ರಾಜ್ಯ ಸರ್ಕಾರದ ಯೋಜನೆಗೆ ಪಂಚಾಯತ್‌ಗಳು ವಿರೋಧಿಸಿ ಜಾಹೀರಾತು ನೀಡಿದ್ರೆ ಒಪ್ಪುತ್ತೀರಾ? – ಸದನದಲ್ಲಿ ಕೋಲಾಹಲ

2 Min Read

– ಕೇಂದ್ರದ ವಿಬಿಜಿರಾಮ್‌ಜಿ ಕಾಯ್ದೆ ವಿರುದ್ಧ ರಾಜ್ಯ ಸರ್ಕಾರದಿಂದ ಜಾಹೀರಾತು
– ಬಿಜೆಪಿ, ಕಾಂಗ್ರೆಸ್‌ ಸದಸ್ಯರ ಮಧ್ಯೆ ವಾಕ್ಸಮರ, ಸಭಾತ್ಯಾಗ

ಬೆಂಗಳೂರು: ಕೇಂದ್ರದ ವಿಬಿಜಿರಾಮ್‌ಜಿ ಕಾಯ್ದೆ (VB-G RAM G Act) ವಿರುದ್ಧ ರಾಜ್ಯ ಸರ್ಕಾರ ದಿನಪತ್ರಿಕೆಗಳಲ್ಲಿ ಕೊಟ್ಟಿರುವ ಜಾಹೀರಾತು (Advertisement) ಇವತ್ತು ವಿಧಾನಸಭೆಯಲ್ಲಿ ಗದ್ದಲ ಕೋಲಾಹಲ ಸೃಷ್ಟಿಸಿ ವಿಪಕ್ಷ ಸದಸ್ಯರ ಸಭಾತ್ಯಾಗಕ್ಕೆ ವೇದಿಕೆ ಒದಗಿಸಿತ್ತು.

ವಿಷಯ ಪ್ರಸ್ತಾಪಿಸಿ ಮಾತನಾಡಿದ ಶಾಸಕ ಸುರೇಶ್ ಕುಮಾ‌ರ್ (Suresh Kumar), ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾಯ್ದೆಯ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಈ ಜಾಹೀರಾತು ನೀಡಲಾಗಿದೆ. ಇದು ಜನರ ತೆರಿಗೆಯ ಲೂಟಿ. ಸೇಡಿನ ರಾಜಕೀಯ. ತೆರಿಗೆ ಹಣ ಬಳಸಿರುವುದು ಸರಿಯಲ್ಲ. ಪಕ್ಷದ ವತಿಯಿಂದ ಬೇಕಿದ್ದರೆ ಜಾಹೀರಾತು ನೀಡಲಿ ಎಂದು ಆಕ್ಷೇಪ ಎತ್ತಿದರು.

ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಒಪ್ಪಿಕೊಳ್ಳಬೇಕು. ರಾಜ್ಯ ಸರಕಾರ ಜಾರಿಗೆ ತಂದಿರುವ ಯಾವುದೋ ಯೋಜನೆ, ಕಾಯ್ದೆಗಳಿಗೆ ಬಿಜೆಪಿ ಬೆಂಬಲಿತ ಗ್ರಾಪಂಗಳು, ನಗರ ಸಭೆಗಳು, ಜಿಲ್ಲಾ ಪಂಚಾಯತ್ ಗಳು ವಿರೋಧಿಸಿ ಜಾಹೀರಾತು ಕೊಟ್ಟರೆ ಸರಕಾರ ಒಪ್ಪುತ್ತದೆಯೇ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು.  ಇದನ್ನೂ ಓದಿ: ಕರ್ನಾಟಕ ಪೊಲೀಸರಿಗೆ ರಜೆ ಭಾಗ್ಯ – ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ

 

ಇದು ಆಡಳಿತ ಪಕ್ಷದ ಸದಸ್ಯರನ್ನು ಕೆರಳಿಸಿತ್ತು. ಸಚಿವ ದಿನೇಶ್ ಗುಂಡೂರಾವ್ ಮಾತಾಡಿ, ನಮಗೆ ಕೇಂದ್ರ ಸರಕಾರದಿಂದ ಬರಬೇಕಿದ್ದ ಹಣವನ್ನು ಸುಪ್ರೀಂ ಕೋರ್ಟ್ ಮೂಲಕ ತರಬೇಕಾಗುತ್ತದೆ. ಆಗ ನಿಮಗೆ ಒಕ್ಕೂಟ ವ್ಯವಸ್ಥೆ ನೆನಪಾಗುವುದಿಲ್ಲ. ಕರ್ನಾಟಕಕ್ಕೆ ಅನ್ಯಾಯ ಆಗುತ್ತದೆ. ಆಗ ನಿಮಗೆ ಒಕ್ಕೂಟ ವ್ಯವಸ್ಥೆ ನೆನಪಾಗುವುದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಜಾಹೀರಾತಿಗೆ ಸಂಬಂಧಿಸಿ ಸ್ಪಷ್ಟಿಕರಣ ನೀಡಲು ಮುಂದಾಗುತ್ತಿದ್ದಂತೆ ವಿಪಕ್ಷ ಬಿಜೆಪಿಗರು ಅಡ್ಡಿಪಡಿಸಿದರು. ಬಳಿಕ ಆಡಳಿತ-ವಿಪಕ್ಷ ಸದಸ್ಯರ ಮಧ್ಯೆ ಕೋಲಾಹಲ ಮುಂದುವರಿದ ಹಿನ್ನೆಲೆಯಲ್ಲಿ ಸ್ಪೀಕ‌ರ್ ಯು.ಟಿ.ಖಾದರ್ ಅವರು ಸದನವನ್ನು ಮುಂದೂಡಿದರು.

ಮತ್ತೆ ಕಲಾಪ ಸೇರಿದಾಗಲೂ ಗದ್ದಲ ಮುಂದುವರೆಯಿತು. ಆರ್ ಅಶೋಕ್ ಮಾತಾಡಿ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ಸುಖಾಸುಮ್ಮನೆ ತೆರಿಗೆ ಭಯೋತ್ಪಾದನೆಯ ಆರೋಪ ಮಾಡುತ್ತಿದೆ. ಇದು ಕೇವಲ ರಾಜಕೀಯ ಪ್ರೇರಿತ ಆಟವಾಗಿದ್ದು, ರಾಜ್ಯ ಮತ್ತು ಕೇಂದ್ರದ ನಡುವಿನ ಸಂಬಂಧ ಹಾಳು ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಜಾಹೀರಾತು ಕೊಟ್ಟ ಹಿನ್ನೆಲೆಯಲ್ಲಿ ಸಭಾತ್ಯಾಗ ಮಾಡುವುದಾಗಿ ಅಶೋಕ್‌ ಪ್ರಕಟಿಸಿದರು. ಕೊನೆಗೆ ವಿಪಕ್ಷ ಸದಸ್ಯರು ವಿಧಾನಸಭೆಯಿಂದ ಸಭಾತ್ಯಾಗ ಮಾಡಿದರು. ವಿಪಕ್ಷಗಳ ಸಭಾತ್ಯಾಗದ ಬಳಿಕ ಜಾಹೀರಾತು ಕೊಟ್ಟಿದ್ದನ್ನು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

Share This Article