ಬಳ್ಳಾರಿ: ಬ್ಯಾನರ್ ಗಲಭೆ (Ballari Clash) ಬಳಿಕ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದ ಸರ್ಕಾರ ಇದೀಗ ದಿಢೀರನೇ ವರ್ಗಾವಣೆ ಮಾಡಿದ್ದ ಡಿವೈಎಸ್‌ಪಿ (DySP) ಅವರನ್ನೇ ಮತ್ತೇ ಮುಂದುವರೆಸಿದೆ.
ಘಟನೆ ನಡೆದ ಮಾರನೇ ದಿನವೇ ಎಸ್ಪಿ ಪವನ್ ನೆಜ್ಜೂರ್ ಅವರನ್ನ ಸಸ್ಪೆಂಡ್ ಮಾಡಿತ್ತು. ಡಿಐಜಿ ಆಗಿದ್ದ ವರ್ತಿಕಾ ಕಟಿಯಾರ್ ಅವರ ವರ್ಗಾವಣೆಯೂ ಆಗಿತ್ತು. ಆ ಬಳಿಕ ಮಂಗಳವಾರ(ಜ.27) ಡಿವೈಎಸ್‌ಪಿ ಚಂದ್ರಕಾಂತ ನಂದಾರೆಡ್ಡಿ (Chandrakant Nandareddy) ಅವರನ್ನು ಸ್ಥಳ ತೋರಿಸದೇ ವರ್ಗಾವಣೆ ಮಾಡಿ ಅವರ ಜಾಗಕ್ಕೆ 2023ರ ಬ್ಯಾಚ್ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ ಅವರನ್ನು ನೇಮಕ ಮಾಡಿ ಆದೇಶಿಸಲಾಗಿತ್ತು. ಇದನ್ನೂ ಓದಿ: ಬಳ್ಳಾರಿ ಜೀನ್ಸ್ ಪಾರ್ಕ್ ನಿರ್ಮಾಣಕ್ಕೆ ಮತ್ತಷ್ಟು ವೇಗ – KIADB ನಿಂದ 154 ಎಕ್ರೆ ಜಮೀನು ಸ್ವಾಧೀನ
ಯಶ್ ಕುಮಾರ್ ಶರ್ಮಾ ಅಧಿಕಾರ ಸ್ವೀಕಾರ ಮಾಡುವ ಮುನ್ನವೇ ನಂದಾರೆಡ್ಡಿ ಅವರನ್ನು ಸರ್ಕಾರ ವಾಪಸ್ ಕರೆಸಿಕೊಳ್ಳಲಾಗಿದೆ. ಈ ಮೂಲಕ ಸರ್ಕಾರದ ಆದೇಶದ ಮೇರೆಗೆ ಚಾರ್ಜ್ ತೆಗೆದುಕೊಳ್ಳಲು ಬಂದಿದ್ದ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮಾಗೆ ತೀವ್ರ ಮುಜುಗರ ಆಗಿದ್ದು, ಕೇಂದ್ರ ಸ್ಥಾನಕ್ಕೆ ರಿಪೋರ್ಟ್ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಬ್ಯಾನರ್ ಗಲಭೆಗೆ ಸಂಬಂಧಿಸಿದಂತೆ ಪೊಲೀಸ್ ವೈಫಲ್ಯ ಎಂದು ಸರ್ಕಾರಕ್ಕೆ ಎಡಿಜಿಪಿ ಆರ್. ಹಿತೇಂದ್ರ ಸ್ಪಷ್ಟ ವರದಿ ಕೊಟ್ಟಿದ್ದ ಹಿನ್ನೆಲೆ ಡಿವೈಎಸ್ಪಿ ನಂದಾರೆಡ್ಡಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಮತ್ತೇ ಚಂದ್ರಕಾಂತ ನಂದಾರೆಡ್ಡಿ ಅವರನ್ನ ಮುಂದುವರಿಸಿದ್ದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

