ಇಂದಿರಾ ಇದು ಗಾಂಧಿ ಕಥೆಯಲ್ಲ: ಕುತೂಹಲ ಮೂಡಿಸಿದ ಸಿನಿಮಾ

3 Min Read

ಗ ಏನಿದ್ದರೂ ಜೆನ್‌ ಝೀ (Gen Z) ತಲೆಮಾರಿನ ಯುವಕರದ್ದೇ ಜಮಾನ. ಎಲ್ಲರ ಅಂಗೈಯಲ್ಲೂ ಸ್ಮಾರ್ಟ್‌ಫೋನ್‌, ಎಲ್ಲರಿಗೂ ಇಂಟರ್‌ನೆಟ್‌ (Internet) ಸಂಪರ್ಕ ಲಭ್ಯವಿದ್ದರೂ, ಅದನ್ನು ಅತಿಯಾಗಿ ಬಳಸಿಕೊಳ್ಳುತ್ತಿರುವುದು ಮಾತ್ರ ಇಂದಿನ ಜೆನ್‌ ಝೀ ತಲೆಮಾರು ಎಂಬುದರಲ್ಲಿ ಎರಡು ಮಾತಿಲ್ಲ. ಈಗ ಇದೇ ಜೆನ್‌ ಝೀ ತಲೆಮಾರು, ತಂತ್ರಜ್ಞಾನವನ್ನು ಹೇಗೆಲ್ಲ ಬಳಸಿಕೊಳ್ಳುತ್ತಿದೆ? ಹೇಗೆಲ್ಲ ಬಳಸಿಕೊಳ್ಳಬಹುದು ಎಂಬ ಕಥೆಯೊಂದನ್ನು ಇಲ್ಲೊಂದು ಚಿತ್ರತಂಡ ಸಿನಿಮಾದ ಮೂಲಕ ತೆರೆಮೇಲೆ ತರಲು ಹೊರಟಿದೆ. ಅಂದಹಾಗೆ, ಆ ಚಿತ್ರಕ್ಕೆ ಇಂದಿರಾ (Indira) ಎಂದು ಹೆಸರಿಡಲಾಗಿದ್ದು, ಚಿತ್ರದ ಶೀರ್ಷಿಕೆಗೆ ಜೆನ್‌ ಝೀ ಎಂಬ ಅಡಿಬರಹವಿದೆ.

ಈ ಹಿಂದೆ ರಾವೆನ್ ಚಿತ್ರವನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ವೇದ್ (Ved), ಇಂದಿರಾ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದು, ಕಿರಣ್ ಫಿಲ್ಮ್ಸ್‌ ಸಂಸ್ಥೆಯ ಅಡಿಯಲ್ಲಿ ಕಿರಣ್ ಕುಮಾರ್ ಎಂ (Kiran Kumar) ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಮತ್ತು ಕೆಲವು ಸಿನಿಮಾಗಳಿಗೆ ಸಹ ನಿರ್ಮಾಪಕರಾಗಿ ಅನುಭವವಿರುವ ಕಿರಣ್ ಕುಮಾರ್ ಇಂದಿರಾ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ. ಮ. ಹರೀಶ್, ನಿರ್ಮಾಪಕರಾದ ಟಿ. ಪಿ. ಸಿದ್ಧರಾಜು, ನಿತ್ಯಾನಂದ ಪ್ರಭು, ಕನ್ನಡ ಚಲನಚಿತ್ರ ನಿರ್ಮಾಪಕ ಸಂಘದ ಗೌರವ ಕಾರ್ಯದರ್ಶಿ ಭಾ. ಮ. ಗಿರೀಶ್, ಸೇರಿದಂತೆ ಚಿತ್ರರಂಗ ಮತ್ತು ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಹಾಜರಿದ್ದು, ಇಂದಿರಾ ಚಿತ್ರದ ಟೈಟಲ್ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದನ್ನೂ ಓದಿ:  ಮನೆಮಗಳು ತರ ನೋಡಿದ್ದೀರಿ, ಇದಕ್ಕಿಂತ ಹೆಚ್ಚೇನು ಬೇಕಿಲ್ಲ: ರಕ್ಷಿತಾ ಶೆಟ್ಟಿ

ಇದೇ ವೇಳೆ ಇಂದಿರಾ ಚಿತ್ರದ ಬಗ್ಗೆ ಮಾತನನಾಡಿದ ನಿರ್ದೇಶಕ ವೇದ್, ‘ಇದು ಇಂದಿನ ತಲೆಮಾರಿನ ಜನತೆಗೆ ಕನೆಕ್ಟ್ ಆಗುವಂಥ ಸಿನಿಮಾ. ಈಗಾಗಲೇ ಜಗತ್ತಿನ ಅನೇಕ ದೇಶಗಳಲ್ಲಿ ಜೆನ್‌ ಝೀಯಿಂದ ಏನೇನು ಆಗುತ್ತಿದೆ. ಇಂದಿನ ಜೆನ್ ಜ್ಹೀ ತಲೆಮಾರು ಹೇಗೆಲ್ಲ ಯೋಚಿಸುತ್ತದೆ. ಅವರಿಂದ ಏನೆಲ್ಲ ಆಗಬಹುದು, ಜೆನ್‌ ಝೀ ಮನಸ್ಸು ಮಾಡಿದರೆ, ಏನೆಲ್ಲ ಮಾಡಲು ಸಾಧ್ಯ? ಎಂಬ ಹಲವು ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳುತ್ತಿದ್ದೇವೆ. ಇದೊಂದು ಮಹಿಳಾ ಪ್ರಧಾನ ಕಥಾಹಂದರದ ಸಿನಿಮಾವಾಗಿದ್ದು, ಹಾಗಾಗಿ ಸಿನಿಮಾಕ್ಕೆ ಇಂದಿರಾ ಎಂದು ಹೆಸರಿಟ್ಟಿದ್ದೇವೆ. ಇಂದಿರಾ ಸಿನಿಮಾದಲ್ಲಿ ಮನರಂಜನೆಯ ಜೊತೆಗೆ ಸಮಾಜಕ್ಕೆ ಒಂದು ಸಂದೇಶ ಕೂಡ ಇರಲಿದೆ. ಸದ್ಯ ಸಿನಿಮಾದ ಟೈಟಲ್ ಮತ್ತು ಟೀಸರ್ ಬಿಡುಗಡೆಯಾಗಿದ್ದು, ಇದೇ ಮಾರ್ಚ್ ವೇಳೆಗೆ ಇಂದಿರಾ ಚಿತ್ರದ ಚಿತ್ರೀಕರಣ ಆರಂಭಿಸುವ ಯೋಚನೆಯಿದೆ ಎಂದರು.

ಇಂದಿರಾ ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಕಿರಣ್ ಕುಮಾರ್ ಎಂ. ಈ ಸಿನಿಮಾದ ಹೆಸರು ಇಂದಿರಾ ಅಂತಿದ್ದರೂ, ಈ ಸಿನಿಮಾಕ್ಕೂ ಇಂದಿರಾ ಗಾಂಧಿಯವರಿಗೂ ಯಾವುದೇ ಸಂಬಂಧವಿಲ್ಲ. ಇದು ರಾಜಕೀಯ ಕಥೆಯಾಧಾರಿತ ಸಿನಿಮಾವಲ್ಲ. ಆದರೆ ಸಿನಿಮಾದ ಕಥೆಯಲ್ಲಿ ಇಂದಿನ ಹಲವು ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಸಿನಿಮಾದ ಕಥೆಗೆ ತಕ್ಕಂತೆ ಪವರ್‌ಫುಲ್‌ ಟೈಟಲ್ ಇರಬೇಕೆಂಬ ಕಾರಣಕ್ಕೆ ಈ ಹೆಸರಿಡಲಾಗಿದೆ. ಇಂದಿನ ಜೆನ್ ಜ್ಹೀಗೆ ಕನೆಕ್ಟ್ ಆಗುವ ಸಿನಿಮಾ ಇದಾಗಿರುವುದರಿಂದ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಈ ಸಿನಿಮಾ ನಿರ್ಮಿಸುತ್ತಿದ್ದೇವೆ. ಕನ್ನಡದ ಜೊತೆಗೆ ಇತರ ಭಾಷೆಗಳಲ್ಲೂ ಈ ಸಿನಿಮಾವನ್ನು ತೆರೆಗೆ ತರುವ ಯೋಜನೆಯಿದೆ. ಈಗಾಗಲೇ ಇಂದಿರಾ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇದೇ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದ್ದೇವೆ’ ಎಂದು ಮಾಹಿತಿ ನೀಡಿದರು.

ಸದ್ಯ ಇಂದಿರಾ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರದ ಟೈಟಲ್ ಪೋಸ್ಟರ್ ಮತ್ತು ಟೈಟಲ್ ಟೀಸರ್ ಹೊರಬಂದಿದೆ. ಚಿತ್ರಕ್ಕೆ ರವಿವರ್ಮ ಛಾಯಾಗ್ರಹಣ, ಧನುಶ್ ಸಂಕಲನ ಕಾರ್ಯವಿದೆ. ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಕರ್ನಾಟಕ ಪ್ರಮುಖ ತಾಣಗಳು ಮತ್ತು ಹೊರರಾಜ್ಯಗಳಲ್ಲೂ ಇಂದಿರಾ ಚಿತ್ರದ ಚಿತ್ರೀಕರಣ ನಡೆಯಲಿದೆ.

ಇಂದಿರಾ ಚಿತ್ರದ ಮಹಿಳಾ ಪ್ರಧಾನ ಪಾತ್ರಕ್ಕೆ ಕನ್ನಡದ ಜನಪ್ರಿಯ ನಟಿಯೊಬ್ಬರನ್ನು ಕರೆತರುವ ಯೋಜನೆಯಲ್ಲಿದೆ ಚಿತ್ರತಂಡ. ಉಳಿದ ಪಾತ್ರಗಳಿಗೆ ದಕ್ಷಿಣ ಭಾರತದ ಹಲವು ಕಲಾವಿದರನ್ನು ಕರೆತರುವ ಪ್ರಯತ್ನ ನಡೆಯುತ್ತಿದ್ದು, ಮಾರ್ಚ್ ತಿಂಗಳ ಕೊನೆಯೊಳಗೆ ಇಂದಿರಾ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರನ್ನು ಅಂತಿಮಗೊಳಿಸಿ, ಚಿತ್ರತಂಡ ಚಿತ್ರೀಕರಣದತ್ತ ಮುಖಮಾಡಲಿದೆ.

Share This Article