ರಾಜ್ಯ ಸರ್ಕಾರದ ವಿರುದ್ಧ ಫೋನ್ ಟ್ಯಾಪಿಂಗ್ ಆರೋಪ; ಸದನದಲ್ಲಿ ಗದ್ದಲ – ಕೋಲಾಹಲ

2 Min Read

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಮತ್ತೆ ಫೋನ್ ಟ್ಯಾಪಿಂಗ್ (Phone Tapping) (ಫೋನ್‌ ಕದ್ದಾಲಿಕೆ) ವಿಚಾರ ಸದ್ದು ಮಾಡಿದೆ.

ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆ ವೇಳೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ (HK Patil) ಮಾತನಾಡಿ, ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದಂತೆ ರಾಜ್ಯಪಾಲರಿಗೆ ದೆಹಲಿ ಬಿಜೆಪಿ ಕಚೇರಿಯಿಂದ ಫೋನ್ ಬಂದಿತ್ತು ಅಂತ ಆರೋಪಿಸಿದ್ರು. ಇದಕ್ಕೆ ಬಿಜೆಪಿ ನಾಯಕರಾದ ಆರ್.ಅಶೋಕ್, ಸುನೀಲ್ ಕುಮಾರ್, ಸುರೇಶ್ ಕುಮಾರ್ ಸೇರಿದಂತೆ ಹಲವರು ಕಾಂಗ್ರೆಸ್ ಮೇಲೆ ಮುಗಿಬಿದ್ರು.

ರಾಜ್ಯಪಾಲರಿಗೆ ಬಿಜೆಪಿ ಕಚೇರಿಯಿಂದ (BJP Office) ಫೋನ್‌ಗಳು ಬಂದಿರೋದು ಸರ್ಕಾರಕ್ಕೆ ಹೇಗೆ ಗೊತ್ತಾಯ್ತು..? ಸರ್ಕಾರ ಫೋನ್ ಟ್ಯಾಪ್ ಮಾಡ್ತಿದೆಯಾ ಅಂತ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ರು.

ಸಿಎಂ ಸಿದ್ದರಾಮಯ್ಯ (Siddaramaiah) ಮಾತತಾಡಿ, ರಾಜ್ಯಪಾಲರು ರಾಷ್ಟ್ರಗೀತೆಗೂ ಮುನ್ನ ಹೋಗಿದ್ದೇಕೆ? ಅಂದ್ರು. ಇದಕ್ಕೆ ಶಾಸಕ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ, 2011 ರಲ್ಲಿ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣಕ್ಕೆ ಮುಂದಾಗಿದ್ದಾಗ ಸಿದ್ದರಾಮಯ್ಯ ಇದು ಭ್ರಷ್ಟ ಸರ್ಕಾರ ದಯಮಾಡಿ ಈ ಭಾಷಣ ಓದಬೇಡಿ ಅಂದಿದ್ರು ಅಂದರು.

ನಾನು ರಾಜ್ಯಪಾಲರಿಗೆ ಹಾಗೆ ಹೇಳಲಿಲ್ಲ. ಭಾಷಣ ಮಾಡ್ಬೇಡಿ ಅಂದಿಲ್ಲ. ಓದ್ಬೇಡಿ ಅಂದಿದ್ದೆ ಅಂತ ಸಿಎಂ ಹೇಳಿದ್ರು. ಜೊತೆಗೆ ನಾವು ಫೋನ್ ಟ್ಯಾಪಿಂಗ್ ಮಾಡಲ್ಲ ಅಂದರು. ಸದನದಲ್ಲಿ ಜಟಾಪಟಿ ನಡೀತು. ಇನ್ನೂ, ರಾಜ್ಯಪಾಲರ ಬಗ್ಗೆ ಯಾರು ಮಾತನಾಡಬಾರದು ಅಂತ ಸ್ಪೀಕರ್ ಖಾದರ್ ರೂಲಿಂಗ್ ನೀಡಿದ್ಧಾರೆ.

ಪರಿಷತ್‌ನಲ್ಲೂ ಗದ್ದಲ – ಕೋಲಾಹಲ
ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ನಿನ್ನೆ ಶುರುವಾದ ಗದ್ದಲ ಇಂದು ಮುಂದುವರಿದಿತ್ತು. ಇಂದಿನ ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗೆ ಇಳಿದ ಬಿಜೆಪಿ ಜೆಡಿಎಸ್ ಸದಸ್ಯರು ಧರಣಿ ಮುಂದುವರಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ವಿರೋಧಿಸಿದರು. ರಾಜ್ಯಪಾಲರ ಭಾಷಣದ ನಿಂದನೆ – ವಂದನೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎರಡು ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಇದು ವಂದನೆನಾ.? ಖಂಡನೆನಾ…? ಎಂದು ವಿಪಕ್ಷ ಸದಸ್ಯರು ಪಟ್ಟು ಹಿಡಿದರು.

ಛಲವಾದಿ ನಾರಾಯಣಸ್ವಾಮಿ ವಂದನೆ ಮೊದಲು ಖಂಡನೆ ಮಾಡಿದ್ದಾರೆ. ಅದಕ್ಕೆ ವಿಷಾದ ವ್ಯಕ್ತಪಡಿಸಲಿ ಎಂದು ಡಾ.ಯತೀಂದ್ರ ಪಟ್ಟು ಹಿಡಿದರು. ಎರಡೆರಡು ಬಾರಿ ಕಲಾಪ ಮುಂದೂಡಿಕೆ ಆಯ್ತು. ನಂತರ ಗರಂ ಆದ ಸಭಾಪತಿ, ಸದನದ ಬಾವಿಯಲ್ಲಿ ನಿಂತು ಧಿಕ್ಕಾರ ಕೂಗಬೇಡಿ ಹಾಗೆ ಮಾಡಿದ್ರೆ ನಾನು ನಿಮ್ಮನ್ನು ಹೊರ ಹಾಕ್ತೀನಿ ಅಂದರು. ಇನ್ನು, ಸಭಾಪತಿಗಳು ಸದನ ಸರಿಯಾಗಿ ನಡೆಸ್ತಿಲ್ಲ ಅಂತ ಛಲವಾದಿ ನಾರಾಯಣಸ್ವಾಮಿ ರೂಲ್‌ಬುಕ್ ಹರಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸಿಗರು ಛಲವಾದಿ ನಾರಾಯಣಸ್ವಾಮಿ ಕ್ಷಮೆ ಕೇಳಬೇಕು ಅಂತ ಆಗ್ರಹಿಸಿದರು.

Share This Article