ಬೆಂಗಳೂರು: ಕೇರಳದಲ್ಲಿ (Kerala) ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲೆಯಾಳಂ (Malayalam) ಕಡ್ಡಾಯವಾಗಿ ಮೊದಲ ಭಾಷೆಯಾಗಿ ಕಲಿಯಬೇಕು ಎಂಬ ಕೇರಳ ಸರ್ಕಾರದ ನಿಯಮ ವಿಚಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ (Purushottam Bilimale) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಭಾರತದ ಸಂವಿಧಾನದ ಪ್ರಕಾರ ಭಾಷೆ ಉಳಿಸಲು ಕಾಯ್ದೆ ಮಾಡಿಕೊಳ್ಳಬಹುದು. ಕರ್ನಾಟಕದಲ್ಲೂ ಕಾಯ್ದೆ ಇದೆ. ಆದರೆ, ಕಾಯ್ದೆ ಅಲ್ಲಿನ ಭಾಷಿಕ ಅಲ್ಪಸಂಖ್ಯಾತರನ್ನ ಹೇಗೆ ಸಂರಕ್ಷಿಸುತ್ತದೆ ಅನ್ನೋದು ಮುಖ್ಯ. ಕಾಸರಗೋಡಿನಲ್ಲಿ 90% ಕನ್ನಡ ಮಾತಾಡುತ್ತಿದ್ದರೂ ಕೇರಳಕ್ಕೆ ಸೇರಿದೆ. ಈ ಕಾಯ್ದೆ ತರುವ ಮುಂಚೆ 8 ಲಕ್ಷ ಕನ್ನಡಿಗರ ಬಗ್ಗೆ ಯೋಚನೆ ಮಾಡಬೇಕಿತ್ತು. ಅಲ್ಲಿ ಮಲೆಯಾಳಂ ಕಡ್ಡಾಯ ಮಾಡಲಾಗಿದೆ. ಹಾಗೇ ಮಲೆಯಾಳಂನ್ನು ಎಲ್ಲಾ ಕಡೆಯೂ ಪ್ರಚಾರ ಮಾಡಿ ಎಂದು ಕಾಯ್ದೆ ಆಗಿದೆ. ಕೇರಳದಲ್ಲಿ ಎಲ್ಲ ಕಡೆ ಮಲೆಯಾಳಂ ಕಡ್ಡಾಯ ಮಾಡಿದ್ದಾರೆ. ಅವರ ಕಾಯ್ದೆಯ 6ನೇ ಅಧಿಸೂಚಿಯಲ್ಲಿ ಭಾಷಿಕ ಅಲ್ಪಸಂಖ್ಯಾತರನ್ನು ಹೊರತುಪಡಿಸಬೇಕು. ಅವರನ್ನು ಹೊರತುಪಡಿಸಿ ಕೇರಳ ಕಡ್ಡಾಯ ನಿಯಮ ಮಾಡಬೇಕು ಅಂತ ಆಗ್ರಹ ಮಾಡಿದರು. ಇದನ್ನೂ ಓದಿ: ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ತಂಗಡಗಿ
ರಾಜ್ಯದ ನಡುವೆ ಬಿಕ್ಕಟ್ಟು ಹೆಚ್ಚಾಗದಂತೆ ಕೇಂದ್ರ ಸರ್ಕಾರ ಕಾರ್ಯ ಮಾಡಬೇಕು. ಗಡಿ ಭಾಗದ ಅಲ್ಪಸಂಖ್ಯಾತರ ಹಕ್ಕಿಗೆ ಧಕ್ಕೆ ಆದಾಗ ಭಾಷಾ ನಿರ್ದೇಶಕರನ್ನು ರಾಷ್ಟ್ರಪತಿಗಳು ಕಳಿಸಬೇಕು. ಪರಿಸ್ಥಿತಿ ಅಧ್ಯಯನ ಮಾಡಿ ಕೇಂದ್ರ ಹಾಗೂ ಎರಡು ರಾಜ್ಯಕ್ಕೆ ಕಳುಹಿಸಬೇಕು. ನಾವು ರಾಷ್ಟ್ರಪತಿಗಳಿಗೆ ಪತ್ರ ಬರೆಯಬೇಕು ಎಂದು ಸಿಎಂ ಹಾಗೂ ಸಚಿವರಿಗೆ ಹೇಳಿದ್ದೇನೆ. ಪ್ರಾಧಿಕಾರ ಭಾಷಾ ನೀತಿಯ ಬಗ್ಗೆ ವರದಿಯನ್ನು ಸರ್ಕಾರಕ್ಕೆ ಕೊಡುತ್ತೇವೆ. ನಮ್ಮಲ್ಲಿ ಮಾತ್ರ ಭಾಷೆ ಹಾಗೂ ಕನ್ನಡ ಎರಡನೇ ಭಾಷೆಯಾಗಿ ಸ್ವೀಕರಿಸುವ ಹಕ್ಕು ಭಾಷಿಕ ಅಲ್ಪಸಂಖ್ಯಾತರಿಗೆ. ಆದರೆ, ಕೇರಳ ಸರ್ಕಾರ ತಪ್ಪು ಮಾಡಿದ್ದು, ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಎಂದು ಬಿಲಿಮಲೆ ಒತ್ತಾಯ ಮಾಡಿದರು.
ರಾಷ್ಟ್ರಪತಿಗಳು ಮತ್ತು ಕೇಂದ್ರ ಸರ್ಕಾರ ಕೂಡಲೇ ಮಧ್ಯೆ ಪ್ರವೇಶ ಮಾಡಬೇಕು. ಅಲ್ಪಸಂಖ್ಯಾತ ಭಾಷಿಕರಿಗೆ ಗೌರವ ಕೊಡುವ ಕೆಲಸ ಆಗಬೇಕು. ಅಲ್ಪಸಂಖ್ಯಾತ ಭಾಷಿಕರನ್ನ ಹೊರತುಪಡಿಸಿ ಈ ಬಿಲ್ ತಿದ್ದುಪಡಿ ಮಾಡಬೇಕು. ಇಲ್ಲದೆ ಹೋದ್ರೆ ಈ ಭಾಗದಲ್ಲಿ ಕನ್ನಡವೇ ಸತ್ತು ಹೋಗುತ್ತದೆ. ಮಲೆಯಾಳಂ ಕಡ್ಡಾಯ ಮಾಡೋ ಮೂಲಕ ಕನ್ನಡವನ್ನ ಸಂಪೂರ್ಣವಾಗಿ ಕಡೆಗಣಿಸೋ ಕೆಲಸ ಕೇರಳ ಸರ್ಕಾರ ಮಾಡ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ – ಕೇರಳ ಸರ್ಕಾರದ ನಡೆಗೆ ಸಿಎಂ ಸಿದ್ದರಾಮಯ್ಯ ಖಂಡನೆ

