ಬೆಂಗಳೂರಿಗೆ ಟ್ರಾಫಿಕ್ ಸಿಟಿ ಹಣೆಪಟ್ಟಿ – ಸಂಚಾರ ದಟ್ಟಣೆ ಕಡಿವಾಣಕ್ಕೆ ಬ್ಲೂ ಪ್ರಿಂಟ್ ಸಿದ್ಧಪಡಿಸಿದ ಖಾಕಿ

2 Min Read

ಬೆಂಗಳೂರು: ಪ್ರಪಂಚದಲ್ಲೇ ಎರಡನೇ ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರವೆಂದು ಸಿಲಿಕಾನ್ ಸಿಟಿ (Silicon City) ಕುಖ್ಯಾತಿ ಪಡೆದುಕೊಂಡಿದೆ. ಕೆಟ್ಟ ಮೇಲೆ ಬುದ್ಧಿ ಕಲಿತರು ಎಂಬಂತೆ ಇದೀಗ ಬೆಂಗಳೂರು ಪೊಲೀಸರು (Bengaluru Police) ಸಂಚಾರ ದಟ್ಟಣೆ ಕಡಿಮೆ ಮಾಡಲು ಬ್ಲೂ ಪ್ರಿಂಟ್ ಹಾಕಿಕೊಂಡಿದ್ದಾರೆ.

ಟ್ರಾಫಿಕ್ ವಿಚಾರದಲ್ಲಿ ಬೆಂಗಳೂರಿನ ಮಾನ ಮರ್ಯಾದೆ ಹರಾಜಾದ ಮೇಲೆ ಪೊಲೀಸರು ಕಣ್ಣು ಬಿಟ್ಟಿದ್ದಾರೆ. ಸಂಚಾರ ದಟ್ಟಣೆಗೆ ಮದ್ದು ಕಂಡು ಹಿಡಿಯಲು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತೀಕ್ ರೆಡ್ಡಿ ಮುಂದಾಗಿದ್ದಾರೆ. ಸರ್ವೇಯಲ್ಲಿ ಯಾವ ಭಾಗವನ್ನ ಪರಿಗಣಿಸಿ ಸಂಚಾರ ದಟ್ಟಣೆಯ ನಗರ ಎಂದು ಗುರುತಿಸಿದ್ದಾರೆ. ಅಂತಹ ಏರಿಯಾಗಳಲ್ಲಿ ಟ್ರಾಫಿಕ್‌ಗೆ ಬ್ರೇಕ್ ಹಾಕಲು ನೀಲಿನಕ್ಷೆ ಹಾಕಿದ್ದಾರೆ. ಇದನ್ನೂ ಓದಿ: ಪ್ರಪಂಚದಲ್ಲಿ ಸೆಕೆಂಡ್‌, ದೇಶದಲ್ಲಿ Top-1 – ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಬೆಂಗಳೂರು

ಸಂಚಾರಿ ಪೊಲೀಸರ ಬ್ಲೂ ಪ್ರಿಂಟ್ ಪ್ರಕಾರ, ಪೂರ್ವ ವಲಯದಲ್ಲಿ ಪೀಕ್ ಅವರ್‌ನಲ್ಲಿ ಅತಿಹೆಚ್ಚು ಸಂಚಾರ ದಟ್ಟಣೆ ಆಗುತ್ತೆ. ಕೆ.ಆರ್ ಪುರಂನಿಂದ ಇಬ್ಲೂರು 17 ಕಿ.ಮೀ ವ್ಯಾಪ್ತಿಯಲ್ಲಿ 2.5 ಲಕ್ಷ ವಾಹನಗಳು ಸಂಚರಿಸುತ್ತವೆ. ಯಾಕಂದ್ರೆ, 17 ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 500ಕ್ಕೂ ಅಧಿಕ ಐಟಿಬಿಟಿ ಕಂಪನಿಗಳಿವೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ.

ಈ ಮೊದಲು ಸಂಚಾರಿ ಪೊಲೀಸರು ಅದಕ್ಕೆ ಪರಿಹಾರ ಕಂಡುಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ಇದೀಗ ಇದನ್ನು ಗಮನಿಸಿ ಹೇಗಾದ್ರು ಮಾಡಿ ಸಂಚಾರ ದಟ್ಟಣೆ ಕಡಿಮೆ ಮಾಡಬೇಕು ಅಂತಾ ಐಟಿ ಬಿಟಿ ಕಂಪನಿಯವರನ್ನು ವಿಶ್ವಾಸಕ್ಕೆ ತಗೆದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಐಟಿ ಬಿಟಿ ಕಂಪನಿ ಮುಖ್ಯಸ್ಥರ ಸಭೆ ಕರೆದಿದ್ದು, ಸಿಬ್ಬಂದಿಗೆ ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ ಬಳಸುವಂತೆ ಮನವಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಸಿಬ್ಬಂದಿ ಹೆಚ್ಚಾಗಿ ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ ಬಳಕೆ ಮಾಡಿದ್ರೆ 17 ಕಿ.ಮೀ ವ್ಯಾಪ್ತಿಯಲ್ಲಿ 15% ರಿಂದ 20% ಸಂಚಾರ ದಟ್ಟಣೆ ಕಡಿಮೆ ಮಾಡಬಹುದು. ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ದೂರ ಆಗುತ್ತೆ ಅಂತಾ ಕಂಪನಿಯವರು ತಕರಾರು ತಗೆಯಬಹುದು. ಒಂದು ವೇಳೆ ಹಾಗಾದ್ರೆ, ಕಂಪನಿಗೆ ಬಸ್ ಬಿಡುವ ವ್ಯವಸ್ಥೆ ಮಾಡಿಕೊಡಲು ಕೂಡ ಪೊಲೀಸರು ಯೋಜನೆ ಹಾಕಿಕೊಂಡಿದ್ದಾರೆ.

ಉಳಿದಂತೆ ಪೀಕ್ ಅವರ್‌ನಲ್ಲಿ ಅಂದರೆ ಮಧ್ಯಾಹ್ನ ಒಂದು ಗಂಟೆಯಿಂದ ಲಂಚ್ ಅವರ್‌ನಲ್ಲಿ ಸುಮಾರು 36 ಸಾವಿರದಿಂದ 40 ಸಾವಿರದಷ್ಟು ಸ್ವಿಗ್ಗಿ, ಝೋಮಾಟೋ ಸೇರಿ ಆನ್‌ಲೈನ್ ಡೆಲಿವರಿ ಬಾಯ್ಸ್ ರಸ್ತೆಗೆ ಇಳಿಯುತ್ತಾರೆ. ಅವರಿಗೆ ಏರಿಯಾ ತಿಳಿದಿರುವುದಿಲ್ಲ. ಎಲ್ಲರೂ ಗೂಗಲ್ ಮ್ಯಾಪ್ ಬಳಕೆ ಮಾಡುತ್ತಾರೆ. ಹೀಗಾಗಿ ಪೀಕ್ ಅವರ್ಸ್‌ನಲ್ಲಿ ಡೆಲಿವರಿ ಬಾಯ್ಸ್‌ಗೆ ಮುಖ್ಯ ರಸ್ತೆಯಲ್ಲಿ ಮ್ಯಾಪ್ ತೋರಿಸದಂತೆ ಗೂಗಲ್ ಜೊತೆ ಚರ್ಚೆಗೂ ಪ್ಲಾನ್ ಮಾಡಿದ್ದಾರೆ. ಇಷ್ಟೆಲ್ಲಾ ಪ್ಲಾನ್ ಮಾಡಿದ್ರೂ ಅದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅಂತಾ ಕಾದುನೋಡಬೇಕಿದೆ.ಇದನ್ನೂ ಓದಿ: 77ನೇ ಗಣರಾಜ್ಯೋತ್ಸವ ಸಂಭ್ರಮ – ಈ ಬಾರಿಯ ವಿಶೇಷತೆಗಳೇನು?

Share This Article