ಕಾರವಾರ: ಕರಾವಳಿ ಭಾಗದಲ್ಲಿ ಎಂಡೋಸಲ್ಫಾನ್ (Endosulfan) ಕ್ರಿಮಿನಾಶಕ ಸಿಂಪಡಣೆಯಿಂದ ವಿವಿಧ ಅಂಗವೈಕಲ್ಯಕ್ಕೆ ತುತ್ತಾಗಿ, ಜನರ ಜೀವವನ್ನೇ ಹಿಂಡುತಿದ್ದ ರೋಗ ಈಗ 3ನೇ ತಲೆಮಾರಿಗೂ ಹಬ್ಬಿದೆ. ಹೊಸದಾಗಿ 543 ಜನರಿಗೆ ಎಂಡೋಸಲ್ಫಾನ್ ಇರುವುದು ಪತ್ತೆಯಾಗಿದೆ.
ಒಂದೆಡೆ ಅಂಗವೈಕಲ್ಯದಿಂದ ನೋವು ಅನುಭವಿಸುತ್ತಿರುವ ಮಕ್ಕಳು, ಮತ್ತೊಂದೆಡೆ ಬುದ್ಧಿ ಮಾಂದ್ಯತೆ, ಬಹು ಅಂಗಾಂಗ ವೈಫಲ್ಯ ಹೊಂದಿದ ವಯಸ್ಕರು.. ಹೌದು ಹುಟ್ಟಿದಾಗಿನಿಂದ ಮನುಷ್ಯನ ಜೀವವನ್ನು ಹಿಂಡಿ, ನೋವು ಕೊಟ್ಟು ಕೊನೆಗೆ ಜೀವ ತೆಗೆಯುವ ಎಂಡೋಸೆಲ್ಫಾನ್ ರೋಗ ಇದೀಗ ಕರಾವಳಿಯಲ್ಲಿ ತನ್ನ ಅಸ್ತಿತ್ವವನ್ನ ಮತ್ತೊಮ್ಮೆ ತೋರಿಸಿದೆ. ಹೊಸ ಸರ್ವೆಯಲ್ಲಿ ಚಿಕ್ಕ ಮಕ್ಕಳು ಸೇರಿ ಒಟ್ಟು 543 ಜನರು ಎಂಡೋ ಪೀಡಿತರು ಪತ್ತೆಯಾಗಿದ್ದು, ಆತಂಕ ತಂದೊಡ್ಡಿದೆ. ಇದನ್ನೂ ಓದಿ: ಬಡವರಿಗೆ ಮನೆ, ಅನಾಥಾಶ್ರಮಗಳಿಗೆ ಮಧ್ಯಾಹ್ನದ ಭೋಜನ – ಇದು ದಿನಗೂಲಿ ನೌಕರರಿಂದಲೇ ರಚನೆಯಾದ ಟ್ರಸ್ಟ್
ಏನಿದು ಎಂಡೋಸಲ್ಫಾನ್ ದುರಂತ?
1986 ರಿಂದ 2011ರ ಅವಧಿಯಲ್ಲಿ ಗೇರು ಬೀಜದ ಇಳುವರಿಗೆ ಅಡ್ಡಿಯಾಗುತಿದ್ದ ಟೀ ಸೊಳ್ಳೆಗಳನ್ನು ನಾಶಪಡಿಸಲು ಉತ್ತರ ಕನ್ನಡ ಜಿಲ್ಲೆಯ ಏಳು ತಾಲೂಕಿನ ಸುಮಾರು 11,794.23 ಹೆಕ್ಟೇರ್ ಗೇರು ಬೆಳೆದ ಭೂಮಿಗೆ ಎಂಡೋಸಲ್ಪಾನ್ ವಿಷ ದ್ರಾವಣವನ್ನು ಸಿಂಪಡಿಸಲಾಗಿತ್ತು. ಸಿಂಪಡಣೆಯಿಂದಾಗಿ ಗರ್ಭಿಣಿಯರು, ಮಕ್ಕಳಿಗೆ ಇದರ ಅಡ್ಡ ಪರಿಣಾಮವಾಗಿ ಹುಟ್ಟಿದ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಅಂಗವೈಕಲ್ಯ, ನರದೌರ್ಭಲ್ಯಕ್ಕೆ ಈಡಾದರೇ, ಇದರ ಗಾಳಿ ಸೇವಿಸಿದ ಪುರುಷರಲ್ಲೂ ಉಸಿರಾಟ ಸಮಸ್ಯೆ, ಪಾರ್ಶ್ವವಾಯು, ನರದೌರ್ಭಲ್ಯ ಕಾಣಿಸಿಕೊಂಡಿತ್ತು. ಹೀಗೆ 8000ಕ್ಕೂ ಹೆಚ್ಚು ಜನ ಇದರ ಅಡ್ಡ ಪರಿಣಾಮಕ್ಕೆ ಒಳಗಾಗಿದ್ದರು.
ನಿರಂತರ ಹೋರಾಟದಿಂದ ಎಂಡೋ ಬಾಧಿತರಿಗೆ ಉಚಿತ ಚಿಕಿತ್ಸೆ, ಸಮಲತ್ತುಗಳನ್ನ ನೀಡಲಾಗಿತ್ತು. ಎಂಡೋಸಲ್ಫಾನ್ ವಿಷಕಾರಿ ಕ್ರಿಮಿನಾಶಕ ಸಿಂಪಡಣೆಯಿಂದ ದಕ್ಷಿಣ ಕನ್ನಡದಲ್ಲಿ 3,607 ಜನ ಉಡುಪಿ ಜಿಲ್ಲೆಯಲ್ಲಿ 1,514 ಜನ, ಉತ್ತರ ಕನ್ನಡ ಜಿಲ್ಲೆಯಲ್ಲಿ 1,793 ಜನ, ಸೇರಿದಂತೆ ಒಟ್ಟು 6,914 ಜನರು ಬಹುವಿಧದ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 2023-24 ರಲ್ಲಿ ಒಟ್ಟು 1554 ಜನರನ್ನ ಗುರುತಿಸಲಾಗಿತ್ತು. ಇದೀಗ ಹೊಸ ಸರ್ವೆಯಲ್ಲಿ ಚಿಕ್ಕ ಮಕ್ಕಳು ಸೇರಿ ಒಟ್ಟು 543 ಜನರು ಎಂಡೋ ಪೀಡಿತರ ಪತ್ತೆಯಾಗಿದ್ದಾರೆ.
ಬೇಕಿದೆ ಸರ್ಕಾರದ ಸಹಕಾರ
ಸಂಶೋಧಕರ ಪ್ರಕಾರ ಈ ರೋಗ ವಂಶವಾಹಿ ಮೂಲಕ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿದೆ. ಎಂಡೋ ಬಾಧಿತರ ಸಂಖ್ಯೆ ಈ ಹಿಂದೆ ಕಡಿಮೆಯಾಗಿತ್ತು ಎಂದು ಸರ್ಕಾರ ಇವರಿಗೆ ನೀಡುವ ಸೌಲಭ್ಯವನ್ನ ನಿಲ್ಲಿಸಿತ್ತು. ಇದರಿಂದಾಗಿ ಎಂಡೋ ಪೀಡಿತರಿಗೆ ಯಾವ ಸವಲತ್ತು ಇಲ್ಲದೇ ತೊಂದರೆ ಪಡುವಂತಾಗಿತ್ತು. ಆದರೇ ಇದೀಗ ಸರ್ವೆ ನಡೆದು ಮತ್ತೆ ಎಂಡೋ ಪೀಡಿತರು ಹೆಚ್ಚಾಗಿರುವುದು ಆತಂಕ ತಂದಿದೆ. ಇದರ ಬೆನ್ನಲ್ಲೇ ಎನ್‌ಜಿಓಗಳು ಉಚಿತ ಚಿಕಿತ್ಸೆ ನೀಡುವ ಕಾಯಕಕ್ಕೆ ಮುಂದಾಗಿವೆ. ಈ ಎಂಡೋ ಪೀಡಿತರಿಗೆ ಸರ್ಕಾರದಿಂದ ಸಮರ್ಪಕ ಔಷಧ, ಚಿಕಿತ್ಸೆಗಳು ನೀಡಬೇಕಿದೆ. ಇದನ್ನೂ ಓದಿ: ಧಾರವಾಡ | ಯುವತಿಯ ಕೊಲೆ ಕೇಸ್ – ಮದುವೆ ಆಗಬೇಕಿದ್ದ ಯುವಕನೇ ವಿಲನ್

