ರಾಜ್ಯದಲ್ಲಿ ಸಾಮಾಜಿಕ, ರಾಜಕೀಯ ಚೈತನ್ಯ ಉದಯಿಸುತ್ತಿದೆ: ಗೆಹ್ಲೋಟ್‌

3 Min Read

– ಕೇಂದ್ರದ ವಿರುದ್ಧ ಯಾವುದೇ ಆರೋಪ ಇಲ್ಲದೇ ಭಾಷಣ ಮುಕ್ತಾಯ

ಬೆಂಗಳೂರು: ರಾಜ್ಯ ಸರ್ಕಾರ ಪ್ರಾದೇಶಿಕ ಅಸಮಾನತೆಗಳನ್ನು ಹೋಗಲಾಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಇದರ ಮೂಲಕ ಕರ್ನಾಟಕದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಚೈತನ್ಯ ಉದಯಿಸುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಹೇಳಿದ್ದಾರೆ.

77ನೇ ಗಣರಾಜ್ಯೋತ್ಸವದ (Republic Day 2026) ಅಂಗವಾಗಿ ಮಾಣೆಕ್‌ ಷಾ ಪರೇಡ್ ಮೈದಾನದಲ್ಲಿ (Manekshaw Parade Ground) ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಈ ವೇಳೆ, ಕರ್ನಾಟಕ ಸರ್ಕಾರವು ಸಂವಿಧಾನ ಪ್ರಸ್ತಾಪಿಸಿರುವ ಭಾತೃತ್ವ, ಸ್ವಾತಂತ್ರ ಹಾಗೂ ಸಮಾನತೆಯನ್ನು ಆದ್ಯತೆಯ ವಿಷಯಗಳನ್ನಾಗಿ ಪರಿಗಣಿಸಿದೆ. ರಾಜ್ಯದ ಪ್ರತಿ ಪ್ರದೇಶ ಹಾಗೂ ಪ್ರತಿ ಸಮುದಾಯಗಳ ಜನರ ಧ್ವನಿಗಳನ್ನು ಆಲಿಸಿ, ಅವುಗಳಿಗೆ ನ್ಯಾಯೋಚಿತ ಪರಿಹಾರ ನೀಡುವ ಕೆಲಸವನ್ನು ಮಾಡುತ್ತಿದೆ. ಸರ್ಕಾರದ ವಿವಿಧ ನೇಮಕಾತಿಗಳಲ್ಲಿ ಅಲಕ್ಷಿತರಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ವಿವಿಧ ಜನಸಮುದಾಯಗಳ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳಲು ಆಯೋಗಗಳನ್ನು ರಚಿಸಿ ಅವುಗಳ ಶಿಫಾರಸುಗಳನ್ನು ಜಾರಿ ಮಾಡಲಾಗುತ್ತಿದೆ. ಇದನ್ನೂ ಓದಿ: 77ನೇ ಗಣರಾಜ್ಯೋತ್ಸವ ಸಂಭ್ರಮ – ಬೆಂಗಳೂರಿನಲ್ಲಿ ರಾಜ್ಯಪಾಲ ಗ್ಲೆಹ್ಲೋಟ್‌ರಿಂದ ಧ್ವಜಾರೋಹಣ

ಸಂವಿಧಾನದ ಮುಖ್ಯ ಆಶಯದಂತೆ ಅತ್ಯಂತ ಹಿಂದುಳಿದ ಸಂವಿಧಾನದ ಮುಖ್ಯ ಹಿಂದುಳಿದವರ ಬಲವರ್ಧನೆಗಾಗಿ ರಾಜ್ಯದ ಜನರಿಗೆ ಆರ್ಥಿಕ ಚೈತನ್ಯ ನೀಡುವುದಕ್ಕಾಗಿ ರಾಜ್ಯವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜನ ಕಲ್ಯಾಣಗಳಿಗಾಗಿ ರಾಜ್ಯವು ವರ್ಷಕ್ಕೆ 1.12 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ 1.13 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವನ್ನು ವಿನಿಯೋಗಿಸಲಾಗಿದೆ. ಇದರ ಪರಿಣಾಮವಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ, ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತಿವೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಮಹಿಳಾ ಸಮುದಾಯದಲ್ಲಿ ಹೊಸ ಆರ್ಥಿಕ ಸಾಮಾಜಿಕ ಉತ್ಸಾಹ ಬಂದಿದೆ. ದೇಶದಲ್ಲಿ ಗ್ರಾಹಕ ಬೆಲೆ ಸೂಚ್ಯಂಕಗಳು ಆರೋಗ್ಯಕರವಾಗಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ ಎಂದು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಣ್ಣಿಸಿದ್ದಾರೆ.

ಸಾವಿರಾರು ವರ್ಷಗಳಿಂದ ರೂಪುಗೊಂಡಿದ್ದ ರಾಜಪ್ರಭುತ್ವ ಹಾಗೂ 17 ಶತಮಾನದಿಂದ ಅಸ್ತಿತ್ವಕ್ಕೆ ಬಂದಿದ್ದ ವಸಾಹತುಶಾಹಿ ಆಡಳಿತವನ್ನು ಕೊನೆಗೊಳಿಸಿ ಜನಪ್ರಭುತ್ವವನ್ನು ಪ್ರತಿಷ್ಠಾಪಿಸಿಕೊಂಡ ದಿನ. ತಾರತಮ್ಯವನ್ನು ಆಧರಿಸಿದ್ದ ವಸಾಹತುಶಾಹಿಯನ್ನು ಹಾಗೂ ಪುರಾತನ ಕಾನೂನುಗಳನ್ನು ಕಿತ್ತೆಸೆದು ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯದ ವಿಚಾರದಲ್ಲಿ ಎಲ್ಲರೂ ಸಮಾನರು ಎನ್ನುವ ನವ ಭಾರತದ ಪರಿಕಲ್ಪನೆಯ ಸಂವಿಧಾನವನ್ನು ಜಾರಿಗೊಳಿಸಿದ ದಿನ ಎಂದಿದ್ದಾರೆ.

ಗಣತಂತ್ರ ವ್ಯವಸ್ಥೆಯನ್ನು ರೂಪುಗೊಳಿಸಿಕೊಳ್ಳುವುದಕ್ಕಾಗಿ ಅಸಂಖ್ಯಾತ ಜನರು ತ್ಯಾಗ-ಬಲಿದಾನಗಳನ್ನು ಮಾಡಿದ್ದಾರೆ. ಅವರೆಲ್ಲರನ್ನೂ ಈ ಅಮೃತ ಗಳಿಗೆಯಲ್ಲಿ ಗೌರವಪೂರ್ವಕವಾಗಿ ಸ್ಮರಿಸೋಣ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಶತಶತಮಾನಗಳ ಕಾಲ ಹೋರಾಟ ಮಾಡಿ ನ್ಯಾಯ ಹಾಗೂ ಸ್ವಾತಂತ್ರ್ಯವನ್ನು ದಕ್ಕಿಸಿಕೊಟ್ಟಿದ್ದಾರೆ. ನಾವೆಲ್ಲರೂ ನಮ್ಮ ಹಿರಿಯರ ಶ್ರಮ ವ್ಯರ್ಥವಾಗದಂತೆ ಕಾಪಾಡಿಕೊಳ್ಳುವ ಪ್ರತಿಜ್ಞೆ ಮಾಡೋಣ ಎಂದು ಕರೆ ಕೊಟ್ಟಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವಾತಂತ್ರವನ್ನು, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವೆಂದು ಮೂರು ಮಾದರಿಗಳಲ್ಲಿ ವ್ಯಾಖ್ಯಾನಿಸಿದ್ದಾರೆ. “ನಾವು ಯಾವುದೇ ಕಾರಣಕ್ಕೂ ರಾಜಕೀಯ ಪ್ರಜಾಪ್ರಭುತ್ವದಿಂದ ಸಂತುಷ್ಟಗೊಳ್ಳಬಾರದು. ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವಾಗಿಸಬೇಕು. ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ, ಸ್ವಾತಂತ್ರ, ಸಮಾನತೆ ಮತ್ತು ಭಾತೃತ್ವವನ್ನು ಬದುಕಿನ ಸಿದ್ಧಾಂತವಾಗಿ ಗುರುತಿಸಿಕೊಂಡ ಒಂದು ಜೀವನ ಕ್ರಮವಾಗಿದೆ. ಸ್ವಾತಂತ್ರ ಸಮಾನತೆ ಮತ್ತು ಭ್ರಾತೃತ್ವದ ನಿಯಮಗಳನ್ನು ಪ್ರತ್ಯೇಕ ಅಂಶಗಳಾಗಿ ಪರಿಗಣಿಸಬಾರದು. ಇವುಗಳಲ್ಲಿ ಒಂದರಿಂದ ಇನ್ನೊಂದನ್ನು ಪ್ರತ್ಯೇಕಿಸಿದರೆ ಅದು ಪ್ರಜಾಪ್ರಭುತ್ವದ ಸೋಲಿಗೆ ಕಾರಣವಾಗುತ್ತದೆ.

ಸ್ವಾತಂತ್ರವು ಸಮಾನತೆಯಿಂದ ಪ್ರತ್ಯೇಕವಾಗುವುದಿಲ್ಲ, ಸಮಾನತೆಯು ಸ್ವಾತಂತ್ರದಿಂದ ಪ್ರತ್ಯೇಕವಾಗುವುದಿಲ್ಲ ಅಥವಾ ಸ್ವಾತಂತ್ರ ಮತ್ತು ಸಮಾನತೆಯು ಭ್ರಾತೃತ್ವದಿಂದ ಪ್ರತ್ಯೇಕವಾಗುವುದಿಲ್ಲ. ಸಮಾನತೆಯಿಲ್ಲದ ಸ್ವಾತಂತ್ರವು ಹಲವರ ಮೇಲೆ ಕೆಲವರ ಸರ್ವಾಧಿಕಾರವಾಗಿ ಮೆರೆಯುತ್ತದೆ. ಸ್ವಾತಂತ್ರವಿಲ್ಲದ ಸಮಾನತೆಯು ವ್ಯಕ್ತಿಗತ ಕ್ರಿಯಾಶೀಲತೆಯನ್ನು ಅಂತ್ಯಗೊಳಿಸುತ್ತದೆ. ಭಾತೃತ್ವವಿಲ್ಲದಿದ್ದರೆ, ಸ್ವಾತಂತ್ರ ಹಾಗೂ ಸಮಾನತೆಗಳು ಯಾವುದೇ ವಿಷಯದ ಸಹಜ ನಡೆಯಾಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: 77ನೇ ಗಣರಾಜ್ಯೋತ್ಸವ ಸಂಭ್ರಮ – ಗೂಗಲ್ ಡೂಡಲ್‍ನಿಂದ ವಿಶೇಷ ಗೌರವ

Share This Article