– ಸಿದ್ದರಾಮಯ್ಯ ಹಳೇ ಲೆಕ್ಕ ಚುಕ್ತಾಕ್ಕೆ ವೇದಿಕೆ ಸಜ್ಜು
ಬಳ್ಳಾರಿ: ಸಿಎಂ ಸಿದ್ದರಾಮಯ್ಯ (Siddaramaiah) ಹಳೇ ಲೆಕ್ಕ ಚುಕ್ತಾ ಮಾಡಲು ಬಿಜೆಪಿಯಿಂದ ಬಳ್ಳಾರಿಯಲ್ಲಿ ವೇದಿಕೆ ಸಜ್ಜಾಗಿದೆ. ಜ.17 ರಂದು ಬಳ್ಳಾರಿ ಟು ಬೆಂಗಳೂರು 300 ಕಿ.ಮೀ ಪಾದಯಾತ್ರೆಗೆ ಬಿಜೆಪಿ ಸಿದ್ಧತೆ ನಡೆಸಿದೆ.
ಶಾಸಕ ಜನಾರ್ದನ ರೆಡ್ಡಿ (Janardhana Reddy) ಮನೆ ಮುಂದೆ ನಡೆದ ಗಲಭೆ ಪ್ರಕರಣ (Ballari Violence) ಸಿಬಿಐಗೆ ಕೊಡಬೇಕು. ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಬಂಧನ ಆಗಬೇಕು ಎಂದು ಈ ವೇಳೆ ಬಿಜೆಪಿ ನಾಯಕರು ಸರ್ಕಾರಕ್ಕೆ ಪಟ್ಟು ಹಿಡಿಯಲಿದ್ದಾರೆ. ಅದೇ ದಿನ ಬೃಹತ್ ಸಮಾವೇಶದ ಮೂಲಕವೂ ಸರ್ಕಾರಕ್ಕೆ ಟಕ್ಕರ್ ಕೊಡಲು ಕೆಸರಿ ಪಡೆ ಸಜ್ಜಾಗಿದೆ.
ಪಾದಯಾತ್ರೆ ಮೂಲಕ ಸಿದ್ದರಾಮಯ್ಯ ಅವರ ಹಳೆಯ ಲೆಕ್ಕ ಚುಕ್ತಾ ಮಾಡಲು ಬಿಜೆಪಿ ಮುಂದಾಗಿದೆ. ಅಂದು ರೆಡ್ಡಿ ಬ್ರದರ್ಸ್ ವಿರುದ್ಧ ಸಿದ್ದರಾಮಯ್ಯ ಪಾದಯಾತ್ರೆ ನಡೆಸಿದ್ದರು. ಈಗ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗಣಿಧಣಿಗಳ ರಿವೆಂಜ್ ಪಾಲಿಟಿಕ್ಸ್ ಶುರುವಾಗಿದೆ. ಮುಡಾ ಪಾದಯಾತ್ರೆ ಬಳಿಕ ಬಳ್ಳಾರಿ ಟು ಬೆಂಗಳೂರು ಪಾದಯಾತ್ರೆ ನಡೆಯುತ್ತಿದ್ದು, ಬಿಜೆಪಿ ಪಾಳಯದಲ್ಲಿ ಉತ್ಸಾಹ ಜೋರಾಗಿದೆ. ಇದನ್ನೂ ಓದಿ: ರೆಡ್ಡಿ ಸಂಪ್ರದಾಯದ ಪ್ರಕಾರ ಹೂಳಬೇಕು, ರಾಜಶೇಖರ್ ದೇಹವನ್ನು ಸುಟ್ಟಿದ್ದು ಯಾಕೆ: ಶ್ರೀರಾಮುಲು ಪ್ರಶ್ನೆ
ಗೊಂದಲದಲ್ಲಿ ರಾಜ್ಯ ನಾಯಕರು
ಬಳ್ಳಾರಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ರಾಜ್ಯ ಬಿಜೆಪಿ ನಾಯಕರು ಪೇಚಿಕೆ ಸಿಲುಕಿದ್ದಾರೆ. ರೆಡ್ಡಿ ರಾಮುಲು ನಡುವೆ ಗಲಭೆ ವಿರುದ್ಧದ ಹೋರಾಟದಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಗಲಭೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲು ಜನಾರ್ದನ ರೆಡ್ಡಿ ಪ್ಲ್ಯಾನ್ ಮಾಡಿದ್ರೆ, ಇದೇ ವಿಚಾರ ಇಟ್ಕೊಂಡು ಪಾದಯಾತ್ರೆ ಮಾಡೋಣ ಎಂದು ರಾಮುಲು ಹೇಳಿದ್ದಾರೆ.
ಇಬ್ಬರ ಪ್ಲ್ಯಾನ್ ಕೇಳಿ ಯಾವುದನ್ನ ಮಾಡಬೇಕು ಯಾವುದನ್ನ ಬಿಡಬೇಕು ಎನ್ನುವ ಗೊಂದಲದಲ್ಲಿ ಬಿಜೆಪಿ ನಾಯಕರಿದ್ದಾರೆ. ಒಬ್ಬರ ಪ್ಲಾನ್ ಒಪ್ಪಿದರೆ ಇನ್ನೊಬ್ಬರಿಗೆ ಸಿಟ್ಟು, ಹೀಗಾಗಿ ರಾಜ್ಯ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಸದ್ಯ ಬಳ್ಳಾರಿ ಗಲಭೆ ವಿಚಾರವನ್ನ ದೊಡ್ಡದು ಮಾಡಲು ಮನಸ್ಸಿಲ್ಲದೇ ರಾಜ್ಯ ನಾಯಕರು ಸುಮ್ಮನಿದ್ದಾರೆ.
ಇದರ ನಡುವೆ ಶನಿವಾರ (ಜ.10) ಜನಾರ್ದನ ರೆಡ್ಡಿ ಮಾತ್ರ ಬಿಜೆಪಿ ರಾಜ್ಯ ನಾಯಕರನ್ನ ಭೇಟಿ ಮಾಡಿದ್ರು. ಭೇಟಿ ಮಾಡಿ ಪ್ರತಿಭಟನೆ ನಡೆಸುವ ಬಗ್ಗೆ ಚರ್ಚೆ ಮಾಡಿದರು. ಆದ್ರೆ ರಾಮುಲು ಮಾತ್ರ ಈ ಬಗ್ಗೆ ರಾಜ್ಯ ನಾಯಕರ ಭೇಟಿಗೆ ಹೋಗದೇ ಬಳ್ಳಾರಿಯಲ್ಲೆ ಉಳಿದಿದ್ದು, ಪ್ರತ್ಯೇಕವಾಗಿ ಮತ್ತೆ ರಾಜ್ಯ ನಾಯಕರ ಭೇಟಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಬುಲೆಟ್ ರಹಸ್ಯ ಬಯಲು – ಬಿಜೆಪಿಯ 13 ಜನ ಸೇರಿ 26 ಮಂದಿ ಅರೆಸ್ಟ್


