ಅಮೆರಿಕ, ರಷ್ಯಾ ಜಗತ್ತಿನ ಎರಡು ಬಲಿಷ್ಠ ದೇಶಗಳು. ಜಗತ್ತಿನ ಮೇಲೆ ತನ್ನ ಹಿಡಿತವನ್ನು ಸಾಧಿಸೋದಕ್ಕೆ ನಾನಾ ಕಸರತ್ತು ಮಾಡುತ್ತಿರುವ ರಾಷ್ಟ್ರಗಳು. ತಾವು ನೇರವಾಗಿ ಯುದ್ಧ ಮಾಡದಿದ್ದರೂ ಜಗತ್ತಿನ ನಾನಾ ಕಡೆಗಳಲ್ಲಿ ಈ ಎರಡು ದೇಶಗಳು ಯುದ್ಧಗಳನ್ನು ಮಾಡಿಸುತ್ತಿರುತ್ತವೆ. ಇಂತಹ ಎರಡು ಬಲಿಷ್ಠ ದೇಶಗಳು ಇದೀಗ ಗಡಗಡ ನಡುಗುತ್ತಿವೆ. ಅದರಲ್ಲೂ ಅಮೆರಿಕದಲ್ಲಿ ಸೈಕ್ಲೋನ್ ಬಾಂಬ್ ಸ್ಫೋಟಗೊಂಡಿದೆ. ಅದರ ಪರಿಣಾಮ ಅಮೆರಿಕದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಸೈಕ್ಲೋನ್ ಸ್ಫೋಟ ಮಾತ್ರವಲ್ಲದೇ ಅಮೆರಿಕಾದಲ್ಲಿ ವಾಟರ್ ಬಾಂಬ್ ಸಹ ವಿನಾಶವನ್ನು ಸೃಷ್ಟಿಸಿದೆ. ವರ್ಷಾಂತ್ಯದಲ್ಲಿ ಎರಡೆರಡು ಬಾಂಬ್ ಸ್ಫೋಟಗಳು ಅಮೆರಿಕಾವನ್ನು ಬೆಚ್ಚಿ ಬೀಳಿಸಿದೆ. ಅತ್ತ ರಷ್ಯಾ ಸಹ 1891ರಲ್ಲಿ ಕಂಡಿದ್ದ ಭಯಾನಕ ಪರಿಸ್ಥಿತಿಯನ್ನು ಇದೀಗ ಕಾಣುತ್ತಿದೆ. ಹಾಗಿದ್ರೆ ಅಮೆರಿಕ, ರಷ್ಯಾದಲ್ಲಿ ಏನಾಗುತ್ತಿದೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ದೊಡ್ಡಣ್ಣನನ್ನು ಗಡಗಡ ನಡುಗಿಸುತ್ತಿದೆ ಸೈಕ್ಲೋನ್ ಬಾಂಬ್:
ಅಮೆರಿಕದಲ್ಲಿ ಭಾರೀ ಹಿಮಪಾತವಾಗಿದೆ. ಹಿಮದ ಅಬ್ಬರ, ಆರ್ಭಟ, ಉಗ್ರರೂಪಕ್ಕೆ ಅಮೆರಿಕ ತತ್ತರಿಸಿ ಹೋಗಿದೆ. ಅಮೆರಿಕಾದ ಹಲವು ರಾಜ್ಯಗಳಲ್ಲಿ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗಿದೆ. ಮೋಂಟೆನಾದಿಂದ ಮೈನೆ, ಟೆಕ್ಸಾಸ್‌ನಿಂದ ಪೆನ್ಸಿಲ್ವೇನಿಯಾ, ನ್ಯೂಯಾರ್ಕ್‌ನಿಂದ ನ್ಯೂಜೆರ್ಸಿವರೆಗೂ ಹಿಮದಿಂದ ಮುಚ್ಚಿ ಹೋಗಿದೆ. ಒಂದೇ ಸಮನೆ ಸುರಿಯುತ್ತಿರುವ ಹಿಮ, ತಡೆದುಕೊಳ್ಳಲಾಗದಂತ ರಕ್ತ ಹೆಪ್ಪುಗಟ್ಟಿಸೋ ಶೀತಗಾಳಿ ಜನರನ್ನ ಮರುಗಟ್ಟುವಂತೆ ಮಾಡಿದೆ. ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ರಾಜ್ಯಗಳ ಜನ ಈ ಹಿಮದ ತೂಫಾನ್ ಹೊಡೆತಕ್ಕೆ ಅಕ್ಷರಶಃ ಪತರುಗುಟ್ಟಿ ಹೋಗುತ್ತಿದ್ದಾರೆ.
ಒಂದೇ ಸಮನೆ ಸುರಿಯುತ್ತಿರುವ ಹಿಮದ ಪರಿಣಾಮ ರಸ್ತೆಗಳೆಲ್ಲಾ ಸಂಪೂರ್ಣ ಹಿಮಮಯವಾಗಿದ್ದು, ವಾಹನ ಸಂಚಾರಕ್ಕೆ ಭಾರೀ ಅಡ್ಡಿಯಾಗುತ್ತಿದೆ. ರಸ್ತೆಗಳಲ್ಲಿ ಹಿಮದ ಕಾರಣಕ್ಕೆ ವಾಹನಗಳು ನಿಯಂತ್ರಣಕ್ಕೆ ಸಿಗದೇ ಅಪಫಾತಗಳಾಗುತ್ತಿವೆ. ಹೆದ್ದಾರಿಗಳಲ್ಲಿ ಎಲ್ಲೆಂದೆರಲ್ಲಿ ವಾಹನಗಳು ಅಪಘಾತಕ್ಕೊಳಗಾಗುತ್ತಿರುವ ದೃಶ್ಯ ಸಾಮಾನ್ಯ ಎಂಬಂತಾಗಿದೆ.
ದಶಕದಲ್ಲಿ 2ನೇ ಬಾರಿಗೆ ಸ್ಫೋಟಗೊಂಡ ಸೈಕ್ಲೋನ್ ಬಾಂಬ್:
ಕಳೆದ ಒಂದು ದಶಕದಲ್ಲಿ ಅಮೆರಿಕದ ಜನರು ಈ ಪ್ರಮಾಣದ ಹಿಮಪಾತ ಹಾಗೂ ಚಳಿಯನ್ನು ನೋಡುತ್ತಿರುವುದು ಇದು ಎರಡನೇ ಸಲ. ವರ್ಷದ ಆರಂಭ ಕಳೆದ ಜನವರಿಯಲ್ಲೇ ಸೈಕ್ಲೋನ್ ಬಾಂಬ್ ಸ್ಫೋಟಕ್ಕೆ ಅರ್ಧ ಅಮೆರಿಕ ಹಿಮಾಘಾತಕ್ಕೆ ಒಳಗಾಗಿತ್ತು. 7 ರಾಜ್ಯಗಳಲ್ಲಿ ಎಮೆರ್ಜೆನ್ಸಿ ಘೋಷಣೆ ಮಾಡಲಾಗಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲಾಗಿತ್ತು. ಭಾರೀ ಹಿಮಪಾತ, ಶೀತಗಾಳಿ, ಪ್ರತಿಕೂಲದ ವಾತಾವರಣದ ಕಾರಣಕ್ಕೆ ನೂರಾರು ಸಂಖ್ಯೆಯಲ್ಲಿ ರೈಲುಗಳು ಸಂಚಾರ ರದ್ದುಗೊಳಿಸಿದ್ದರೆ, ಸಾವಿರಾರು ವಿಮಾನಗಳ ಹಾರಾಟ ರದ್ದಾಗಿತ್ತು.
ದಶಕದಲ್ಲಿ ಆ ಪರಿಯ ಹಿಮಪಾತ ಅಮೆರಿಕದಲ್ಲಿ ಆಗಿಲ್ಲ ಎಂದೇ ಹೇಳಲಾಗಿತ್ತು. ಅಂದು ಸುಮಾರು 6 ಕೋಟಿ ಜನರು ಸೈಕ್ಲೋನ್ ಬಾಂಬ್ ಸ್ಫೋಟದ ಭಯಾನಕತೆಯನ್ನು ಕಂಡಿದ್ದರು. ಇದೀಗ ಮತ್ತೆ 2025ರ ಅಂತ್ಯದಲ್ಲಿ ಅಮೆರಿಕದಲ್ಲಿ ಸೈಕ್ಲೋನ್ ಬಾಂಬ್ ಸ್ಪೋಟಗೊಂಡಿದೆ. ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಹತ್ತು ವರ್ಷದಲ್ಲಿ ಎರಡನೇ ಬಾರಿಗೆ ಅಮೆರಿಕದಲ್ಲಿ ಸ್ಫೋಟಗೊಂಡ ಸೈಕ್ಲೋನ್ ಬಾಂಬ್ ಸುಮಾರು 3 ಕೋಟಿ ಜನರ ಮೇಲೆ ಪರಿಣಾಮ ಬೀರುತ್ತಿದೆ.
ನ್ಯೂಯಾರ್ಕ್, ನ್ಯೂಜೆರ್ಸಿ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ:
ಚಳಿಗಾಲದಲ್ಲಿ ಅಮೆರಿಕದ ಎಲ್ಲ ರಾಜ್ಯಗಳಲ್ಲೂ ಹಿಮಪಾತ ಆಗೋದು ಸಾಮಾನ್ಯ. ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಹಿತವಾದ ಹಿಮಪಾತ ಕ್ರಿಸ್‌ಮಸ್ ಸೆಲೆಬ್ರೇಶನ್‌ಗೆ ರಂಗುತುಂಬುತ್ತದೆ. ಅದೇ ರೀತಿ ಈ ಚಳಿಗಾಲದ ಹಿಮಪಾತವೂ ಆರಂಭವಾಗಿತ್ತು. ಆದರೆ ಡೆವಿನ್ ಚಂಡಮಾರುತ ಸೃಷ್ಠಿಯಾಗಿ ಅದು ಭಾರೀ ಹಿಮಪಾತಕ್ಕೆ ಕಾರಣವಾಗಿದೆ. ಕಳೆದ ವಾರದ ಆರಂಭದಿಂದಲೂ ಆಗುತ್ತಿದ್ದ ಹಿಮಪಾತ, ಡೆವಿನ್ ಚಂಡಮಾರುತದ ಪರಿಣಾಮ ಸೈಕ್ಲೋನ್ ಬಾಂಬ್ ಆಗಿ ಬದಲಾಗಿದೆ. ಆ ಹಿಮಬಾಂಬ್ ಸ್ಫೋಟಗೊಂಡ ಕಾರಣಕ್ಕೆ ಅಮೆರಿಕ ಥಂಡಾ ಹೊಡೆದಿದೆ.
ಮೋಂಟೆನಾದಿಂದ ಮೈನೆ, ಟೆಕ್ಸಾಸ್‌ನಿಂದ ಪೆನ್ಸಿಲ್ವೇನಿಯಾ, ನ್ಯೂಯಾರ್ಕ್‌ನಿಂದ ನ್ಯೂಜೆರ್ಸಿವರೆಗೂ ಸೈಕ್ಲೋನ್ ಬಾಂಬ್ ಎಫೆಕ್ಟ್ ಹೆಚ್ಚಾಗಿದೆ. ಈ ವಾರದ ಆರಂಭದಿಂದ ಮಧ್ಯಪಶ್ಚಿಮ ಮತ್ತು ಈಶಾನ್ಯ ಅಮೆರಿಕಾದ ರಾಜ್ಯಗಳಲ್ಲಿ ಸೈಕ್ಲೋನ್ ಬಾಂಬ್ 3 ಕೋಟಿಗೂ ಅಧಿಕ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ನ್ಯೂಯಾರ್ಕ್‌ನಲ್ಲಿ 4 ಇಂಚು ಹಿಮಪಾತ:
ಬಾಂಬ್‌ಸೈಕ್ಲೋನ್ ವ್ಯಾಪ್ತಿಗೆ ಅಮೆರಿಕಾದ ಮಿಡ್‌ವೆಸ್ಟ್ ಪ್ರದೇಶದ ರಾಜ್ಯಗಳು ಬರಲಿವೆ. ಈ ಪ್ರದೇಶದಲ್ಲಿ ಶೀತಗಾಳಿಯು 40 ರಿಂದ 60 ಕಿ.ಮೀ ವೇಗದಲ್ಲಿ ಬೀಸಲಿದೆ. ಈ ವೇಗದ ಶೀತಗಾಳಿಯು ಭಾರೀ ಪ್ರಮಾಣದಲ್ಲಿ ಹಿಮಪಾತಕ್ಕೂ ಕಾರಣವಾಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಇದರಿಂದಾಗಿ ವಿಸಿಬಲಿಟಿ ಶೂನ್ಯಕ್ಕೆ ಕುಸಿದು ಕಾಲು ಕಿ.ಮೀ ದೂರಕ್ಕೂ ಕಡಿಮೆ ಗೋಚರತೆ ಇರಲಿದಯಂತೆ. ನ್ಯೂಯಾರ್ಕ್‌ನಲ್ಲಿ 4 ಇಂಚು ಹಿಮಪಾತವಾಗುತಿದ್ದು, ಇದು ನಾಲ್ಕು ವರ್ಷಗಳ ನಂತರದಲ್ಲಿ ಆದ ಹೆಚ್ಚಿನ ಹಿಮಪಾತವಾಗಿದೆ.
ಅಮೆರಿಕದ ಪೂರ್ವಮಧ್ಯ ಭಾಗದ ಮಿನೆಸೋಟದಿಂದ ಉತ್ತರದ ವಿಸ್ಕಾನ್ಸಿವರೆಗೂ ಹಾಗೂ ಮಿಚಿಗನ್ ಮೇಲ್ಭಾಗದ ಪ್ರದೇಶಗಳಲ್ಲಿ 6 ರಿಂದ 12 ಇಂಚಿನವರೆಗೂ ಹಿಮಬೀಳಲಿದೆ ಎಂದು ಅಮೆರಿಕಾದ ನ್ಯಾಷನಲ್ ವೆದರ್ ಸರ್ವೀಸ್ ಇಲಾಖೆ ಮುನ್ಸೂಚನೆ ನೀಡಿ ಎಚ್ಚರಿಕೆಯನ್ನೂ ಜಾರಿಗೊಳಿಸಿದೆ. ಆನಂತರದಲ್ಲಿ ಸೈಕ್ಲೋನ್ ಬಾಂಬ್‌ನ ಅಸಲಿ ಸ್ಫೋಟದ ತೀವ್ರತೆ ಇರಲಿದೆ ಎಂದು ಎನ್‌ಡಬ್ಲ್ಯೂಎಸ್ ವಾರ್ನಿಂಗ್ ಮಾಡಿದೆ.
ವಿಮಾನಗಳ ಹಾರಾಟ ರದ್ದು, ವಿಳಂಬ:
ಭಾರೀ ಹಿಮಪಾತ, ವೇಗದ ಶೀತಗಾಳಿ, ಕ್ಲಿಷ್ಟಕರ ಹವಾಮಾನದಿಂದಾಗಿ ಅಮೆರಿಕದ ನಾಗರೀಕ ವಾಯುಯಾನ ಸೇವೆಯಲ್ಲಿ ಭಾರೀ ಏರುಪೇರಾಗಿದ್ದು ಅದು ಮುಂದುವರೆಯುತ್ತಲೇ ಇದೆ. ಹಮಾವಾನ ವೈಪರೀತ್ಯದ ಕಾರಣಕ್ಕೆ, ಆರಂಭದಿಂದಲೂ ವಿಮಾನಗಳ ಹಾರಾಟದಲ್ಲಿ ವ್ಯತ್ಯವಾಗುತ್ತಿದೆ. ಮೊದಲಿಗೆ 28 ಸಾವಿರ ವಿಮಾನಗಳ ಹಾರಾಟ ವಿಳಂಬವಾಗಿ, 1800 ವಿಮಾನಗಳ ಹಾರಾಟ ರದ್ದಾಗಿತ್ತು. ಸೈಕ್ಲೋನ್ ಬಾಂಬ್‌ನ ಸ್ಫೋಟದ ತೀವ್ರತೆ ಹೆಚ್ಚಾಗಿದ್ದಲ್ಲಿ ಮತ್ತೂ ಸಾವಿರಾರು ವಿಮಾನಗಳ ಹಾರಾಟ ರದ್ದಾಗುವ ಸಾಧ್ಯತೆ ಇದೆ
ದೇಶಾದ್ಯಂತ 3,50,000ಕ್ಕೂ ಹೆಚ್ಚು ಜನರ ಮನೆಯಲ್ಲಿ ವಿದ್ಯುತ್ ಕಡಿತಗೊಂಡಿತು. ಮಿಚಿಗನ್ ಮತ್ತು ನ್ಯೂಯಾರ್ಕ್‌ನ ಮೇಲ್ಭಾಗಗಳು ಹೆಚ್ಚು ಹಾನಿಗೊಳಗಾಗಿದೆ. ಗ್ರೇಟ್ ಲೇಕ್ಸ್‌ನಲ್ಲಿ, ಲೇಕ್ ಸುಪೀರಿಯರ್‌ನಲ್ಲಿ 20 ಅಡಿಗಳಷ್ಟು ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸಿದವು. ಈ ಹಿನ್ನೆಲೆ ಸರಕು ಹಡಗುಗಳು ಕಡಲ ತೀರದಲ್ಲೇ ಥಂಡಾ ಹೊಡೆಯಿತು. ಅಲ್ಲದೇ ಎರಿ ಸರೋವರದಲ್ಲಿ ಪ್ರವಾಹದ ಆತಂಕವನ್ನು ಸೃಷ್ಟಿಮಾಡಿತು.
ಜಗತ್ತಿನ ಕೋಲ್ಡೆಸ್ಟ್ ಯಾಕುಟ್ಸ್‌ನಲ್ಲಿ ಪರಿಸ್ಥಿತಿ ಭಯಾನಕ:
ಜಗತ್ತಿನ ಅತಿದೊಡ್ಡ ದೇಶ ರಷ್ಯಾ ಉತ್ತರ ಧೃವಕ್ಕೆ ತೀರಾ ಹತ್ತಿರದಲ್ಲಿರುವ ರಾಷ್ಟ್ರ. ರಷ್ಯಾದ ಉತ್ತರ ಭಾಗ ಸೈಬೀರಿಯಾದಲ್ಲಿ ವರ್ಷದ ಬಹುತೇಕ ಚಳಿಯೇ ಇರುತ್ತದೆ. ಚಳಿಗಾಲ ಬಂದರಂತೂ ಅಲ್ಲಿನ ಸ್ಥಿತಿ ವಿಷಮವಾಗಿ ಬಿಡುತ್ತದೆ. ಚಳಿಗಾಲದಲ್ಲಿ ರಷ್ಯಾದಲ್ಲಿ ಹಿಮಪಾತವಾಗುತ್ತದೆ. ಆದರೆ ಸೈಬೀರಿಯಾದಲ್ಲಿ ಅದಕ್ಕಿಂತಲೂ ಪರಿಸ್ಥಿತಿ ಘೋರವಾಗಿರುತ್ತದೆ. ಅದರಲ್ಲೂ ಭೂಮಿಯ ಅತ್ಯಂತ ಶೀತಪ್ರದೇಶವೆಂದೇ ಗುರುತಿಸಲ್ಪಟ್ಟಿರುವ ಸೈಬಿರಿಯಾದ ಯಾಕುಟ್ಸ್‌ನಲ್ಲಿ ಈ ಭಾರಿಯ ಚಳಿಗಾಲ ಭಯಾನಕವಾಗಿದೆ. ಅಲ್ಲಿನ ಹಿಮ ಮತ್ತು ಚಳಿಯ ಹೊಡೆತಕ್ಕೆ ಸರ್ವವೂ ಮಂಜುಗಡ್ಡೆಯಾಗಿದೆ.
1891ರಲ್ಲಿ ಕಂಡಿದ್ದ ಭಯಾನಕ ಪರಿಸ್ಥಿತಿ ಮತ್ತೆ ಮರುಕಳಿಸುತ್ತಾ?
ಭೂಮಿ ಮೇಲಿನ ಅತ್ಯಂತ ಶೀತ ಪ್ರದೇಶ ಸೈಬಿರಿಯಾದಲ್ಲಿರೋ ಯಾಕುಟ್ಸ್ ಎಂಬ ಪ್ರದೇಶ. ಅಲ್ಲಿ ಚಳಿಗಾಲ ಬಂದರೆ ಪರಿಸ್ಥಿತಿ ಭೀಕರತೆಗೆ ಬದಲಾಗುತ್ತದೆ. ರಕ್ತಹೆಪ್ಪುಗಟ್ಟಿಸೋ ಚಳಿಯ ಪ್ರದೇಶವದು. ಹತ್ತಾರು ಅಡಿಗಳಷ್ಟು ದೂರದಲ್ಲಿರುವವರೂ ಕಾಣದಷ್ಟು ಗೋಚರತೆ ಇರುತ್ತದೆ. ಮೈನಸ್ ಡಿಗ್ರಿ ಎಂದರೆ ಅದು ಸಾಮಾನ್ಯ. ಈ ಚಳಿಗಾಲದಲ್ಲಿ ಕೆಲ ದಿನಗಳಿಂದ -55 ರಿಂದ -56 ಡಿಗ್ರಿಗೆ ತಾಪಮಾನ ಕುಸಿದು ಹೋಗಿದೆ. ತಾಪಮಾನದ ಪ್ರಮಾಣ ಮತ್ತಷ್ಟು ಕುಸಿದು -60ಕ್ಕೆ ಕುಸಿಯುತ್ತದೆ ಎಂದು ರಷ್ಯಾ ಹವಾಮಾನ ತಜ್ಞರು ಹೇಳಿದ್ದಾರೆ.
1891ರ ಫೆಬ್ರವರಿ 5ರಂದು ಯಾಕುಟ್ಸ್‌ನಲ್ಲಿ -64.4 ಡಿಗ್ರಿ ತಾಪಮಾನ ದಾಖಲಾಗಿತ್ತು. ಇದು ಇತಿಹಾಸದಲ್ಲೇ ಅತ್ಯಂತ ಕಡಿಮೆ ತಾಪಮಾನವೆಂದು ದಾಖಲಾಗಿದೆ. ಈ ಚಳಿಯನ್ನು ಎದುರಿಸಲು ಜನರು 10 ಕೆ.ಜಿ ಬಟ್ಟೆಗಳನ್ನು ಧರಿಸಬೇಕಾಗುತ್ತದೆ ಎಂದು ವರದಿಗಳು ತಿಳಿಸಿದೆ. ಇನ್ನೂ ಅಲ್ಲಿನ ಜನರು ಹೆಚ್ಚಾಗಿ ಮಾಂಸ ಹಾಗೂ ಮೀನನ್ನು ತಿನ್ನುತ್ತಾರೆ. ಹೆಚ್ಚಿನ ಚಳಿ ಇರುವುದರಿಂದ ಆ ಪ್ರದೇಶದಲ್ಲಿ ಸಸ್ಯಗಳು ಜಾಸ್ತಿ ಬೆಳೆಯುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಈ ಚಳಿಗಾಲದಲ್ಲಿ ಯಾಕುಟ್ಸ್‌ನ ಹವಾಮಾನವನ್ನು ಗಮನಿಸುತ್ತಿದ್ದರೆ 1891ರ ಮೈನಸ್ 64.4 ಡಿಗ್ರಿ ತಾಪಮಾನವನ್ನೂ ಮುರಿದು ದಾಖಲೆ ಬರೆಯುತ್ತಾ ಎಂಬ ಅನುಮಾನ ಕಾಡುತ್ತಿದೆ.




