ದಾಂಡೇಲಿ ವಕೀಲ ಅಜಿತ್ ನಾಯ್ಕ ಹತ್ಯೆ ಕೇಸ್;‌ ಆರೋಪಿ ದೋಷಿ ಅಂತ ಕೋರ್ಟ್‌ ತೀರ್ಪು

2 Min Read

– ಜ.13 ಕ್ಕೆ ಶಿಕ್ಷೆ ಪ್ರಕಟ

ಕಾರವಾರ: 2018 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಹಿರಿಯ ವಕೀಲ, ಸಮಾಜಮುಖಿ ಹೋರಾಟಗಾರ ಅಜಿತ್ ನಾಯ್ಕ ಅವರ ಬರ್ಬರ ಹತ್ಯೆ ಪ್ರಕರಣದ ತೀರ್ಪು ಇಂದು ಹೊರಬಿದ್ದಿದೆ. ಪ್ರಕರಣದ ಆರೋಪಿ ಪಾಂಡುರಂಗ ದೋಷಿ ಎಂದು ಕೋರ್ಟ್‌ ತೀರ್ಪು ನೀಡಿದೆ.

ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ ಕಿಣಿ, ಯಲ್ಲಾಪುರ ಸಂಚಾರಿ ಪೀಠದಲ್ಲಿ ತೀರ್ಪು ನೀಡಿದ್ದಾರೆ. ನ್ಯಾಯಾಲಯ ತನ್ನ ತೀರ್ಪಿನಲ್ಲಿ ಪ್ರಮುಖ ಆರೋಪಿ ಪಾಂಡುರಂಗ ಮಾರುತಿ ಕಾಂಬಳೆ ವಿರುದ್ಧ ಆರೋಪ ಸಾಬೀತಾಗಿದೆ ಎಂದಿದ್ದು, ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆಯ ಪ್ರಮಾಣವನ್ನು ಜ.13 ರಂದು ಶಿರಸಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ ನಾಲ್ವರು ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ಅಜಿತ್ ನಾಯ್ಕ ಅವರ ಪರವಾಗಿ ಪಬ್ಲಿಕ್ ಪ್ರೊಸಿಕ್ಯೂಟರ್ ರಾಜೇಶ ಮಳಗೀಕರ ಅವರು ವಾದ ಮಂಡಿಸಿ, ದೃಢ ಸಾಕ್ಷ್ಯಾಧಾರಗಳ ಮೂಲಕ ಪ್ರಮುಖ ಆರೋಪಿಗೆ ದೋಷಾರೋಪಣೆ ಸಾಬೀತುಪಡಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸಿಪಿಐ ಅನೀಸ್ ಮುಜಾವರ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪಿ.ಸಿ. ಮಂಜುನಾಥ ಹೆಚ್. ಶೆಟ್ಟಿ ಸಹಾಯಕ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಜಮೀನು ವಿವಾದದ ವಕೀಲಿಕೆ ತೆಗೆದುಕೊಂಡಿದ್ದ ವಕೀಲ ಅಜಿತ್ ನಾಯ್ಕರನ್ನ ಐದು ಜನ ಬರ್ಬರವಾಗಿ ಹತ್ಯೆ ಮಾಡಿದ್ದರು. ಸಾಂದರ್ಭಿಕ ಸಾಕ್ಷಿ, ವೈಜ್ಞಾನಿಕ ಸಾಕ್ಷ್ಮಿ ಮೇಲೆ ಪ್ರಕರಣದ ತೀರ್ಪು ನೀಡಲಾಗಿದೆ.

ಜೈಲಿನಲ್ಲೇ ಕುಳಿತು ಜಮೀನು ಮಾರಾಟ ಯತ್ನ:
ಹತ್ಯೆಯ ನಂತರ ಆರೋಪಿಗಳು ಜೈಲಿನಲ್ಲೇ ಇದ್ದುಕೊಂಡು, ಕಾಳಿನದಿ ದಂಡೆಯಲ್ಲಿರುವ ವಿವಾದಿತ ಜಮೀನನ್ನು ಪ್ರವಾಸೋದ್ಯಮಿಯೊಬ್ಬರಿಗೆ ಮಾರಾಟ ಮಾಡಲು ಮುಂದಾಗಿ, ಲಕ್ಷಾಂತರ ರೂಪಾಯಿ ಮುಂಗಡ ಪಡೆದು ಫಜೀತಿಗೆ ಸಿಲುಕಿದ್ದಾರೆ. ಈ ವೇಳೆ ಪಿಟಿಸಿಎಲ್ ಕಾಯ್ದೆ ಆರೋಪಿಗಳಿಗೆ ಮುಳುವಾಗಿದೆ ಎಂದು ತಿಳಿದು ಬಂದಿದೆ.

ಸಾಮಾಜಿಕ ಹೋರಾಟಗಾರ
ಅಜಿತ್ ನಾಯ್ಕ ಅವರು ಕೇವಲ ವಕೀಲ ಮಾತ್ರವಲ್ಲ, ಬಹುಮುಖ ವ್ಯಕ್ತಿತ್ವದ ಹೋರಾಟಗಾರ ಮತ್ತು ಚಿಂತಕರಾಗಿದ್ದರು. ದಾಂಡೇಲಿ ತಾಲೂಕು ರಚನೆಗೆ ಮುನ್ನಡೆ ಹಾಗೂ ದಾಂಡೇಲಿ ನ್ಯಾಯಾಲಯ ಸ್ಥಾಪನೆಗೆ ಹೋರಾಟಕ್ಕಾಗಿ 45 ದಿನಗಳ ಧರಣಿ ಸತ್ಯಾಗ್ರಹದ ಮೂಲಕ ‘ದಾಂಡೇಲಿ ಬಚಾವೋ ಆಂದೋಲನ’ ನಡೆಸಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದರು.

Share This Article