ಈ ರೀತಿಯ ಅಸಹ್ಯ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ: ನೈನಾರ್ ನಾಗೇಂದ್ರನ್‌ಗೆ ತ್ರಿಶಾ ತಿರುಗೇಟು

1 Min Read

ಚೆನ್ನೈ: ಇಂತಹ ಅಸಹ್ಯಕರ ಮತ್ತು ಅನುಚಿತ ಹೇಳಿಕೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ತಮಿಳು ನಟಿ ತ್ರಿಶಾ ಕೃಷ್ಣನ್‌(Trisha Krishnan) ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ (Nainar Nagenthran) ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ವಿಜಯ್‌ (Vijay) ಅವರ ಟಿವಿಕೆಯನ್ನು (TVK) ಟೀಕಿಸುವ ಭರದಲ್ಲಿ ತ್ರಿಶಾ ಅವರನ್ನು ಹೆಸರನ್ನು ನೈನಾರ್ ನಾಗೇಂದ್ರನ್ ಪ್ರಸ್ತಾಪಿಸಿದ್ದು ಈಗ ತಮಿಳುನಾಡು (Tamil Nadu) ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಜೋರಾಗಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ತ್ರಿಶಾ ಅವರು ತಮ್ಮ ವಕೀಲರ ಮೂಲಕ ಹೇಳಿಕೆಯನ್ನು ಪ್ರಕಟಿಸಿದ್ದಾರೆ.

ತ್ರಿಶಾ ವಕೀಲರು ಹೇಳಿದ್ದೇನು?
ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕಕ್ಷಿದಾರರ ಬಗ್ಗೆ ಅಸಹ್ಯಕರವಾದ ಕಾಮೆಂಟ್‌ಗೆ ಸಂಬಂಧಿಸಿದಂತೆ ಈ ಹೇಳಿಕೆ ನೀಡುತ್ತಿದ್ದೇನೆ. ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಹೊಂದಿರುವ ವ್ಯಕ್ತಿಯಿಂದ ಇಂತಹ ಅಸಹ್ಯಕರ ಮತ್ತು ಅನುಚಿತ ಹೇಳಿಕೆಯನ್ನು ನನ್ನ ಕಕ್ಷಿದಾರರು ಎಂದಿಗೂ ನಿರೀಕ್ಷೆ ಮಾಡಿರಲಿಲ್ಲ.


ನನ್ನ ಕಕ್ಷಿದಾರರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಈ ಹಿಂದೆ ಕಾಯ್ದುಕೊಂಡಂತೆ ರಾಜಕೀಯದ ವಿಷಯಕ್ಕೆ ಬಂದಾಗ ಅವರು ಯಾವಾಗಲೂ ತಟಸ್ಥ ನಿಲುವನ್ನು ತೆಗೆದುಕೊಳ್ಳುತ್ತಾರೆ. ತ್ರಿಶಾ ಯಾವಾಗಲೂ ಕಲೆಯಿಂದ ಮಾತ್ರ ಗುರುತಿಸಲು ಇಷ್ಟಪಡುತ್ತಾರೆ ಹೊರತು ಯಾವುದೇ ಆಪಾದಿತ ರಾಜಕೀಯ ಹೊಂದಾಣಿಕೆಯಿಂದಲ್ಲ.

ವೈಯಕ್ತಿಕ ಜೀವನವನ್ನು ಎಂದಿಗೂ ಸಾರ್ವಜನಿಕ ವ್ಯಾಖ್ಯಾನ ಅಥವಾ ಚರ್ಚೆಯ ವಿಷಯವನ್ನಾಗಿ ಮಾಡಬಾರದು ಎನ್ನುವುದು ಸಾಮಾನ್ಯ ಮಾತು. ಉನ್ನತ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳು ಸಾರ್ವಜನಿಕ ಚರ್ಚೆಯಲ್ಲಿ ಮಾತನಾಡುವಾಗ ಜವಾಬ್ದಾರಿ ಮತ್ತು ಸಮಚಿತ್ತತೆಯನ್ನು ಕಾಯ್ದುಕೊಳ್ಳಬೇಕು. ಹೀಗಾಗಿ ತನ್ನ ಕಕ್ಷಿದಾರರ ಹೆಸರನ್ನು ಅವರಿಗೆ ಸಂಬಂಧಿಸದ ವಿಷಯಗಳಲ್ಲಿ ಸೇರಿಸಬಾರದು ಎಂದು ಈ ಮೂಲಕ ವಿನಂತಿ ಮಾಡುತ್ತಿದ್ದೇವೆ.

ನೈನಾರ್ ನಾಗೇಂದ್ರನ್ ಹೇಳಿದ್ದೇನು?
ವಿಜಯ್​ ಒಬ್ಬ ಉತ್ತಮ ನಟ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ವಿಜಯ್‌ಗೆ ರಾಜಕೀಯ ಹೊಸದು, ರಾಜಕಾರಣದ ಯಾವುದೇ ಅನುಭವ ಇಲ್ಲ. ರಾಜಕಾರಣ ಏನೆಂದು ತಿಳಿಯ ಬಯಸಿದರೆ ಮೊದಲು ಅವನ ಮತ್ತು ತ್ರಿಷಾಳ ಮನೆಯಿಂದ ಹೊರಬರಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

Share This Article