ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರಿಂದ ಅಂಕಿತ

1 Min Read

ಬೆಂಗಳೂರು: ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕಕ್ಕೆ (Karnataka Rent Amendment Bill) ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ (Thawarchand Gehlot) ಅಂಕಿತ ಹಾಕಿದ್ದಾರೆ. ಗೆಜೆಟ್ ಪ್ರಕಟಣೆ ಮೂಲಕ ಕರ್ನಾಟಕ ಬಾಡಿಗೆ ತಿದ್ದುಪಡಿ ಕಾಯ್ದೆ ಅಧಿಕೃತವಾಗಿ ಜಾರಿ ಬರಲಿದೆ.

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಪಾಸ್ ಮಾಡಿ ರಾಜ್ಯಪಾಲರ ಅಂಕಿತಕ್ಕೆ ಸರ್ಕಾರ ಕಳುಹಿಸಿತ್ತು. ಈ ಕಾಯ್ದೆಯಲ್ಲಿ ಬಾಡಿಗೆದಾರರು ಮತ್ತು ಮನೆ ಮಾಲೀಕರ ನಡುವಿನ ವಿವಾದಗಳನ್ನು ಬಗೆಹರಿಸಲು, ಪಾರದರ್ಶಕತೆ ಕಾಪಾಡಲು ಉದ್ದೇಶಿಸಲಾಗಿದೆ.

ಬಾಡಿಗೆ ಮನೆಗಳಲ್ಲಿ ವಾಸಿಸುವವರು ಮತ್ತು ಮನೆ ಮಾಲೀಕರು ಇಬ್ಬರಿಗೂ ಹೊಸ ನಿಯಮಗಳು ಅನ್ವಯಿಸುತ್ತವೆ. ಹೊಸ ನಿಯಮದಂತೆ ಬಾಡಿಗೆದಾರರು, ಮಾಲೀಕರು ನಿಯಮ ಉಲ್ಲಂಘಿಸಿದರೆ ದೊಡ್ಡ ಮೊತ್ತದ ದಂಡ ಬೀಳಲಿದೆ.

ಬಾಡಿಗೆ ಮನೆಯನ್ನು ಮಾಲೀಕರ ಅನುಮತಿ ಇಲ್ಲದೆ ಬೇರೆಯವರಿಗೆ ಬಾಡಿಗೆಗೆ ನೀಡಿದರೆ, ಹೊಸ ಕಾಯ್ದೆಯನ್ವಯ ಈಗಿನ ದಂಡದ ಮೊತ್ತವನ್ನು 5,000 ರೂ.ನಿಂದ 50,000 ರೂ.ಗೆ ಹೆಚ್ಚಳ ಮಾಡಲಾಗುವುದು. ಅನಧಿಕೃತವಾಗಿ ಕಾರ್ಯನಿರ್ವಹಿಸುವ ಬ್ರೋಕರ್‌ಗಳಿಗೂ ಸರ್ಕಾರದ ಕಾಯ್ದೆ ಬಿಸಿ ಮುಟ್ಟಿಸಲಿದೆ. ಕಾಯ್ದೆಯ ಸೆಕ್ಷನ್ 20ರ ಅಡಿಯಲ್ಲಿ ನೋಂದಣಿ ಮಾಡಿಸದ ಬ್ರೋಕರ್‌ಗಳಿಗೆ ದಿನಕ್ಕೆ 25,000 ರೂ. ದಂಡ ಬೀಳಲಿದೆ.

ಈ ಮೊದಲು ಇದು 2000 ರೂಪಾಯಿ ಇತ್ತು. ಮತ್ತೆ ಮತ್ತೆ ತಪ್ಪು ಮಾಡಿದರೆ, ದಿನಕ್ಕೆ 20,000 ರೂಪಾಯಿ ಹೆಚ್ಚುವರಿ ದಂಡ ಹಾಕಲಾಗುವುದು. ಹಳೆಯ ಬಾಡಿಗೆ ಕಾಯ್ದೆಯಲ್ಲಿ ಬಾಡಿಗೆದಾರ-ಮಾಲೀಕರ ನಡುವಿನ ವ್ಯಾಜ್ಯಗಳಲ್ಲಿ ಸಣ್ಣ ಪುಟ್ಟ ಅಪರಾಧಗಳಿಗೆ ಜೈಲು ಸಜೆ ಇತ್ತು. ಈಗ ತಿದ್ದುಪಡಿ ಕಾಯ್ದೆಯಲ್ಲಿ ಜೈಲು ಸಜೆ ತೆಗೆಯಲಾಗಿದೆ.

ಬಾಡಿಗೆದಾರರು ವಿರುದ್ಧ ಮಾಲೀಕರು ಹಾಗೂ ಮಾಲೀಕರ ವಿರುದ್ಧ ಬಾಡಿಗೆದಾರರು ಆರೋಪ ಹೊರಿಸುವುದು ಸಾಮಾನ್ಯ. ಬಾಡಿಗೆ ಸಂಬಂಧ ಘರ್ಷಣೆ, ವಿವಾದ ಉಂಟಾಗಿ ಪೊಲೀಸ್‌ ಸ್ಟೇಷನ್‌, ಕೋರ್ಟ್‌ ಮೊರೆ ಹೋಗುವುದು, ನ್ಯಾಯಕ್ಕಾಗಿ ವರ್ಷಾನುಗಟ್ಟಲೆ ಅಲೆಯುವುದು ಸಾಮಾನ್ಯ. ಹೊಸ ಕಾಯ್ದೆ ಜಾರಿಗೊಂಡಿರುವುದು ಇಂತಹ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಲಿದೆ.

Share This Article