ರಾಜ್ಯ ಕಡಲೆ ಬೆಳೆಗಾರರ ಬೆನ್ನಿಗೆ ನಿಂತ ಕೇಂದ್ರ – 1 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಅಸ್ತು

2 Min Read

– ಮೋದಿ, ಚೌಹಣ್‌ಗೆ ಧನ್ಯವಾದ ಹೇಳಿದ ಜೋಶಿ

ನವದೆಹಲಿ: ಕೇಂದ್ರ ಸರ್ಕಾರ ರಾಜ್ಯದ ಕಡಲೆ (Chickpea) ಬೆಳೆಗಾರರ ಬೆಂಬಲಕ್ಕೆ ಬಂದಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಅವರ ಮನವಿ ಮೇರೆಗೆ ರಾಜ್ಯದಿಂದ ಬೆಂಬಲ ಬೆಲೆಯಲ್ಲಿ 1 ಲಕ್ಷ ಮೆಟ್ರಿಕ್ ಟನ್ ಕಡಲೆ ಖರೀದಿಗೆ ಅಸ್ತು ಎಂದಿದೆ.

ಬೆಂಬಲ ಬೆಲೆ ಯೋಜನೆಯಡಿ ಕನಿಷ್ಠ ಬೆಂಬಲ ಬೆಲೆ 5,875 ರೂ. ದರದಲ್ಲಿ ಒಟ್ಟು 10,1340 ಎಂಟಿ ಹಿಂಗಾರು ಹಂಗಾಮಿನ ಕಡಲೆ ಕಾಳು ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಬಗ್ಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ (Shivraj Singh Chouhan) ಅವರು ಜೋಶಿ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

ಕರ್ನಾಟಕದ (Karnataka) ಪ್ರಮುಖ ದ್ವಿದಳ ಧಾನ್ಯಗಳಲ್ಲಿ ಕಡ್ಲೆಯೂ ಒಂದಾಗಿದ್ದು, ಸುಮಾರು 9.24 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಉತ್ಪಾದನೆ ಹೊಂದಿದೆ. ಆದರೆ, ಪ್ರಸ್ತುತ ಮಾರುಕಟ್ಟೆ ಬೆಲೆಗಿಂತ ತೀರಾ ಕಡಿಮೆ ಬೆಲೆಯಿಂದಾಗಿ ಕಡಲೆ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ಬೆಂಬಲ ಬೆಲೆಯಲ್ಲಿ ಖರೀದಿಗೆ ಕ್ರಮ ಕೈಗೊಳ್ಳುವಂತೆ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ಇದನ್ನೂ ಓದಿ: ಬಿಜೆಪಿಗೆ ಅಧಿಕಾರ ನೀಡಿದರೆ ಶಬರಿಮಲೆ ಚಿನ್ನ ಕಳವು ತನಿಖೆ – ಇದು ಮೋದಿ ಗ್ಯಾರಂಟಿ : ಕೇರಳದಲ್ಲಿ ಪ್ರಧಾನಿ ವಚನ


ಕಡಲೆಗೆ ಪ್ರಸ್ತುತ ಮಾರುಕಟ್ಟೆ ಬೆಲೆ 2026-27ಕ್ಕೆ ಘೋಷಿಸಲಾದ ಪ್ರತಿ ಕ್ವಿಂಟಲ್‌ಗೆ 5,875 ರೂ. ಎಂಎಸ್‌ಪಿಗಿಂತ ತುಂಬಾ ಕಡಿಮೆಯಾಗಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಕಡಲೆ ಬೆಲೆ ಮತ್ತಷ್ಟು ಕುಸಿಯುವ ಆತಂಕವಿದೆ. ಆದ್ದರಿಂದ ಕರ್ನಾಟಕದಲ್ಲಿ ಕಡಲೆಗೆ ಬೆಂಬಲ ಬೆಲೆ ಯೋಜನೆ (PSS) ಅನ್ನು ಆದ್ಯತೆ ಮೇರೆಗೆ ಜಾರಿಗೆ ತರುವ ಅವಶ್ಯಕತೆಯಿದೆ ಎಂದು ಜೋಶಿ ಕೃಷಿ ಸಚಿವರಿಗೆ ಮನದಟ್ಟು ಮಾಡಿಕೊಟ್ಟಿದ್ದರು.

ಜೋಶಿ ಅವರ ಮನವಿಗೆ ತಕ್ಷಣವೇ ಸ್ಪಂದಿಸಿದ ಕೃಷಿ ಸಚಿವರು ರಾಜ್ಯದ ರೈತರ ಹಿತದೃಷ್ಟಿಯಿಂದ 1 ಲಕ್ಷ ಮೆಟ್ರಿಕ್ ಟನ್ ಗೂ ಹೆಚ್ಚು ಕಡಲೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ರಾಜ್ಯ ಸರ್ಕಾರಕ್ಕೆ ಅನುಮೋದನೆ ನೀಡಿದ್ದಾರೆ.  ಇದನ್ನೂ ಓದಿ: ಕೇರಳ ಕಾಂಗ್ರೆಸ್ ಕಾರ್ಯತಂತ್ರ ಸಭೆಗೆ ಶಶಿ ತರೂರ್ ಗೈರು

ರಾಜ್ಯ ಸರ್ಕಾರ ಈ ಕೂಡಲೇ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ರೈತರಿಂದ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಸಚಿವ ಜೋಶಿ ಒತ್ತಾಯಿಸಿದ್ದಾರೆ.

ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಗೆ ಅನುಮತಿ ನೀಡುವ ಮೂಲಕ ರಾಜ್ಯದ ರೈತರ ನೆರವಿಗೆ ಬಂದಿರುವ ಪ್ರಧಾನಿ ನರೇಂದ್ರ ಮತ್ತು ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.

 

Share This Article