ಲಕ್ಕುಂಡಿಯಲ್ಲಿ ಉತ್ಖನನ – ಪ್ರಾಚೀನ ಕಾಲದ ಶಿಲಾಕೃತಿ ಪತ್ತೆ

1 Min Read

ಗದಗ: ಎರಡನೇ ದಿನವೂ ಲಕ್ಕುಂಡಿಯ (Lakkundi) ಶ್ರೀ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಉತ್ಖನನ ( Excavation) ನಡೆಯುತ್ತಿದ್ದು ಪ್ರಾಚೀನ ಕಾಲದ ಒಂದು ಶಿಲಾಕೃತಿ ಪತ್ತೆಯಾಗಿದೆ.

ಒಂದೂವರೆ ಅಡಿ ತೆಗೆಯುತ್ತಿದ್ದಂತೆ ಈ ಶಿಲಾಕೃತಿ ಸಿಕ್ಕಿದೆ. ಪುರಾತತ್ವ ಇಲಾಖೆ ತಜ್ಞರು ಶಿಲಾಕೃತಿಯನ್ನು ಪರಿಶೀಲಿಸುತ್ತಿದ್ದು ಶೀಘ್ರವೇ ಎಷ್ಟು ವರ್ಷ ಹಿಂದಿನದ್ದು ಎನ್ನುವುದು ತಿಳಿಯಲಿದೆ.

10 ಮೀಟರ್ ಸುತ್ತಳತೆ ಜಾಗದಲ್ಲಿ ಉತ್ಖನನ ನಡೆಸಲು ಸಿದ್ಧತೆ ನಡೆದಿದೆ. ಉತ್ಖನನ ಕಾರ್ಯ ಮುಗಿಯುವವರೆಗೂ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಆದೇಶ ಪ್ರಕಟಿಸಿದ್ದಾರೆ.

ಪುರಾತತ್ವ ಇಲಾಖೆಯ ಶಿಫಾರಸ್ಸಿನ ಮೇರೆಗೆ ಉತ್ಖನನ ಜಾಗವನ್ನ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಉತ್ಖನನ ಕೆಲಸಕ್ಕೆ ತೊಂದರೆಯಾಗದೇ ಇರಲು ಸಾರ್ವಜನಿಕರ ಫೋಟೋ, ವೀಡಿಯೋಗ್ರಾಫಿಗೆ ನಿಷೇಧ ಹೇರಲಾಗಿದೆ.  ಇದನ್ನೂ ಓದಿ: ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ನಿಧಿ ಸಿಕ್ಕರೆ ಗ್ರಾಮವೇ ಸ್ಥಳಾಂತರ

ಅಗ್ರಹಾರಾಗಿದ್ದ ಲಕ್ಕುಂಡಿ

ಮೊದಲು ಇಲ್ಲಿ ಲಕ್ಕುಂಡಿ ಗ್ರಾಮವಿರಲಿಲ್ಲ. ಲಕ್ಕುಂಡಿ ಗ್ರಾಮ ಸಪ್ತ ಗ್ರಾಮಗಳ ಅಗ್ರಹಾರವಾಗಿತ್ತು. ಈ ಅಗ್ರಹಾರ ಸೊಕಮನಕಟ್ಟಿ, ತಂಗಾಬೆಂಚಿ, ಜವಳಬೆಂಚಿ, ನರಸಿಪುರ, ಮೊಟಬಸಪ್ಪ, ಬೂದಿಬಸಪ್ಪ, ಲಕ್ಕುಂಡಿ ಗ್ರಾಮಗಳನ್ನು ಒಳಗೊಂಡಿತ್ತು.

ವಿಜಯನಗರ ಅರಸರ ಆಳಿಕ್ವೆ ಅಧಿಪತ್ಯದ ನಂತರ ಏಳು ಗ್ರಾಮದ ಜನರು ಲಕ್ಕುಂಡಿಗೆ ಬಂದು ನೆಲೆಸಿದರು. ಇಲ್ಲಿ ನಾಣ್ಯಗಳನ್ನು ತಯಾರಿಸುವ ಠಂಕಸಾಲೆಗಳಿದ್ದವು ಎಂಬ ಇತಿಹಾಸವಿದೆ. ಇತಿಹಾಸಕ್ಕೆ ಸಂಬಂಧಿಸಿದ ಪುರಾತನ ಕಾಲದ ಕಲ್ಲಿನ ವಿಗ್ರಹಗಳು, ಅವಶೇಷಗಳು, ಪುರಾವೆಗಳು ಲಕ್ಕುಂಡಿಯ ಅಲ್ಲಲ್ಲಿ ಸಿಗುತ್ತಿವೆ. ಅಷ್ಟೇ ಅಲ್ಲಾ ಬೆಳ್ಳಿ, ಬಂಗಾರ, ಮುತ್ತು, ರತ್ನ, ಹವಳಗಳ ತುಣುಕುಗಳು ಅನೇಕ ವರ್ಷಗಳಿಂದ ಸಿಗುತ್ತಲೇ ಇವೆ ಅಂತಿದ್ದಾರೆ ಸ್ಥಳಿಯರು.

Share This Article