ದಾವಣಗೆರೆ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S. Yediyurappa) ಅವರನ್ನು ವೀರಶೈವ ಲಿಂಗಾಯತ ಮಹಾಸಭೆಯ (All India Veerashaiva Lingayat Mahasabha) ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಂದು ಸಮಾಜದ ಮುಖಂಡರಿಗೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (M.P Renukacharya) ಮನವಿ ಮಾಡಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪನವರು ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳನ್ನು ಒಂದು ಮಾಡಿದ್ದರು. ಗುರು ವಿರಕ್ತರನ್ನು ಒಂದೇ ವೇದಿಕೆಯ ಮೇಲೆ ತಂದಿದ್ದರು. ವೀರಶೈವ ಲಿಂಗಾಯತ ಎರಡು ಒಂದೇ ಎಂದು ಸರ್ಕಾರದ ವಿರುದ್ದವೇ ಗುಡುಗಿದ್ದರು. ಆ ಸಂದರ್ಭದಲ್ಲಿ ಯಡಿಯೂರಪ್ಪನವರು ಕೂಡ ಸಾಥ್ ನೀಡಿದ್ದರು ಎಂದರು.
ಯಡಿಯೂರಪ್ಪನವರು ಕೂಡ ಸಮಾಜದ ಎಲ್ಲಾ ಒಳ ಪಂಗಡಗಳನ್ನು ಒಂದು ಮಾಡಲು ಶ್ರಮಿಸಿದ್ದಾರೆ. ಅದ್ದರಿಂದ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ್ ಖಂಡ್ರೆ, ರಾಜ್ಯಾಧ್ಯಕ್ಷ ಶಂಕರ್ ಬಿದರಿಯವರಿಗೆ ಮನವಿ ಮಾಡುತ್ತೇವೆ. ರಾಷ್ಟ್ರೀಯ ಅಧ್ಯಕ್ಷರಾಗಿ ಬಿ.ಎಸ್ ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಬೇಕು ಎಂದರು.

