ಆರ್‌ಸಿಬಿ ತವರಿನ ಪಂದ್ಯಗಳು ರಾಯ್‌ಪುರ ಅಥವಾ ಇಂದೋರ್‌ಗೆ ಶಿಫ್ಟ್‌?

2 Min Read

ಬೆಂಗಳೂರು: ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಬೆಂಗಳೂರಿನಲ್ಲಿ (Bengaluru) ಆಡುವುದು ಅನುಮಾನ ಎನ್ನಲಾಗುತ್ತಿದ್ದು ಮಧ್ಯಪ್ರದೇಶದ ಇಂದೋರ್‌ (Indore) ಅಥವಾ ಛತ್ತೀಸ್‌ಗಢದ ರಾಯ್‌ಪುರದಲ್ಲಿ(Raipur) ತವರಿನ ಪಂದ್ಯ ನಡೆಯುವ ಸಾಧ್ಯತೆಯಿದೆ.

ಹೌದು. ಆರ್‌ಸಿಬಿ ಚಾಂಪಿಯನ್‌ ಬಳಿಕ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ ಬಳಿಕ ಚಿನ್ನಸ್ವಾಮಿಯಲ್ಲಿ ಸುರಕ್ಷತೆ ಪ್ರಶ್ನೆ ಎದ್ದಿದೆ. ಈ ಬಾರಿಯ ಐಪಿಎಲ್‌ ಪಂದ್ಯವನ್ನು ಬೆಂಗಳೂರಿನಲ್ಲಿ ನಡೆಸುವ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (KSCA) ನೂತನ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸಿದರೂ ಆರ್‌ಸಿಬಿ ತಂಡ ಇಲ್ಲಿಯವರೆಗೆ ಕೆಎಸ್‌ಸಿಎಯನ್ನು ಸಂಪರ್ಕಿಸಿಲ್ಲ.

ಈ ಮೊದಲು ಮಹಾರಾಷ್ಟ್ರದ ಪುಣೆಗೆ ಆರ್‌ಸಿಬಿ ಪಂದ್ಯಗಳು ಸ್ಥಳಾಂತರವಾಗಲಿದೆ ಎಂಬ ವರದಿಯಾಗಿತ್ತು. ಆದರೆ ಈಗ ರಾಜಸ್ಥಾನ ರಾಯಲ್ಸ್‌ ಪಂದ್ಯಗಳು ಪುಣೆಯಲ್ಲಿ ನಡೆಯಲಿದೆ. ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ​ ಜೊತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಆರ್‌ಆರ್‌ ಪಂದ್ಯಗಳು ಪುಣೆಗೆ ಸ್ಥಳಾಂತರವಾಗಿದೆ.  ಇದನ್ನೂ ಓದಿ: ಇಂದಿನಿಂದ ಮಹಿಳಾ ಪ್ರೀಮಿಯರ್‌ ಲೀಗ್‌ – ಉದ್ಘಾಟನಾ ಪಂದ್ಯದಲ್ಲಿ ಹಾಲಿ Vs ಮಾಜಿ ಚಾಂಪಿಯನ್ಸ್‌ಗಳ ಹಣಾಹಣಿ

ಛತ್ತೀಸ್‌ಗಢದ ರಾಯ್‌ಪುರ ಆರ್‌ಸಿಬಿಯ ಹೊಸ ತವರು ಆಗಲು ಮುಂಚೂಣಿಯಲ್ಲಿದ್ದು ಮಧ್ಯಪ್ರದೇಶದ ಇಂದೋರ್ ಕೂಡ ರೇಸ್‌ನಲ್ಲಿದೆ ಎಂದು ವರದಿಯಾಗಿದೆ.

ಆಂಧ್ರಪ್ರದೇಶ ವಿರುದ್ಧ ದೆಹಲಿ ತಂಡಗಳ ನಡುವಿನ ವಿಜಯ್‌ ಹಜಾರೆ ಟೂರ್ನಿ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯಬೇಕಿತ್ತು. ಕೊನೆಕ್ಷಣದವರೆಗೂ ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಯಲಿದೆ ಎನ್ನಲಾಗುತ್ತಿತ್ತು. ಆದರೆ ಕೊನೆಗೆ ಈ ಪಂದ್ಯಗಳು ಬೆಂಗಳೂರು ವಿಮಾನ ನಿಲ್ದಾಣ ಬಳಿ ಇರುವ ಬಿಸಿಸಿಐ (BCCI) ನಿರ್ಮಾಣ ಮಾಡಿರುವ ಸೆಂಟರ್‌ ಆಫ್‌ ಎಕ್ಸೆಲೆನ್ಸ್‌ (Centre of Excellence) ಮೈದಾನದಲ್ಲಿ ನಡೆದಿತ್ತು. ಇದನ್ನೂ ಓದಿ: ಟೀಂ ಇಂಡಿಯಾಗೆ ಬಿಗ್‌ ಶಾಕ್‌ – ತಿಲಕ್‌ ವರ್ಮಾ T20 ವಿಶ್ವಕಪ್‌ ಆಡೋದು ಡೌಟ್!

ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜಿಸುವ ಸಂಬಂಧ ನ್ಯಾ. ಮೈಕಲ್ ಡಿ ಕುನ್ಹಾ ವರದಿಯಲ್ಲಿ ಉಲ್ಲೇಖಿಸಿರುವ ಸಮಸ್ಯೆಗಳನ್ನು ಬಗೆಹರಿಸಲು ಈಗ ಕೆಎಸ್‌ಸಿಎ ಈಗ ಮುಂದಾಗಿದೆ. ಅಂಬುಲೆನ್ಸ್‌ ಓಡಾಟಕ್ಕೆ ಜಾಗ, ಪಾರ್ಕಿಂಗ್ ವ್ಯವಸ್ಥೆ, ತುರ್ತು ನಿರ್ಗಮನ, ಅಗಲವಾದ ಗೇಟ್‌ಗಳು, ಮಹಿಳೆಯರಿಗೆ ಪ್ರತ್ಯೇಕ ಮಾರ್ಗ ಸೇರಿ ಎಲ್ಲಾ ಮಾರ್ಗಸೂಚಿಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ.

ಈ ಬಾರಿಯ ಐಪಿಎಲ್ ಮಾರ್ಚ್ 21 ರಂದು ಪ್ರಾರಂಭವಾಗುವ ಸಾಧ್ಯತೆಯಿದೆ. ಫೆಬ್ರವರಿಯಲ್ಲಿ ಕೊನೆಯಲ್ಲಿ ಐಪಿಎಲ್‌ ವೇಳಾಪಟ್ಟಿ ಪ್ರಕಟವಾಗಲಿದೆ.

Share This Article