– ಭಾರತ-ಪಾಕ್ ಪಂದ್ಯ ರದ್ದಾದ್ರೆ 4,000 ಕೋಟಿ ರೂ. ಲಾಸ್
ಮುಂಬೈ: ಭಾರತದ ವಿರುದ್ಧ ಟಿ20 ವಿಶ್ವಕಪ್ (T20 World Cup) ಕ್ರಿಕೆಟ್ ಆಡಲು ಪಾಕಿಸ್ತಾನ ಮಂಡಿಸಿದ್ದ ಬೇಡಿಕೆಗಳನ್ನ ICC (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಸಾರಾ ಸಗಟಾಗಿ ತಿರಸ್ಕರಿಸಿದೆ. ಅಲ್ಲದೇ ಭಾರತದ ವಿರುದ್ಧ ಪಂದ್ಯವನ್ನಾಡುವ ಕುರಿತು ತನ್ನ ನಿರ್ಧಾರ ತಿಳಿಸಲು 24 ಗಂಟೆಗಳ ಗಡುವು ನೀಡಿದೆ.
ಪಾಕ್ ಬೇಡಿಕೆಗಳೇನು? – ಐಸಿಸಿ ಹೇಳಿದ್ದೇನು? (ಪ್ರಶ್ನೋತ್ತರ)
* ಪಾಕ್: ಟಿ20 ವಿಶ್ವಕಪ್ ಆಡದಿದ್ದರೂ ಬಾಂಗ್ಲಾದೇಶ ತನ್ನ ಸಂಪೂರ್ಣ ಐಸಿಸಿ ಆದಾಯದ ಪಾಲನ್ನ ಪಡೆಯಬೇಕು
ಐಸಿಸಿ: ಇದನ್ನ ಈಗಾಗಲೇ ನಿರ್ಧಾರ ಮಾಡಲಾಗಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ದಂಡ ವಿಧಿಸಲಾಗುವುದಿಲ್ಲ.
* ಪಾಕ್: ಮುಂದಿನ ಋತುಗಳಲ್ಲಿ ಬಾಂಗ್ಲಾದೇಶಕ್ಕೆ ಹೆಚ್ಚುವರಿ ಐಸಿಸಿ ಕಾರ್ಯಕ್ರಮ ನೀಡಬೇಕು
ಐಸಿಸಿ: ಮುಂದಿನ ಋತುಗಳಲ್ಲಿ ಅಂಡರ್-19 ವಿಶ್ವಕಪ್ಗೆ ಬಾಂಗ್ಲಾದೇಶವನ್ನ ಪರಿಗಣಿಸಲಾಗುತ್ತದೆ.
* ಪಾಕ್: ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಪ್ರಾರಂಭಿಸಲು ಐಸಿಸಿ ಮಧ್ಯಪ್ರವೇಶಿಸಬೇಕು.
ಐಸಿಸಿ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಋತು ಒಳಗೊಂಡಂತೆ ದ್ವಿಪಕ್ಷೀಯ ಸರಣಿಗಳು ತನ್ನ ಆದೇಶದ ವ್ಯಾಪ್ತಿಯಿಂದ ಹೊರಗಿದೆ ಎಂದು ಹೇಳುವ ಮೂಲಕ 3ನೇ ಬೇಡಿಕೆಯೂ ತಿರಸ್ಕಾರ.
* ಪಾಕ್: ಭಾರತ-ಪಾಕಿಸ್ತಾನ-ಬಾಂಗ್ಲಾದೇಶ ತ್ರಿವಳಿ ಸರಣಿ ನಡೆಸುವಂತೆ ಒತ್ತಾಯ
ಐಸಿಸಿ: ನ್ಯಾಯವ್ಯಾಪ್ತಿಯ ಕೊರತೆ ಉಲ್ಲೇಖಿಸಿ ಪ್ರಸ್ತಾವನೆ ತಿರಸ್ಕರಿಸಲಾಯಿತು.
* ಪಾಕ್: 2026 ರಲ್ಲಿ ಬಾಂಗ್ಲಾದೇಶದ ಭಾರತ ಪ್ರವಾಸ ಖಚಿತಪಡಿಸಿಕೊಳ್ಳಲು ಐಸಿಸಿ ಮಧ್ಯಸ್ಥಿಕೆ ವಹಿಸಬೇಕು
ಐಸಿಸಿ: ಪ್ರವಾಸಗಳನ್ನ ದ್ವಿಪಕ್ಷೀಯವಾಗಿ ನಿರ್ಧರಿಸಲಾಗುತ್ತದೆ, ಇದರಲ್ಲಿ ಐಸಿಸಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
24 ಗಂಟೆ ಡೆಡ್ಲೈನ್
ಇನ್ನೂ ಭಾರತ ಮತ್ತು ಪಾಕಿಸ್ತಾನ (India Vs Pakistan) ನಡುವಿನ ಪಂದ್ಯದ ಆಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಐಸಿಸಿ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ಗೆ 24 ಗಂಟೆಗಳ ಕಾಲಾವಕಾಶ ನೀಡಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಪಾಕಿಸ್ತಾನದ ಪ್ರಧಾನಿಯನ್ನು ಸಂಪರ್ಕಿಸಲು ಕೇಳಿದ ಬಳಿಕ ಕಾಲಾವಕಾಶ ನೀಡಿದೆ. ಒಂದು ವೇಳೆ ಪಾಕ್ ಪಂದ್ಯ ಬಹಿಷ್ಕರಿಸಿದ್ರೆ, ಭಾರೀ ದಂಡ ತೆರಬೇಕಾಗುತ್ತದೆ ಎಂದು ಐಸಿಸಿ ಎಚ್ಚರಿಸಿದೆ.
ಪಂದ್ಯ ರದ್ದಾದ್ರೆ 4,000 ಕೋಟಿ ಲಾಸ್
ವರದಿಗಳ ಪ್ರಕಾರ, ಭಾರತ ಮತ್ತು ಪಾಕ್ ನಡುವಿನ ಪಂದ್ಯ ರದ್ದಾದ್ರೆ ವ್ಯಾವಹಾರಿಕಾ ದೃಷ್ಟಿಯಿಂದ ಸುಮಾರು 4,000 ಕೋಟಿ ರೂ. ಲಾಸ್ ಆಗಲಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಹೀಗಾಗಿ ಬಿಕ್ಕಟ್ಟು ಬಗೆಹರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿರಂತರ ಸಭೆಯಲ್ಲಿ ತೊಡಗಿಸಿಕೊಂಡಿವೆ ಎಂದು ವರದಿಗಳು ತಿಳಿಸಿವೆ.


