ಇದು ಎಲ್ಲಾ ವ್ಯಾಪಾರ ಒಪ್ಪಂದಗಳ ತಾಯಿ – ಶೀಘ್ರವೇ ಭಾರತದ ಜೊತೆ ಸಹಿ: EU ಮುಖ್ಯಸ್ಥೆ

2 Min Read

ದಾವೋಸ್‌: ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ಹುಚ್ಚಾಟದ ಬೆನ್ನಲ್ಲೇ ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತದ ಜೊತೆ ಬಾಂಧವ್ಯಕ್ಕೆ ಮುಂದಾಗಿದೆ. ಅದರಲ್ಲೂ, 27 ದೇಶಗಳನ್ನು ಒಳಗೊಂಡಿರುವ ಯೂರೋಪಿಯನ್ ಒಕ್ಕೂಟವು (European Union) ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದ (FTA) ಮಾಡಿಕೊಳ್ಳಲು ಮುಂದಾಗಿವೆ.

ಸ್ವಿಜರ್ಲ್ಯಾಂಡ್‌ನ ದಾವೋಸ್‌ನಲ್ಲಿ (Davos) ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಮಾತನಾಡಿದ ಯೂರೋಪ್ ಒಕ್ಕೂಟದ ಮುಖ್ಯಸ್ಥೆ ಉರ್ಸುಲಾ ವನ್ ಡರ್ ಲೆಯಾನ್ (Ursula von der Leyen) ಮಾತನಾಡಿ, ಮುಂದಿನ ವಾರಾಂತ್ಯದಲ್ಲಿ ದಾವೋಸ್ ಬಳಿಕ ನಾನು ಭಾರತಕ್ಕೆ ಪ್ರಯಾಣಿಸುತ್ತೇನೆ. ಇನ್ನೂ ಮಾಡಲು ಕೆಲಸವಿದೆ, ಆದರೆ ನಾವು ಐತಿಹಾಸಿಕ ವ್ಯಾಪಾರ ಒಪ್ಪಂದ ಮಾಡುವ ಅಂತಿಮ ಹಂತದಲ್ಲಿದ್ದೇವೆ. ಇದನ್ನು ಕೆಲವರು ಎಲ್ಲಾ ಒಪ್ಪಂದಗಳ ತಾಯಿ ಎಂದು ಕರೆಯುತ್ತಾರೆ ಎಂದು ಬಣ್ಣಿಸಿದರು.


ಒಪ್ಪಂದವು ಸುಮಾರು ಎರಡು ಶತಕೋಟಿ ಜನರ ಸಂಯೋಜಿತ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ ಮತ್ತು ಜಾಗತಿಕ ಜಿಡಿಪಿಯ ಸುಮಾರು ಕಾಲು ಭಾಗದಷ್ಟು ಪಾಲನ್ನು ಹೊಂದಿರುತ್ತದೆ. ಇದು ಯುರೋಪಿಯನ್ ಕಂಪನಿಗಳಿಗೆ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಹೂಡಿಕೆಗೆ ಸಹಾಯ ಮಾಡಲಿದೆ. ಯುರೋಪ್ ಲ್ಯಾಟಿನ್ ಅಮೆರಿಕದಿಂದ ಹಿಡಿದು ಇಂಡೋ-ಪೆಸಿಫಿಕ್ ಮತ್ತು ಅದರಾಚೆಗಿನವರೆಗೆ ವ್ಯವಹಾರ ಮಾಡಲು ಬಯಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಗ್ರೀನ್‌ಲ್ಯಾಂಡ್ ಅಮೆರಿಕದ ಪ್ರಾಂತ್ಯ, ಹೊಸ ನಕ್ಷೆ ಬಿಡುಗಡೆ – ಡೆನ್ಮಾರ್ಕ್‌ನಿಂದ ಸೇನೆ ರವಾನೆ

ಸುಮಾರು 2 ದಶಕಗಳಿಂದಲೂ ಮಾತುಕತೆಯಲ್ಲಿರುವ ಈ ಎಫ್‌ಟಿಎ ಬಗ್ಗೆ ಜನವರಿ 27ಕ್ಕೆ ದೆಹಲಿಯಲ್ಲಿ ಸಹಿ ಬೀಳುವ ಸಾಧ್ಯತೆಯಿದೆ. ವ್ಯಾಪಾರ ಒಪ್ಪಂದದ ಜೊತೆಗೆ ರಕ್ಷಣೆ, ಭದ್ರತೆ ಹಾಗೂ ರಾಜಕೀಯ ಬಾಂಧವ್ಯೂ ಗಟ್ಟಿಗೊಳ್ಳಲಿದೆ. ಹೀಗಾಗಿ ಈ ಬಾರಿಯ ಗಣರಾಜ್ಯೋತ್ಸವ ತುಂಬಾ ವಿಶೇಷವಾಗಿರಲಿದೆ.

ಉರ್ಸುಲಾ ವನ್ ಡರ್ ಲೆಯಾನ್ ಜೊತೆಗೆ ಯೂರೋಪಿಯನ್ ಕೌನ್ಸಿಲ್‌ನ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಗಣರಾಜ್ಯೋತ್ಸವ ಮುಖ್ಯ ಅತಿಥಿಗಳಾಗಲಿದ್ದಾರೆ. ಜನವರಿ 25, 26, 27 ಮೂರು ದಿನ ಭಾರತದಲ್ಲಿ ಉಳಿಯಲಿದ್ದಾರೆ. ಈ ವೇಳೆ, ಹಲವು ಒಪ್ಪಂದಗಳಿಗೆ ಸಹಿಹಾಕಲಿದ್ದಾರೆ.

ಜೊತೆಗೆ, ಯೂರೋಪಿಯನ್ ಒಕ್ಕೂಟದ ಸೇನಾ ತುಕಡಿಯೊಂದು ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗಿಯಾಗಲಿದೆ.

Share This Article