ಬಾಂಗ್ಲಾ ಚುನಾವಣೆ | ಎಲ್ಲಾ ಪಕ್ಷಗಳಿಗೂ ಹೊಸ ಆರಂಭ – ಇನ್ನಾದ್ರೂ ಬದಲಾಗುತ್ತಾ ದೇಶದ ಭವಿಷ್ಯ?

4 Min Read

ಬಾಂಗ್ಲಾದೇಶದಲ್ಲಿ ಫೆ.12 ರಂದು ಚುನಾವಣೆ (angladesh Elections) ನಡೆಯಲಿದೆ. ಅದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆದಿದೆ. 13ನೇ ರಾಷ್ಟ್ರೀಯ ಚುನಾವಣೆಯಲ್ಲಿ 298 ಸ್ಥಾನಗಳಿಗೆ ಸುಮಾರು 2,000 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಈ ಚುನಾವಣೆ, ಈ ಹೊತ್ತಲ್ಲೇ ಹೆಚ್ಚುತ್ತಿರುವ ಹಿಂಸಾಚಾರ, ದೇಶದ ಭವಿಷ್ಯದ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ. 

ಬಾಂಗ್ಲಾದ ಮೊದಲ ನ್ಯಾಯಯುತ ಚುನಾವಣೆ
ಪ್ರಮುಖ ಪಕ್ಷಗಳಲ್ಲಿ, ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷ (ಬಿಎನ್‌ಪಿ) 288 ಸ್ಥಾನಗಳಿಗೆ, ಜಮಾತ್-ಇ-ಇಸ್ಲಾಮಿ 224 ಸ್ಥಾನಗಳಿಗೆ ಮತ್ತು ರಾಷ್ಟ್ರೀಯ ನಾಗರಿಕ ಪಕ್ಷ 32 ಸ್ಥಾನಗಳಿಗೆ ಸ್ಪರ್ಧಿಸುತ್ತಿವೆ. 17 ವರ್ಷಗಳಲ್ಲಿ ಬಾಂಗ್ಲಾದೇಶದ ಮೊದಲ ಮುಕ್ತ ಮತ್ತು ನ್ಯಾಯಯುತ ಚುನಾವಣೆಯು ಸಾಂವಿಧಾನಿಕ ಜನಾಭಿಪ್ರಾಯ ಸಂಗ್ರಹಣೆಯೊಂದಿಗೆ ನಡೆಯಲಿದೆ ಎಂದು ಅಲ್ಲಿನ ಮೊಹಮ್ಮದ್‌ ಯೂನಸ್‌ (Muhammad Yunus) ನೇತೃತ್ವದ ಸರ್ಕಾರ ಹೇಳಿಕೊಂಡಿದೆ. 

– ಚುನಾವಣೆ ತಯಾರಿ ಹೇಗಿದೆ? 
ಬಿಎನ್‌ಪಿ – ತಾರಿಕ್ ರೆಹಮಾನ್
ಬಾಂಗ್ಲಾ ಚುನಾವಣೆಯಲ್ಲಿ ಬಿಎನ್‌ಪಿ ಗಣನೀಯ ಪ್ರಮಾಣದ ಮತಗಳನ್ನು ಸೆಳೆಯುವ ನಿರೀಕ್ಷೆಯಿದೆ. ಮಾಜಿ ಮುಖ್ಯಸ್ಥೆ ಖಲೀದಾ ಜಿಯಾ ಅವರ ಮರಣದ ನಂತರ, ಪ್ರಸ್ತುತ ಪಕ್ಷದ ಮುಖ್ಯಸ್ಥನಾಗಿರುವ ತಾರಿಕ್ ರೆಹಮಾನ್ (Tarique Rahman) ಸ್ವದೇಶಕ್ಕೆ ಮರಳಿರುವುದರಿಂದ ಪಕ್ಷ ಮತ್ತಷ್ಟು ಬಲಗೊಂಡಿದೆ. 298 ಸ್ಥಾನಗಳಲ್ಲಿ 288 ಸ್ಥಾನಗಳನ್ನು ಗುರಿಯಾಗಿಟ್ಟುಕೊಂಡು ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಜನವರಿ 22 ರಂದು ಪ್ರಚಾರ ಪ್ರಾರಂಭಿಸಿದ ರೆಹಮಾನ್, ಢಾಕಾ, ಸಿಲ್ಹೆಟ್, ಮೌಲ್ವಿಬಜಾರ್, ಹಬಿಗಂಜ್ ಮತ್ತು ಕಿಶೋರ್‌ಗಂಜ್‌ನಂತಹ ಪ್ರಮುಖ ಕ್ಷೇತ್ರಗಳಲ್ಲಿ ರ‍್ಯಾಲಿ ನಡೆಸಿದ್ದಾರೆ. 

ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಅಧ್ಯಕ್ಷ ತಾರಿಕ್‌ ರೆಹಮಾನ್‌ ತಮ್ಮ ಚುನಾವಣಾ ಭಾಷಣಗಳಲ್ಲಿ ಪರೋಕ್ಷವಾಗಿ ಭಾರತಕ್ಕೆ ಟಾಂಗ್‌ ನೀಡುತ್ತಿದ್ದಾರೆ. ಮಾಜಿ ಪ್ರಧಾನಿ ಮತ್ತು ಸದ್ಯ ಭಾರತದಲ್ಲಿ (India) ಆಶ್ರಯ ಪಡೆದಿರುವ ಶೇಖ್‌ ಹಸೀನಾ (Sheikh Hasina) ಅವರ ಆಡಳಿತವನ್ನು ಟೀಕಿಸುತ್ತಾ, ನೆರೆಯ ದೇಶಗಳಿಗೆ ಶರಣಾಗುವ ಮೂಲಕ ಶೇಖ್‌ ಹಸೀನಾ ಬಾಂಗ್ಲಾದೇಶದ ಗೌರವವನ್ನು ಮಣ್ಣುಪಾಲು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. 

ಇವೆಲ್ಲದರ ನಡುವೆ ಈ ಚುನಾವಣೆಯಲ್ಲಿ ಗೆಲುವು ಸಾಧಿಸಲು, ಅಲ್ಪಸಂಖ್ಯಾತ ಅದರಲ್ಲೂ ಬಹುಮುಖ್ಯವಾಗಿ ಹಿಂದೂ ಸಮುದಾಯದ ವಿರುದ್ಧ ಹಿಂಸಾಚಾರವನ್ನು ಹೆಚ್ಚಿಸಲು ಯೋಜಿತ ಪಿತೂರಿ ನಡೆದಿದೆ ಎಂದು ಗುಪ್ತಚರ ಮೂಲಗಳ ತಿಳಿಸಿದೆ. ಅದರಂತೆ, ಹಲವು ರಾಜಕಾರಣಿಗಳು, ಹಿಂದೂ ವಿರೋಧಿ ವಾಕ್ಚಾತುರ್ಯವನ್ನು ಚುನಾವಣಾ ವಿಷಯವನ್ನಾಗಿ ಮಾಡುವ ಮೂಲಕ ಮತಗಳನ್ನು ಧ್ರುವೀಕರಿಸಲು ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಬಾಂಗ್ಲಾದೇಶದಲ್ಲಿನ ಹಿಂದೂಗಳು ಭಾರತದ ಪರವಾಗಿದ್ದಾರೆ. ಆದ್ದರಿಂದ ಅವರಿಗೆ ದೇಶದಲ್ಲಿ ವಾಸಿಸುವ ಹಕ್ಕಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ ಮಾತಿನಿಂದ ಜಮಾತೆ-ಇ-ಇಸ್ಲಾಮಿ ಗಮನಾರ್ಹವಾಗಿ ಲಾಭ ಪಡೆಯುತ್ತಿದೆ ಎನ್ನಲಾಗಿದೆ. 

ಜಮಾತ್-ಎನ್‌ಸಿಪಿ ಮೈತ್ರಿ 
ಇಸ್ಲಾಮಿಸ್ಟ್ ಜಮಾತ್-ಎ-ಇಸ್ಲಾಮಿ ವಿಶೇಷವಾಗಿ ಕಳೆದ ವರ್ಷ ಅನೇಕ ವಿದ್ಯಾರ್ಥಿ ಸಂಘ ಚುನಾವಣೆಗಳಲ್ಲಿ ಭರ್ಜರಿ ಜಯಗಳಿಸಿದೆ. ಇದರಿಂದ ಈ ಚುನಾವಣೆಯ ಗೆಲುವಿನ ಲೆಕ್ಕಾಚಾರದಲ್ಲಿ ಜಮಾತ್-ಎನ್‌ಸಿಪಿ  ಭರವಸೆ ಇಟ್ಟಿವೆ. ಆರಂಭದಲ್ಲಿ 162 ಆದ್ಯತೆಯ ಸ್ಥಾನಗಳಲ್ಲಿ ಸ್ಪರ್ಧಿಸುವ ಬಗ್ಗೆ ಯೋಚಿಸುತ್ತಿತ್ತು. ಈಗ 224 ಸ್ಥಾನಗಳಲ್ಲಿ ಸ್ಪರ್ಧಿಸಲು ಮುಂದಾಗಿದ್ದು, ಮತ್ತಷ್ಟು ವಿಶ್ವಾಸ ಹೆಚ್ಚಾಗಿದ್ದನ್ನು ತೋರಿಸುತ್ತಿದೆ. 

ಬಾಂಗ್ಲಾದೇಶದ ವಲಸೆಗಾರರಾದ ಗಲ್ಫ್ ಮೂಲದ ಮತದಾರರನ್ನು ಗುರಿಯಾಗಿಸಲು ನೋಡುತ್ತಿದೆ. ಇದರೊಂದಿಗೆ ವಲಸಿಗರ ಅಂಚೆ ಮತಗಳು ಜಮಾತ್‌ಗೆ ನಿರ್ಣಾಯಕವಾಗಿವೆ.

ಭಾರತಕ್ಕೆ ಜಮಾತ್ ಪ್ರಮುಖ ಅಪಾಯಕಾರಿಯಾಗಿದೆ. ಅದರ ಇಸ್ಲಾಮಿಸ್ಟ್ ಸಿದ್ಧಾಂತ ಮತ್ತು ಪಾಕಿಸ್ತಾನಕ್ಕೆ ಅದರ ಐತಿಹಾಸಿಕ ನಿಕಟತೆಯ ಹೊರತಾಗಿಯೂ ಅಮೆರಿಕ ಜಮಾತ್‌ಗೆ ಬೆಂಬಲಿಸಿದೆ ಎಂದು ವರದಿಯಾಗಿದೆ.  

ನಕಲಿ ಚುನಾವಣೆ!
ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್‌ ಹಸಿನಾ ಈ ಬಗ್ಗೆ ಪ್ರತಿಕ್ರಿಯಿಸಿ ನಡೆಯಲಿರುವ ಚುನಾವಣೆ ನಕಲಿ ಎಂದು ಟೀಕಿಸಿದ್ದಾರೆ. ತಮ್ಮ ಪಕ್ಷ ಅವಾಮಿ ಲೀಗ್‌ನ್ನು ನಿಷೇಧಿಸಿರುವುದನ್ನು ಅವರು ವಿರೋಧಿಸಿದ್ದಾರೆ.  

ಹಸೀನಾ ಅವರ ಹೇಳಿಕೆಗೆ ಮಧ್ಯಂತರ ಸರ್ಕಾರ ಇದು ʻದ್ವೇಷ ಭಾಷಣʼ ಎಂದು ಕರೆದಿದೆ. ಇದು ಭವಿಷ್ಯದಲ್ಲಿ ಚುನಾಯಿತ ಸರ್ಕಾರವು ಭಾರತದೊಂದಿಗೆ ತೊಡಗಿಸಿಕೊಳ್ಳುವ ಸಾಮರ್ಥ್ಯವನ್ನು ಗಂಭೀರವಾಗಿ ದುರ್ಬಲಗೊಳಿಸಬಹುದು ಎಂದು ಹೇಳಿಕೊಂಡಿದೆ. 

ನ್ಯಾಯಸಮ್ಮತ ಮತ್ತು ಪಾರದರ್ಶಕವಾದ ಚುನಾವಣೆ ನಡೆಯದಿದ್ದರೆ, ಬಾಂಗ್ಲಾದೇಶವು ದೀರ್ಘಕಾಲದ ಅಸ್ಥಿರತೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ಇ-ಮೇಲ್‌ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. 

ತಮ್ಮ ಪಕ್ಷವನ್ನು ನಿಷೇಧಿಸುವ ಮೂಲಕ ಲಕ್ಷಾಂತರ ಬೆಂಬಲಿಗರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಬಹುಪಾಲು ಜನರ ರಾಜಕೀಯ ಭಾಗವಹಿಸುವಿಕೆಯನ್ನು ತಡೆಯಲಾಗುತ್ತಿದೆ. ಇದು ಭವಿಷ್ಯದಲ್ಲಿ ಅಸ್ಥಿರತೆಯನ್ನು ಸೃಷ್ಟಿಸುತ್ತದೆ. ಒಂದಿಷ್ಟು ಜನರನ್ನು ಹೊರಗಿಡುವ ಮೂಲಕ ಹುಟ್ಟಿದ ಸರ್ಕಾರದಿಂದ ವಿಭಜಿತ ರಾಷ್ಟ್ರ ಒಗ್ಗೂಡಲು ಸಾಧ್ಯವಿಲ್ಲ ಎಂದಿದ್ದಾರೆ.

Gen-Z ಬಯಸೋದೇನು?  
2026 ರ ಚುನಾವಣೆಗಳಿಂದ ಬಾಂಗ್ಲಾದೇಶದ Gen-Z ನಿಜವಾಗಿಯೂ ಏನನ್ನು ಬಯಸುತ್ತದೆ ಎಂಬ ಬಗ್ಗೆ ಯುವ ಮತದಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಉದ್ಯೋಗಗಳು, ಶಿಕ್ಷಣ ಸುಧಾರಣೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವುದು, ಸುರಕ್ಷತೆ, ಯುವ ಸಬಲೀಕರಣ ಮತ್ತು ಪ್ರಜಾಪ್ರಭುತ್ವದ ಹೊಣೆಗಾರಿಕೆವರೆಗೆ ವಿವಿಧ ವಿಷಯಗಳ ಕುರಿತು ಮಾತನಾಡಿದ್ದಾರೆ.

ಭಾರತದ ಅಧಿಕಾರಿಗಳ ವಾಪಸ್‌ಗೆ ನಿರ್ಧಾರ 
ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವಂತೆಯೇ ದೇಶದಲ್ಲಿ ಹೆಚ್ಚುತ್ತಿರುವ ತೀವ್ರಗಾಮಿ ಚಟುವಟಿಕೆಗಳನ್ನು ಗಮನಿಸಿ, ಭದ್ರತಾ ಹಿತದೃಷ್ಟಿಯಿಂದ ತನ್ನ ರಾಯಭಾರ ಅಧಿಕಾರಿಗಳ ಕುಟುಂಬಗಳನ್ನು ಮರಳಿ ಕರೆಸಿಕೊಳ್ಳಲು ಭಾರತ ನಿರ್ಧರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹುಸೈನ್, ‘ಅಧಿಕಾರಿಗಳು ಅಥವಾ ಕುಟುಂಬಗಳಿಗೆ ಬೆದರಿಕೆ ಒಡ್ಡುವಂತಹ ಯಾವುದೇ ಪರಿಸ್ಥಿತಿ ಸೃಷ್ಟಿಯಾಗಿಲ್ಲ. ಆದಾಗ್ಯೂ, ಕುಟುಂಬಗಳನ್ನು ಮರಳಿ ಕರೆಸಿಕೊಳ್ಳುವುದು ಭಾರತದ ಆಂತರಿಕ ವಿಚಾರವಾಗಿದೆ. ಈ ಮೂಲಕ ಭಾರತ ಯಾವುದೋ ಸಂದೇಶ ನೀಡಲು ಬಯಸಿರಬಹುದು. ಆದರೆ, ನಮಗೆ ಯಾವ ಸ್ಪಷ್ಟ ಕಾರಣಗಳೂ ಕಂಡುಬಂದಿಲ್ಲ ಎಂದಿದ್ದಾರೆ.

Share This Article