ಶಿವಮೊಗ್ಗ: ಭದ್ರಾವತಿ (Bhadravathi) ನಗರದ ಭೂತನಗುಡಿ ಬಡಾವಣೆಯಲ್ಲಿ ವಯೋವೃದ್ದ ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ (ಜ.20) ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ವಿಐಎಸ್‌ಎಲ್ ನಿವೃತ್ತ ನೌಕರ ಚಂದ್ರಪ್ಪ (78) ಅವರ ಪತ್ನಿ ಜಯಮ್ಮ (75) ಎಂದು ಗುರುತಿಸಲಾಗಿದೆ. ಈ ದಂಪತಿ ಪ್ರತಿನಿತ್ಯ ಬೆಳಗ್ಗಿನ ಜಾವ ವಾಯು ವಿಹಾರಕ್ಕೆ ಹೋಗಿ ಬರುತ್ತಿದ್ದರು. ಜ.20ರ ಬೆಳಗ್ಗೆ ಮನೆಯಿಂದ ದಂಪತಿ ಹೊರಗೆ ಬರದೇ ಇದ್ದಾಗ ಸ್ಥಳೀಯರು ಮನೆ ಬಳಿ ಹೋಗಿ ನೋಡಿದಾಗ ದಂಪತಿ ಸಾವನ್ನಪ್ಪಿರುವುದು ಗೊತ್ತಾಗಿದೆ. ಜ.19 ರಂದು ದಂಪತಿ ಹೊಸದಾಗಿ ಒಡವೆ ಖರೀದಿಸಿ ತಂದಿದ್ದರು ಎನ್ನಲಾಗಿದೆ. ಜಯಮ್ಮ ಅವರ ಮೇಲಿದ್ದ ಬಂಗಾರದ ಚೈನು ಸೇರಿದಂತೆ ಮನೆಯಲ್ಲಿದ್ದ ಒಡವೆಗಳು ನಾಪತ್ತೆಯಾಗಿವೆ. ಆದರೆ ಮೃತರ ದೇಹದಲ್ಲಿ ಎಲ್ಲೂ ಗಾಯದ ಗುರುತುಗಳಿಲ್ಲವೆಂದು ಮಕ್ಕಳು ಹೇಳಿದ್ದಾರೆ. ಇದನ್ನೂ ಓದಿ: ಅಪರಿಚಿತರೊಂದಿಗೆ ಮಾತಾಡಲ್ಲ ಎಂದಿದ್ದಕೆ ಬಾಲಕಿ ಮೇಲೆ ಆಸಿಡ್ ದಾಳಿ – ಫೋಟೋಗ್ರಾಫರ್ ಅರೆಸ್ಟ್
ದಂಪತಿಗೆ ಶಿವಮೊಗ್ಗದ (Shivamogga) ಶಾಲೆಯೊಂದರ ಮುಖ್ಯ ಶಿಕ್ಷಕ ಆದರ್ಶ್, ನಗರದ ಸಿದ್ದಾಪುರ-ಹೊಸೂರು ಸರ್ಕಾರಿ ಉರ್ದು ಶಾಲೆಯ ಶಿಕ್ಷಕ ರವಿಕುಮಾರ್ ಹಾಗೂ ದಾವಣಗೆರೆ ಶುಗರ್ಸ್‌ನಲ್ಲಿ ಲೆಕ್ಕಾಧಿಕಾರಿ ವಿಶ್ವನಾಥ್ ಮೂರು ಮಂದಿ ಮಕ್ಕಳಿದ್ದಾರೆ. ಶನಿವಾರ ಮುಖ್ಯ ಶಿಕ್ಷಕ ಆದರ್ಶ ಮತ್ತು ಮಕ್ಕಳು ಮನೆಗೆ ಬಂದು ಹೋಗಿದ್ದರು.
ವಿಷಯ ತಿಳಿಯುತ್ತಿದ್ದಂತೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರ್ಯಪ್ಪ, ಡಿವೈಎಸ್‌ಪಿ ಪ್ರಕಾಶ್ ರಾಥೋಡ್, ಸರ್ಕಲ್ ಇನ್ಸ್‌ಪೆಕ್ಟರ್ ಚಿದಾನಂದ್, ಹಳೇನಗರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಸುನಿಲ್ ತೇಲಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ದಾವಣಗೆರೆಯಿಂದ ವಿಶೇಷ ತಂಡಗಳು ಆಗಮಿಸಿ ಪರಿಶೀಲನೆ ನಡೆಸಿವೆ. ಹಳೇನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗೆಳತಿಯರ ಕೊಂದಿದ್ದ ರಷ್ಯಾ ಹಂತಕನ ಫೋನಲ್ಲಿತ್ತು 100ಕ್ಕೂ ಹೆಚ್ಚು ಮಹಿಳೆಯರ ಫೋಟೋ!

