ರಾಹುಲ್‌ ಬದಲು ಮಮತಾ ಇಂಡಿ ಕೂಟ ಮುನ್ನಡೆಸಲಿ: ಸಿಂಗ್‌ ಮಾಧ್ಯಮ ಸಲಹೆಗಾರ ಸಂಜಯ ಬಾರು

2 Min Read

ನವದೆಹಲಿ: ರಾಹುಲ್ ಗಾಂಧಿ ನಾಯಕತ್ವದ ವಿರುದ್ಧ ಕಾಂಗ್ರೆಸ್‌ನಲ್ಲಿ ಮಾತ್ರವಲ್ಲ ಇಂಡಿ ಕೂಟದಲ್ಲೂ ಅಪನಂಬಿಕೆ, ಅವಿಶ್ವಾಸ, ಅಪಸ್ವರ ಎದ್ದಿದೆ. 2ನೇ ಮಹಿಳೆ ಪ್ರಧಾನಿಯಾಗುವ ಸಮಯ ಹತ್ತಿರ ಬಂದಿದೆ. ಹಾಗಾಗಿ ಪಶ್ಚಿಮ ಬಂಗಾಳ ಸಿಎಂ, ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಇಂಡಿ ಕೂಟ ಮುನ್ನಡೆಸಬೇಕು ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ (Manmohan Singh) ಅವರ ಮಾಧ್ಯಮ ಸಲಹೆಗಾರ ಸಂಜಯ ಬಾರು(Sanjaya Baru) ಹೇಳಿದ್ದಾರೆ.

ಮಮತಾ ಬ್ಯಾನರ್ಜಿ(Mamata Banerjee) ಅವರು ಪ್ರಧಾನಿ ಮುಖವನ್ನು ಹೊಂದಿದ್ದಾರೆ. ಮಮತಾಗಿಂತಲೂ ಮತ್ತೊಬ್ಬರು ಆ ಸ್ಥಾನಕ್ಕೆ ಯೋಗ್ಯರಲ್ಲ. ಕಾಂಗ್ರೆಸಿಗರು ಮಮತಾರನ್ನು ಇಂಡಿ ಕೂಟಕ್ಕೆ ವಾಪಸ್ ಕರೆತರಬೇಕು ಎಂದು ಸಲಹೆ ನೀಡಿದ್ದಾರೆ.

ಮಾಧ್ಯಮಕ್ಕೆ ಬರೆದ ಲೇಖನದಲ್ಲಿ ಮಹಿಳೆಯರು ಎಲ್ಲಾ ವೃತ್ತಿಗಳಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಿರುವ ಸಮಯದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯದಲ್ಲಿ ಅತಿಯಾದ ಪುರುಷ ಪ್ರಾಬಲ್ಯವಿದೆ ಎಂದು ಬಾರು ಬರೆದಿದ್ದಾರೆ. ಇದನ್ನೂ ಓದಿ: ನಾನು ರಾಹುಲ್‌ವಾದಿಯಲ್ಲ, ಕೇರಳ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲ್ಲ: ಮಣಿಶಂಕರ್‌ ಅಯ್ಯರ್‌


ಮೂರು ವರ್ಷಗಳ ಹಿಂದೆ ಇಂಡಿಯಾ ಬ್ಲಾಕ್ ರಚನೆಯಾದಾಗ ಬ್ಯಾನರ್ಜಿ ಅವರನ್ನು ಅದರ ಅಧ್ಯಕ್ಷರನ್ನಾಗಿ ಮಾಡಬೇಕಾಗಿತ್ತು. ರಾಹುಲ್ ಗಾಂಧಿ (Rahul Gandhi)- ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸೋನಿಯಾ ಗಾಂಧಿ-ಮನಮೋಹನ್ ಸಿಂಗ್ ಮಾದರಿಯನ್ನು ಪುನರಾವರ್ತಿಸುವುದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಮತಾ ಅವರಿಗೆ ವಿರೋಧ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ನೀಡಿದರೆ ಪುರುಷ ಪ್ರಾಬಲ್ಯದ ಪಕ್ಷವಾಗಿರುವ ಬಿಜೆಪಿಗೆ ಸಮಸ್ಯೆಯಾಗಬಹುದು. ಮುಖ್ಯವಾಗಿ ಬಿಜೆಪಿ ಇತ್ತೀಚೆಗೆ ಗಳಿಸಿರುವ ಮಹಿಳಾ ಮತಗಳನ್ನು ವಿರೋಧ ಪಕ್ಷಕ್ಕೆ ಬರುವಂತೆ ಮಾಡಬಹುದು ಎಂದಿದ್ದಾರೆ.

ಬಾರು ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ ಟಿಎಂಸಿ ರಾಜ್ಯಸಭಾ ಸಂಸದೆ ಸಾಗರಿಕಾ ಘೋಷ್ ಪ್ರತಿಕ್ರಿಯಿಸಿ, ಮಮತಾರನ್ನು ವಿಪಕ್ಷ ನಾಯಕಿ ಮುಖವನ್ನಾಗಿ ಬಿಂಬಿಸಬೇಕು ಎಂದು ಸಹಮತ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನ ಉದಿತ್ ರಾಜ್ ಕಿಡಿಕಾರಿ, ಇದೊಂದು ಹಾಸ್ಯಾಸ್ಪದ ಮಾತು. ಮಮತಾ ಬ್ಯಾನರ್ಜಿ ಕೇವಲ ಒಂದು ರಾಜ್ಯದ ನಾಯಕಿ, ಟಿಎಂಸಿ ಸಣ್ಣಪಕ್ಷ. ವಿಪಕ್ಷಗಳ ನಾಯಕಿಯಾಗೋ ಸಾಮರ್ಥ್ಯ ಮಮತಾಗಿಲ್ಲ ಎಂದಿದ್ದಾರೆ.

ಎಸ್‌ಪಿ ಕೂಡ ಪ್ರತಿಕ್ರಿಯಿಸಿದ್ದು ಮಮತಾ ಪರ ಟಿಎಂಸಿ ನಾಯಕರ ವಾದ ಸರಿಯಿದೆ. ಆದರೆ ಅಖಿಲೇಶ್ ಯಾದವ್‌ರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಿಬೇಕು ಎಂದು ಹೇಳಿದೆ.

Share This Article