೆಯ ಅಧಿಕೃತ ಲೋಗೋದಲ್ಲಿದ್ದ (Logo) ‘ಕಮಲ’ದ ಚಿಹ್ನೆಯನ್ನು ಕಿತ್ತೊಗೆಯಲು ಕಾಂಗ್ರೆಸ್ (Congress) ಆಡಳಿತ ಮಂಡಳಿ ಮುಂದಾಗಿರುವುದು ನಗರದಲ್ಲಿ ಈಗ ರಾಜಕೀಯ ಕಿಚ್ಚು ಹಚ್ಚಿದೆ. ಅಭಿವೃದ್ಧಿ ಮರೆತು ‘ಚಿಹ್ನೆ ರಾಜಕೀಯ’ಕ್ಕೆ ಕೈ ಹಾಕಿದ ಮೇಯರ್ ನಡೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಾಲಿಕೆ ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿದೆ.

ಮೇಯರ್ ವರ್ಷಾ ಜಾನೆ ನೇತೃತ್ವದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ, ಲೋಗೋದಲ್ಲಿದ್ದ ಕಮಲದ (Lotus) ಹೂವಿನ ಗುರುತನ್ನು ಕೈಬಿಟ್ಟು ಹೊಸ ವಿನ್ಯಾಸಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಗಿದೆ. ಶರಣಬಸವೇಶ್ವರ ದೇವಸ್ಥಾನ ಹಾಗೂ ಖ್ವಾಜಾ ಬಂದೇ ನವಾಜ್ ದರ್ಗಾದೊಂದಿಗೆ ಸಮನ್ವಯದ ಸಂಕೇತವಾಗಿದ್ದ ಕಮಲವನ್ನು ‘ಬಿಜೆಪಿ ಚಿಹ್ನೆ’ ಎಂಬ ಕಾರಣಕ್ಕೆ ತೆಗೆಯಲು ಹೊರಟಿರುವುದು ಕೇಸರಿ ಪಡಡೆಯನ್ನು ಕೆರಳಿಸಿದೆ.  ಇದನ್ನೂ ಓದಿ: ಗ್ರಾ.ಪಂ ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆ – ಈ ವರ್ಷ 71% ಮಾತ್ರ ಸಂಗ್ರಹ

 

 ಸದಸ್ಯರ ಗೈರನ್ನೇ ಬಳಸಿಕೊಂಡ ‘ಕೈ’ ತಂತ್ರ?
ಬಿಜೆಪಿ (BJP) ಸದಸ್ಯರು ಸಭೆಗೆ ಬಾರದಿದ್ದ ಸಮಯವನ್ನೇ ನೋಡಿಕೊಂಡು ಆಡಳಿತ ಪಕ್ಷ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಅಭಿವೃದ್ಧಿ ಕೆಲಸ ಮಾಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್, ಇತಿಹಾಸ ಅಳಿಸಲು ಹೊರಟಿದೆ ಎಂದು ಬಿಜೆಪಿ ಸದಸ್ಯರು ಹರಿಹಾಯ್ದಿದ್ದಾರೆ. ಇದಕ್ಕೆ ಪ್ರತಿಯಾಗಿ, ಸಾರ್ವಜನಿಕ ಲೋಗೋದಲ್ಲಿ ಒಂದು ಪಕ್ಷದ ಚಿಹ್ನೆ ಇರುವುದು ಸರಿಯಲ್ಲ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ಇದನ್ನೂ ಓದಿ: ಗದಗದಲ್ಲಿ ಮತ್ತೆ ಕಿಡಿಗೇಡಿಗಳಿಂದ ಶಿವಲಿಂಗ, ಪಾಣಿಪೀಠ ಭಗ್ನ

ಒಟ್ಟಾರೆಯಾಗಿ ಕಲಬುರಗಿ ಪಾಲಿಕೆಯಲ್ಲಿ ಈಗ ಜನರ ಸಮಸ್ಯೆಗಿಂತ ಲೋಗೋ ಕಿತ್ತಾಟವೇ ಮುಂಚೂಣಿಗೆ ಬಂದಿದ್ದು, ಈಗಾಗಲೇ ಲೋಗೋ ಬದಲಾವಣೆ ಪ್ರಸ್ತಾವನೆ ಸರ್ಕಾರದ ಅಂಗಳ ತಲುಪಿದ್ದು, ರಾಜ್ಯ ಸರ್ಕಾರದ ಮುಂದಿನ ನಡೆ ಕುತೂಹಲ ಮೂಡಿಸಿದೆ.
Share This Article