ವಿಜಯ್‌ ರ‍್ಯಾಲಿಯಲ್ಲಿ ದುರಂತ – ಸ್ಥಳದಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು

1 Min Read

ಚೆನ್ನೈ: ನಟ ವಿಜಯ್‌(Vijay) ಅವರ ತಮಿಳಗ ವೆಟ್ರಿ ಕಳಗಂ (TVK) ರ‍್ಯಾಲಿಯಲ್ಲಿ ಭಾಗವಹಿಸಿದ್ದ 37 ವರ್ಷದ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಸೇಲಂ (Salem) ಜಿಲ್ಲೆಯಲ್ಲಿ ನಡೆದಿದೆ.

ಮಹಾರಾಷ್ಟ್ರ ಮೂಲದ ಎಸ್. ಸೂರಜ್ (37) ಮೃತ ವ್ಯಕ್ತಿ. ಕಳೆದ 20 ವರ್ಷಗಳಿಂದ ಸೂರಜ್‌ ಸೇಲಂ ಜಿಲ್ಲೆಯ ಕೊಂಡಲಂಪಟ್ಟಿ ಬಳಿಯ ಅರಸಮರತು ಕಟ್ಟೂರಿನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೂರಜ್‌ ಸೀಲನೈಕೆನ್‌ಪಟ್ಟಿಯಲ್ಲಿ ನಡೆದ ಟಿವಿಕೆ ಕಾರ್ಯಕರ್ತರ ಸಭೆಯಲ್ಲಿ ಇತರ ಕೆಲವು ಸ್ಥಳೀಯ ಟಿವಿಕೆ ಕಾರ್ಯಕರ್ತರೊಂದಿಗೆ ಭಾಗವಹಿಸಿದ್ದರು. ಎರಡು ಗಂಟೆಗಳಿಗೂ ಹೆಚ್ಚು ಕಾಲ ಸುಡುವ ಬಿಸಿಲಿನಲ್ಲಿ ರ‍್ಯಾಲಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿ ಬಿದ್ದಿದ್ದಾರೆ. ಇದನ್ನೂ ಓದಿ: ಚುನಾವಣೆಗೆ ಮೊದಲು ತಮಿಳುನಾಡು ಮಹಿಳೆಯರ ಖಾತೆಗೆ ಬಿತ್ತು 5 ಸಾವಿರ ರೂ.

ಕೂಡಲೇ ಟಿವಿಕೆ ಕಾರ್ಯಕರ್ತರು ಸ್ಥಳದಲ್ಲಿದ್ದ ಅಂಬುಲೆನ್ಸ್‌ನಲ್ಲಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆ ತಲುಪುವ ಮುನ್ನವೇ ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಸೂರಜ್ ಒಂದೂವರೆ ವರ್ಷಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕುಟುಂಬ ಸದಸ್ಯರಿಂದ ದೂರು ಬಂದ ನಂತರ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಪತ್ನಿ ಪ್ರಿಯಾ (35), 11 ವರ್ಷದ ಮಗಳು ಮತ್ತು ಏಳು ವರ್ಷದ ಮಗನನ್ನು ಅಗಲಿದ್ದಾರೆ.

ಸೆಪ್ಟೆಂಬರ್ 27 ರಂದು ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 41 ಮಂದಿ ಸಾವನ್ನಪ್ಪಿದ್ದರು.

Share This Article