– ದಕ್ಷಿಣ ಭಾರತದ ರಾಜ್ಯಗಳೇ ಟಾರ್ಗೆಟ್, ಮಹಾರಾಷ್ಟ್ರ ಬಳಿಕ ಕರ್ನಾಟಕದಲ್ಲಿ ಅತಿ ಹೆಚ್ಚು ವಂಚನೆ
ನವದೆಹಲಿ: ಭಾರತದಲ್ಲಿ ಸೈಬರ್ ಅಪರಾಧ ಮತ್ತು ವಂಚನೆ ಪ್ರಕರಣಗಳು ಆತಂಕಕಾರಿ ದರದಲ್ಲಿ ಏರಿಕೆಯಾಗಿವೆ. ದೇಶದಲ್ಲಿ ಕಳೆದ ಆರು ವರ್ಷಗಳಲ್ಲಿ ಡಿಜಿಟಲ್ ಅರೆಸ್ಟ್, ಆನ್‌ಲೈನ್, ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಸೇರಿ 52,976 ಕೋಟಿ ರೂ.ಗೂ ಹೆಚ್ಚು ಹಣ ವಂಚನೆಯಾಗಿದೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (Indian Cyber Crime Coordination Centre) ಮಾಹಿತಿ ನೀಡಿದೆ.
ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ನ ದತ್ತಾಂಶದ ಪ್ರಕಾರ, 2025ರ ಒಂದೇ ವರ್ಷದಲ್ಲಿ ಜನರು ಸುಮಾರು 19,812.96 ಕೋಟಿ ರೂ. ಕಳೆದುಕೊಂಡಿದ್ದಾರೆ. 21.7 ಲಕ್ಷಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ಇದಕ್ಕೂ ಮುನ್ನ 2024ರಲ್ಲಿ ಜನರು 22,849.49 ಕೋಟಿ ರೂ. ನಷ್ಟವಾಗಿ, 19.1 ಲಕ್ಷ ದೂರುಗಳು ದಾಖಲಾಗಿದ್ದವು. 2023ರಲ್ಲಿ 13.10 ಲಕ್ಷ ದೂರುಗಳು ಹಾಗೂ 7,463.2 ಕೋಟಿ ರೂ. ನಷ್ಟವಾಗಿತ್ತು. 2022ರಲ್ಲಿ 2,290.23 ಕೋಟಿ ರೂ. ನಷ್ಟ ಮತ್ತು 6.94 ಲಕ್ಷ ದೂರುಗಳು, 2021ರಲ್ಲಿ 551.65 ಕೋಟಿ ರೂ. ನಷ್ಟ ಹಾಗೂ 2020ರಲ್ಲಿ 8.56 ಕೋಟಿ ರೂ. ಕಳೆದುಕೊಂಡಿದ್ದರು ಎಂದು ತಿಳಿಸಿದೆ. ಇದನ್ನೂ ಓದಿ: ಕೆಡಿಪಿ ಸಭೆ | ಖಂಡ್ರೆ ಎದುರೇ ಕೈ ಕೈ ಮಿಲಾಯಿಸಿಕೊಂಡ MLA, MLC
ಅತಿ ಹೆಚ್ಚು ಸೈಬರ್ ವಂಚನೆ ನಡೆದ ರಾಜ್ಯಗಳು:
ರಾಜ್ಯವಾರು ವಿಶ್ಲೇಷಣೆಯಲ್ಲಿ, ಮಹಾರಾಷ್ಟ್ರವು ಸೈಬರ್ ವಂಚನೆಗಳಿಂದ ಹೆಚ್ಚು ಪರಿಣಾಮ ಬೀರಿದೆ. ರಾಜ್ಯದಲ್ಲಿ 3,203 ಕೋಟಿ ರೂ. ನಷ್ಟವಾಗಿದ್ದು, 28.3 ಲಕ್ಷ ದೂರುಗಳು ದಾಖಲಾಗಿವೆ. ಇನ್ನೂ ಕರ್ನಾಟಕದಲ್ಲಿ 2,413 ಕೋಟಿ ರೂ. ವಂಚನೆಯಾಗಿದ್ದು, 21.3 ಲಕ್ಷ ದೂರುಗಳು ದಾಖಲಾಗಿವೆ. ತಮಿಳುನಾಡು 1,897 ಕೋಟಿ ರೂ. ವಂಚನೆ ಹಾಗೂ 12.32 ಲಕ್ಷ ದೂರುಗಳು, ಉತ್ತರ ಪ್ರದೇಶದಲ್ಲಿ 1,443 ಕೋಟಿ ರೂ. ವಂಚನೆ ಹಾಗೂ 27.52 ಲಕ್ಷ ದೂರುಗಳು, ತೆಲಂಗಾಣದಲ್ಲಿ 1,372 ಕೋಟಿ ರೂ. ನಷ್ಟ ಹಾಗೂ 95,000 ದೂರುಗಳು ದಾಖಲಾಗಿವೆ ಎಂದು ತಿಳಿದುಬಂದಿವೆ.
ದೇಶದ ಒಟ್ಟು ಸೈಬರ್ ವಂಚನೆ ಪ್ರಕರಣಗಳಲ್ಲಿ ಕಳೆದುಕೊಂಡ ಹಣದ ಪೈಕಿ ಅರ್ಧಕ್ಕಿಂತ ಹೆಚ್ಚು ನಷ್ಟ ಈ ಐದು ರಾಜ್ಯಗಳಲ್ಲಿ ಸಂಭವಿಸಿದೆ. ಇದರ ಹೊರತಾಗಿ ಗುಜರಾತ್‌ನಲ್ಲಿ 1,312.26 ಕೋಟಿ ರೂ., ದೆಹಲಿಯಲ್ಲಿ 1,163 ಕೋಟಿ ರೂ., ಪಶ್ಚಿಮ ಬಂಗಾಳದಲ್ಲಿ 1,073.98 ಕೋಟಿ ರೂ., ಮಣಿಪುರದಲ್ಲಿ 16.74 ಕೋಟಿ ರೂ. ನಷ್ಟವಾಗಿದೆ.
77% ಹೂಡಿಕೆ ಯೋಜನೆಗಳ ಮೂಲಕ, 8% ಡಿಜಿಟಲ್ ಅರೆಸ್ಟ್‌ನಿಂದ, 7% ಕ್ರೆಡಿಟ್ ಕಾರ್ಡ್ ವಂಚನೆಯಿಂದ, 4% ಸೆಕ್ಸ್ಟಾರ್ಷನ್‌ನಿಂದ, 3% ಇ-ಕಾಮರ್ಸ್ ಮತ್ತು 1% ಅಪ್ಲಿಕೇಶನ್ ಅಥವಾ ಮಾಲ್‌ವೇರ್ ಆಧಾರಿತ ವಂಚನೆಯಿಂದ ಜನರು ಹಣ ಕಳೆದುಕೊಂಡಿದ್ದಾರೆ.
ಜಾಗತಿಕ ಸಮಸ್ಯೆ:
ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಮತ್ತು ಮ್ಯಾನೇಜ್ಮೆಂಟ್ ಸಿಸ್ಟಮ್ ಪ್ರಕಾರ, 2025ರಲ್ಲಿ ಸುಮಾರು 210 ಮಿಲಿಯನ್ ಸೈಬರ್ ವಂಚನೆ ದೂರುಗಳು ದಾಖಲಾಗಿವೆ. ಇವುಗಳಲ್ಲಿ 45% ಆಗ್ನೇಯ ಏಷ್ಯಾದ ದೇಶಗಳಾದ ಕಾಂಬೋಡಿಯಾ, ಮ್ಯಾನ್ಮಾರ್ ಮತ್ತು ಲಾವೋಸ್‌ಗೆ ಸಂಬಂಧಿಸಿವೆ. ಈ ದೂರುಗಳ ವಿವರದಲ್ಲಿ 36% ಹೂಡಿಕೆ ವಂಚನೆ, 27% ಕ್ರೆಡಿಟ್ ಕಾರ್ಡ್ ವಂಚನೆ, 18% ಸೆಕ್ಸ್ಟಾರ್ಷನ್, 10% ಇ-ಕಾಮರ್ಸ್ ವಂಚನೆ, 6% ಡಿಜಿಟಲ್ ಬಂಧನಗಳು ಮತ್ತು 3% ಅಪ್ಲಿಕೇಶನ್ ಅಥವಾ ಮಾಲ್‌ವೇರ್ ವಂಚನೆಗಳಿಂದಾಗಿದೆ.ಇದನ್ನೂ ಓದಿ: ಎತ್ತಿನ ಬಂಡಿಯೊಂದಿಗೆ BTDA ಕಚೇರಿಗೆ ರೈತರ ಮುತ್ತಿಗೆ



