ಮಹಾರಾಷ್ಟ್ರದಲ್ಲಿ ಮುಸ್ಲಿಮರಿಗೆ ನೀಡಲಾಗಿದ್ಧ ಶೇ.5 ಮೀಸಲಾತಿ ರದ್ದು

1 Min Read

ಮುಂಬೈ: ಮುಸ್ಲಿಮರಿಗೆ (Muslim Community) ಉದ್ಯೋಗ, ಶಿಕ್ಷಣದಲ್ಲಿ ನೀಡಲಾಗಿದ್ದ ಶೇ.5 ರಷ್ಟು ಮೀಸಲಾತಿಯನ್ನು ಮಹಾರಾಷ್ಟ್ರ (Maharashtra) ಸರ್ಕಾರ ರದ್ದುಗೊಳಿಸಿದೆ.

ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಲಾಗಿದ್ದ ಶೇ.5 ರಷ್ಟು ಮೀಸಲಾತಿಯನ್ನು ಕೋರ್ಟ್ ಆದೇಶದ ಮೇರೆಗೆ ರದ್ದುಗೊಳಿಸಲಾಗಿದೆ.

10 ವರ್ಷಗಳ ಹಿಂದೆ ಅಂದರೆ 2014ರಲ್ಲಿ ಕಾಂಗ್ರೆಸ್-ಎನ್‌ಸಿಪಿ (Congress-NCP) ಸರ್ಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಶೇ.5 ರಷ್ಟು ಮೀಸಲಾತಿಯನ್ನು ಘೋಷಿಸಿತ್ತು. ಚುನಾವಣೆಗೆ ಮೊದಲೇ ಮುಸ್ಲಿಮರನ್ನು ವಿಶೇಷ ಹಿಂದುಳಿದ ವರ್ಗ-ಎ (ಎಸ್‌ಬಿಸಿ-ಎ) ವರ್ಗದ ಅಡಿಯಲ್ಲಿ ವರ್ಗೀಕರಿಸಿ ಸುಗ್ರೀವಾಜ್ಞೆಯ ಹೊರಡಿಸಿ ಜಾರಿ ಮಾಡಿತ್ತು.

ರಾಜ್ಯ ಸರ್ಕಾರದ ಆದೇಶವನ್ನು ಬಾಂಬೆ ಹೈಕೋರ್ಟ್‌ನಲ್ಲಿ (Bombay Highcourt) ಪ್ರಶ್ನಿಸಲಾಗಿತ್ತು. ಕೋರ್ಟ್‌ ನವೆಂಬರ್‌ 2014 ರಲ್ಲಿಈ ಆದೇಶಕ್ಕೆ ತಡೆ ನೀಡಿತ್ತು. ಡಿಸೆಂಬರ್ 2014 ರಲ್ಲಿ ರಾಜ್ಯ ಶಾಸಕಾಂಗವು ನಿಗದಿತ ಗಡುವಿನೊಳಗೆ ಈ ಸುಗ್ರೀವಾಜ್ಞೆಯನ್ನು ಕಾನೂನಾಗಿ ಜಾರಿಗೆ ತರದ ಕಾರಣ ಅದು ಸ್ವಯಂಚಾಲಿತವಾಗಿ ರದ್ದಾಗಿತ್ತು. ಇದನ್ನೂ ಓದಿ: ರಂಜಾನ್ | ಇಡೀ ತಿಂಗಳು ಸಂಜೆ 4ಕ್ಕೆ ಕಚೇರಿಯಿಂದ ತೆರಳಲು ಮುಸ್ಲಿಂ ನೌಕರರಿಗೆ ಅವಕಾಶ: ತೆಲಂಗಾಣ ಸರ್ಕಾರ

 


ಹಿಂದೆ ಅಧಿಕಾರದಲ್ಲಿದ್ದ ‘ಮಹಾ ವಿಕಾಸ್‌ ಆಘಾಡಿ’ ಸರ್ಕಾರ ಮರಾಠ ಸಮುದಾಯಕ್ಕೆ ಶೇ.16 ಮತ್ತು ಮುಸ್ಲಿಂ ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿ ನೀಡಿತ್ತು. ಆದರೆ ಸುಪ್ರೀಂ ಕೋರ್ಟ್‌ ಸಂವಿಧಾನಿಕ ಪೀಠ ಈ ಮೀಸಲಾತಿಯನ್ನು ರದ್ದುಗೊಳಿಸಿತ್ತು.

ಸುಗ್ರೀವಾಜ್ಞೆಯ ರದ್ದತಿ ಮತ್ತು ಸುಪ್ರೀಂ ಕೋರ್ಟ್‌ನ ಆದೇಶದ ಹೊರತಾಗಿಯೂ ರಾಜ್ಯವು ಇಲ್ಲಿಯವರೆಗೆ ಮೂಲ ಸರ್ಕಾರಿ ಆದೇಶವನ್ನು ರದ್ದುಗೊಳಿಸಿರಲಿಲ್ಲ. ಈಗ ಆದೇಶ ಪ್ರಕಟಿಸುವ ಮೂಲಕ ಎಲ್ಲಾ ಆದೇಶಗಳನ್ನು ರದ್ದು ಮಾಡಿದೆ.

ಸಂವಿಧಾನದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಸುಪ್ರೀಂ ಕೋರ್ಟ್‌ ಈ ಹಿಂದೆ ಹಲವು ರಾಜ್ಯ ಸರ್ಕಾರಗಳು ನೀಡಿದ್ದ ಮೀಸಲಾತಿ ಆದೇಶವನ್ನು ರದ್ದುಗೊಳಿಸಿತ್ತು.

Share This Article