ಮಡುರೋ ಕಿಡ್ನಾಪ್‌ ಕೇಸ್‌ನಲ್ಲಿ ಸುದ್ದಿಯಾದ AI Anthropic ಕಂಪನಿಯ ಬೆಂಗಳೂರು ಕಚೇರಿ ಓಪನ್‌

2 Min Read

ಬೆಂಗಳೂರು: ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ (Nicolas Maduro) ಕಿಡ್ನಾಪ್‌ ಪ್ರಕರಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕೃತಕ ಬುದ್ಧಿಮತ್ತೆ(AI) ಕಂಪನಿ ಆ್ಯಂಥ್ರೋಪಿಕ್‌ (Anthropic) ಭಾರತದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ (Bengaluru) ತನ್ನ ಕಚೇರಿಯನ್ನು ತೆರೆದಿದೆ.

ಅಮೆರಿಕ ಮೂಲದ ಎಐ ಸ್ಟಾರ್ಟ್ಅಪ್ ಆ್ಯಂಥ್ರೋಪಿಕ್‌ ಟೋಕಿಯೊ ನಂತರ ಏಷ್ಯಾದಲ್ಲಿ ಎರಡನೇ ಕಚೇರಿಯನ್ನು ಬೆಂಗಳೂರಿನಲ್ಲಿ ತೆರೆದು ಉದ್ಯಮಗಳು, ಸ್ಟಾರ್ಟ್ಅಪ್‌ಗಳು, ಶಿಕ್ಷಣ ಮತ್ತು ಕೃಷಿ ಕ್ಷೇತ್ರದಲ್ಲಿ ಹಲವಾರು ಪಾಲುದಾರಿಕೆಗಳನ್ನು ಘೋಷಿಸಿದೆ.

ಭಾರತವು ಈಗ ಆ್ಯಂಥ್ರೋಪಿಕ್‌ನ ತನ್ನ ಕ್ಲೌಡ್ AI ಮಾದರಿಗಳಿಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಭಾರತವು ವಿಶ್ವದ ಅತ್ಯಂತ ಭರವಸೆಯ ಅವಕಾಶಗಳಲ್ಲಿ ಒಂದು ಎಂದು ಹೇಳಿಕೊಂಡಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ತನ್ನ ವಿಸ್ತರಣಾ ಯೋಜನೆಗಳನ್ನು ಘೋಷಿಸಿದಾಗಿನಿಂದ ಭಾರತದಲ್ಲಿ ತನ್ನ ರನ್-ರೇಟ್ ಆದಾಯವು ದ್ವಿಗುಣಗೊಂಡಿದೆ ಎಂದು ಆ್ಯಂಥ್ರೋಪಿಕ್‌ ಹೇಳಿದೆ.


ಮುಡರೋ ಕಿಡ್ನಾಪ್‌ಗೂ ಕಂಪನಿಗೆ  ಏನು ಸಂಬಂಧ?
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆ ಹಿಡಿಯಲು ಅಮೆರಿಕ ಸೇನೆ ಆ್ಯಂಥ್ರೋಪಿಕ್‌ ಕಂಪನಿಯ ಎಐ ಟೂಲ್ ಕ್ಲಾಡ್ (Claude) ಬಳಸಿ ಕಾರ್ಯಾಚರಣೆ ನಡೆಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಆ್ಯಂಥ್ರೋಪಿಕ್‌ ಪ್ರಕಟಿಸಿರುವ ಮಾರ್ಗಸೂಚಿ ಪ್ರಕಾರ ಎಐ ಟೂಲ್ ಅನ್ನು ಹಿಂಸಾಚಾರ, ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದು ಅಥವಾ ಕಣ್ಗಾವಲು ನಡೆಸುವುದಕ್ಕೆ ನಿಷೇಧವಿದೆ. ಆದರೆ ಅಮೆರಿಕ ತನ್ನ ಕೆಲಸವನ್ನು ಆ್ಯಂಥ್ರೋಪಿಕ್‌ನ ಪಾಲುದಾರ ಸಂಸ್ಥೆ ಪಾಲಂತೀರ್ ಮೂಲಕ ನಡೆಸಿದೆ.

ಉಪಗ್ರಹದ ಚಿತ್ರಗಳನ್ನು ವಿಶ್ಲೇಷಿಸಿ ವೆನಿಜುವೆಲಾ ರಾಜಧಾನಿ ಕಾರಕಸ್‌ಲ್ಲಿರುವ ಸೇನಾ ನಿಯೋಜನೆ ಎಷ್ಟಿದೆ? ಯಾವ ಕಡೆಯಿಂದ ದಾಳಿ ಮಾಡಿದರೆ ಸೂಕ್ತ ಎಂಬುದನ್ನು Claude ಅಮೆರಿಕ ಸೇನೆಗೆ ನೀಡಿತ್ತು. ವೆನಿಜುವೆಲಾ ವ್ಯಕ್ತಿಗಳ ಹಾಗೂ ವಾಹನಗಳ ಓಡಾಟದಂತಹ ಮಾಹಿತಿಯನ್ನು ಪಡೆದು ವಿಶ್ಲೇಷಿಸಿತ್ತು ಎಂದು ವರದಿಯಾಗಿದೆ.

Share This Article