ಐಟಿ ಕಂಪೆನಿಗಳ ಹೊಸ ಜಾಬ್ ಆಫರ್‍ಗೆ ಟೆಕ್ಕಿಗಳು ಶಾಕ್!

By
2 Min Read

ಬೆಂಗಳೂರು: “ನೀವು ಕೆಲಸ ತೊರೆಯಿರಿ ಅಥವಾ ನಿಮ್ಮ ಸಹೋದ್ಯೋಗಿಗಳಲ್ಲಿ ಯಾರನ್ನು ಮನೆಗೆ ಕಳುಹಿಸಬೇಕೋ ಅವರ ಹೆಸರನ್ನು ರೆಫರ್ ಮಾಡಿ” ಇದು ಐಟಿ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ನೀಡುತ್ತಿರುವ ಹೊಸ ಆಫರ್.

ಐಟಿ ಕಂಪೆನಿಗಳು ಕೆಲ ಉದ್ಯೋಗಿಗಳನ್ನು ಕಿತ್ತು ಹಾಕಲು ಮುಂದಾಗುತ್ತಿದ್ದು, ಈಗ ಸಹೋದ್ಯೋಗಿಗಳ ನಡುವೆ ವೈಮನಸ್ಸು ತರುವ ಕೆಲಸಕ್ಕೆ ಕೈ ಹಾಕಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಕಂಪೆನಿಗಳು ಈಗ ತಮಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಅಸಮರ್ಥ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಒಂದೊಂದೆ ತಂತ್ರವನ್ನು ಅನುಸರಿಸಲು ಆರಂಭಿಸಿದೆ. ಈಗ ಉದ್ಯೋಗಿಯೊಬ್ಬ ತನ್ನ ಉದ್ಯೋಗವನ್ನು ಉಳಿಸಿಕೊಳ್ಳಲು ಬೇರೆ ಒಬ್ಬ ಉದ್ಯೋಗಿಯನ್ನು ಮನೆಗೆ ಕಳುಹಿಸಬೇಕಾದ ಸಂದರ್ಭ ಒದಗಿ ಬಂದಿದೆ ಎಂದು ಮಾಧ್ಯಮವೊಂದು ಉದ್ಯೋಗಿಗಳ ಹೇಳಿಕೆಯನ್ನು ಆಧಾರಿಸಿ ವರದಿ ಮಾಡಿದೆ.

ಕಂಪೆನಿಗೆ ವೆಚ್ಚದಾಯಕವಾಗಿರುವ ಉದ್ಯೋಗಿಗಳನ್ನು ಗುರುತಿಸಿ ಅವರನ್ನು ಕೆಲಸದಿಂದ ಕಿತ್ತು ಹಾಕುವಂತೆ ಕಂಪೆನಿಯ ಹಿರಿಯ ಅಧಿಕಾರಿಗಳು ಎಚ್‍ಆರ್‍ಗೆ ಆದೇಶಿಸಿದ್ದಾರೆ. ಇದರಂತೆ ಕೆಲ ಕಂಪೆನಿಗಳ ಎಚ್‍ಆರ್‍ಗಳು ಕೆಲ ಉದ್ಯೋಗಿಗಳಿಗೆ ಕರೆ ಮಾಡಿ, ಕಡಿಮೆ ವೇತನ ಪಡೆದು ಕೆಲಸವನ್ನು ತೊರೆಯುವಂತೆ ಹೇಳಿದ್ದಾರೆ. ಇನ್ನು ಕೆಲ ಕಂಪೆನಿಗಳು, ನಿಮಗೆ ಇಷ್ಟೊಂದು ವೇತನ ನೀಡಲು ಕಷ್ಟವಾಗುತ್ತದೆ. ಹೀಗಾಗಿ ಒಂದೋ ನೀವು ಕಂಪೆನಿ ತೊರೆಯಿರಿ, ಇಲ್ಲವೇ ನಿಮ್ಮ ಸಹೋದ್ಯೋಗಿಗಳಲ್ಲಿ ಯಾರನ್ನು ಮನೆಗೆ ಕಳುಹಿಸಬೇಕೆಂದು ರೆಫರ್ ಮಾಡಿ ಎಂದು ಹೇಳಿದ್ದಾರೆ.

ಎಚ್‍ಆರ್‍ಗಳ ಮೂಲಕ ಈ ಆಟವನ್ನು ಆಡಿ ಕಂಪೆನಿಗಳು ಮನರಂಜನೆಯನ್ನು ತೆಗೆದುಕೊಳ್ಳುತ್ತಿದ್ದರೆ, ಉದ್ಯೋಗಿಗಳು ತಮ್ಮ ನೋವಿನ ವಿಚಾರವನ್ನು ಮಾಧ್ಯಮಗಳಲ್ಲಿ ತೋಡಿಕೊಂಡಿದ್ದಾರೆ.

ಕಂಪೆನಿಗಳ ಆಟ ಹೀಗಿರುತ್ತೆ:
ಬೆಂಗಳೂರಿನ ನೊಂದ ಐಟಿ ಉದ್ಯೋಗಿಯೊಬ್ಬರು ಕಂಪೆನಿ ಹೇಗೆ ಉದ್ಯೋಗಿಗಳ ಜೊತೆ ನಡೆದುಕೊಳ್ಳುತ್ತಿದೆ ಎನ್ನುವುದನ್ನು ವಿವರಿಸುತ್ತಾ, ಕಳೆದ ತಿಂಗಳ 23ರಂದು ಎಚ್‍ಆರ್ ಮ್ಯಾನೇಜರ್ ಅವರನ್ನು ಭೇಟಿಯಾಗುವಂತೆ ನನಗೆ ಕರೆ ಬಂತು. ಹೀಗಾಗಿ ನಾನು ಹೈದರಾಬಾದ್‍ನಲ್ಲಿರುವ ಎಚ್‍ಆರ್ ಮುಖ್ಯಸ್ಥರ ಜೊತೆ ವಿಡಿಯೋ ಚಾಟ್ ಮಾಡುತ್ತಿರುವಾಗ, “ನೀನು ಉದ್ಯೋಗವನ್ನು ತೊರೆಯಬೇಕು. ನಿನಗೆ 2 ವಾರ ಸಮಯವಕಾಶ ಮತ್ತು 2 ತಿಂಗಳ ಮೂಲ ವೇತನ ನೀಡುತ್ತೇವೆ” ಎಂದರು.

ಇದಾದ ಬಳಿಕ 29ರಂದು ಕರೆ ಮಾಡಿ “ಇನ್ನು ಯಾಕೆ ರಾಜೀನಾಮೆ ನೀಡಿಲ್ಲ” ಎಂದು ಪ್ರಶ್ನಿಸಿದರು. ನಾನು “ರಾಜೀನಾಮೆ ನೀಡುವುದಿಲ್ಲ” ಎಂದೆ. ಇದಕ್ಕೆ ಅವರು “ನಿಮ್ಮ ಕಾಂಟ್ರಾಕ್ಟ್ ಟರ್ಮಿನೇಟ್ ಮಾಡುತ್ತೇವೆ. ಈ ರೀತಿ ಮಾಡಿದರೆ ಮುಂದೆ ಬೇರೆ ಯಾವ ಕಂಪೆನಿಯಲ್ಲೂ ಕೆಲಸ ಸಿಗುವುದಿಲ್ಲ” ಎಂದು ಬೆದರಿಸಿದರು. 31 ರಂದು ಕರೆ ಮಾಡಿ, “ನಿನ್ನ ಬದಲಿಗೆ ಬೇರೊಬ್ಬ ಉದ್ಯೋಗಿಯನ್ನು ರೆಫರ್ ಮಾಡು, ಆತನನ್ನು ಕೆಲಸದಿಂದ ತೆಗೆದು ಹಾಕಲಾಗುವುದು” ಎನ್ನುವ ವಿಚಿತ್ರ ಆಫರ್ ನೀಡಿದರು.

ಅದೇ ದಿನ ನನಗೆ ಆಟೋಮೇಟೆಡ್ ಇಮೇಲ್ ಬಂತು. ಅದರಲ್ಲಿ “ಕಂಪನಿಯಲ್ಲಿ ಇದು ನಿನ್ನ ಕೊನೆಯ ದಿನ. ಇಂದಿನಿಂದ ನಿನಗೆ ನೀಡಿರುವ ಕಂಪನಿ ಇಮೇಲ್ ಐಡಿ ಹಾಗೂ ಇತರ ಸೇವೆಗಳನ್ನು ರದ್ದು ಮಾಡಲಾಗುತ್ತಿದೆ” ಎಂದು ತಿಳಿಸಲಾಗಿತ್ತು. ಆದರೆ ಈ ಮೇಲ್ ಬಗ್ಗೆ ಎಚ್.ಆರ್. ಕಡೆಯಿಂದ ಯಾವುದೇ ಅಧಿಕೃತ ಕರೆ ಬರಲಿಲ್ಲ ಎಂದು ಅವರು ತಮ್ಮ ನೋವನ್ನು ತೊಡಿಕೊಂಡಿದ್ದಾರೆ.

ಇದನ್ನೂ ಓದಿ:ಟೆಕ್ಕಿಗಳನ್ನು ಮನೆಗೆ ಕಳುಹಿಸಬೇಡಿ, ಸಮಸ್ಯೆಗೆ ಪರಿಹಾರವಿದೆ: ಕಂಪೆನಿಗಳಿಗೆ ಇನ್ಫಿ ಮೂರ್ತಿ ಸಲಹೆ

ಇದನ್ನೂ ಓದಿ: ಎಂಜಿನಿಯರಿಂಗ್ ಓದುತ್ತಿರುವ ಮತ್ತು ಮುಂದೆ ಓದಲಿರುವ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್

Share This Article
Leave a Comment

Leave a Reply

Your email address will not be published. Required fields are marked *