ಕೇರಳಿಗರ ಮೇಲೆ ಪ್ರೀತಿ, ಮಲೆನಾಡಿಗರ ನಿರ್ಲಕ್ಷ್ಯ – 6 ವರ್ಷ ಕಳೆದ್ರೂ ಬತ್ತದ ಸಂತ್ರಸ್ತರ ಕಣ್ಣೀರು

2 Min Read

ಚಿಕ್ಕಮಗಳೂರು: ಸರ್ಕಾರ ಬೆಂಗಳೂರಿನ (Bengaluru) ಕೊಗಿಲುನಲ್ಲಿರುವ (Kogilu Layout) ಕೇರಳಿಗರ ಮೇಲೆ ತೋರುತ್ತಿರುವ ಪ್ರೀತಿ-ಕಾಳಜಿಯನ್ನ ಮಲೆನಾಡಿಗರ ಮೇಲೆ ಏಕೆ ತೋರುತ್ತಿಲ್ಲ ಎಂದು ಮೂಡಿಗೆರೆ (Mudigere) ತಾಲೂಕಿನ ಮಲೆಮನೆ – ಮುದುಗುಂಡಿ ಗ್ರಾಮದ ಜನ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

2019ರ ಆಗಸ್ಟ್ 9 ರಂದು ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ತಪ್ಪಲಿನಲ್ಲಿ ಒಂದೇ ರಾತ್ರಿಗೆ 22 ಇಂಚು ಮಳೆ ಸುರಿದಿತ್ತು. ಇದರಿಂದ ಮಲೆಮನೆ – ಮುದುಗುಂಡಿ ಗ್ರಾಮಗಳು ಗುಡ್ಡದ ಮಣ್ಣು ಕುಸಿದು ಸಂಪೂರ್ಣ ನಾಶವಾಗಿದ್ದವು. ಶತಮಾನದ ಬದುಕು ಕಣ್ಣೆದುರೇ ಕೊಚ್ಚಿ ಹೋಗಿ ಮನೆಯ ಒಂದು ಸಣ್ಣ ಚಮಚ ಕೂಡ ಸಿಕ್ಕಿರಲಿಲ್ಲ. ಅಂದಿನಿಂದಲೂ ಜನ ಸರ್ಕಾರಕ್ಕೆ, ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಇದ್ದಾರೆ.‌ ಆದರೆ, ಜನರ ಕಣ್ಣೀರು ಇಂದಿಗೂ ಸರ್ಕಾರಕ್ಕೆ ಕಂಡಿಲ್ಲ.‌ ಇದನ್ನೂ ಓದಿ: ಬೈಯ್ಯಪ್ಪನಹಳ್ಳಿಯಲ್ಲಿ ಪುನರ್ವಸತಿ: ಸಿಎಂ ಸಿದ್ದರಾಮಯ್ಯ ಘೋಷಣೆ – ಕರ್ನಾಟಕದಲ್ಲಿ ಕೇರಳ ರೂಲ್ ಎಂದು ಬಿಜೆಪಿ ಆಕ್ರೋಶ

ಈಗ ಕೇರಳಿಗರ ಮೇಲೆ ಒಂದೇ ರಾತ್ರಿಗೆ ಸರ್ಕಾರಕ್ಕೆ ಬಂದಿರೋ ಪ್ರೀತಿ ಕಂಡು ಮಲೆನಾಡಿಗರು ರೆಬಲ್ ಆಗಿದ್ದಾರೆ. ಆರು ವರ್ಷದಿಂದ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ. ನಮ್ಮ ನೋವಿನ ಕೂಗು ಸರ್ಕಾರಕ್ಕೆ ಏಕೆ ಕೇಳಿಲ್ಲ ಎಂದು ಕಿಡಿಕಾರಿದ್ದಾರೆ. ಕೇರಳಿಗರಿಗೆ ತಕ್ಷಣ ಸ್ಪಂದಿಸಿ ಮನೆ ಕಟ್ಟಿಕೊಡಲು ಮುಂದಾಗಿರುವ ಸರ್ಕಾರಕ್ಕೆ ಆರು ವರ್ಷಗಳಿಂದ ಸ್ವಂತ ಸೂರಿಲ್ಲದೆ ಅಲೆಯುತ್ತಿರುವ ತನ್ನದೇ ರಾಜ್ಯದ ಮಲೆನಾಡಿಗರ ಅಳಲು ಕೇಳಿಸುತ್ತಿಲ್ಲವೇ ಎಂಬ ಆಕ್ರೋಶ ವ್ಯಕ್ತವಾಗಿದೆ.

ಒಂದೇ ರಾತ್ರಿ ಸುರಿದ ಮಳೆಗೆ 11 ಮನೆಗಳು ಹಾಗೂ 2 ದೇವಸ್ಥಾನಗಳು ನೆಲಸಮವಾಗಿದ್ದವು. ದುರಂತದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಮಂತ್ರಿಗಳಾದ ಮಾಧುಸ್ವಾಮಿ, ಸಿ.ಟಿ.ರವಿ ಮತ್ತು ಆರ್. ಅಶೋಕ್ ಮನೆ-ಜಾಗ ಹಾಗೂ ಬಾಡಿಗೆ ನೀಡುವುದಾಗಿ ಭರವಸೆಗಳ ನೀಡಿದ್ದರು. ಆದರೆ ಕಳೆದ ಆರು ವರ್ಷಗಳಲ್ಲಿ ಸರ್ಕಾರದಿಂದ ಸಂತ್ರಸ್ತರಿಗೆ ಸಿಕ್ಕಿದ್ದು ಕೇವಲ ಐದು ತಿಂಗಳ ಬಾಡಿಗೆ ಮತ್ತು ಕೆಲವರಿಗೆ ಕೇವಲ ಒಂದು ಲಕ್ಷ ರೂ. ಹಣ. ಅಂದು ಬೀದಿಗೆ ಬಿದ್ದವರು ಪ್ರತಿ ಸರ್ಕಾರದ ಶಾಸಕರು-ಅಧಿಕಾರಿಗಳು-ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ಉಪಯೋಗ ಆಗಿಲ್ಲ.

ಮಲೆನಾಡಿಗರು ಅಂದಿನ ಆಗಸ್ಟ್ 9ನ್ನು ಬ್ಲ್ಯಾಕ್ ಡೇ ಎಂದೇ ಸ್ಮರಿಸುತ್ತಿದ್ದಾರೆ. ​ತಮ್ಮದೇ ನಾಡಿನ ನಿರಾಶ್ರಿತರು ಕಳೆದ ಆರು ವರ್ಷಗಳಿಂದ ಮನೆಗಾಗಿ ಅಂಗಲಾಚುತ್ತಿದ್ದರೂ ಸ್ಪಂದಿಸದ ಸರ್ಕಾರ, ಈಗ ಕೇರಳಿಗರ ಮೇಲೆ ತೋರುತ್ತಿರುವ ಅತಿಯಾದ ಪ್ರೀತಿ ಕಾಫಿನಾಡಿನ ಸಂತ್ರಸ್ತರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: ಹಳ್ಳಿ ಕಡೆ ಕಾಡಿನಲ್ಲಿ ಮನೆ ಕಟ್ಟಿಕೊಂಡ ರೀತಿಯೇ ಕೋಗಿಲು ಲೇಔಟ್ ಅಕ್ರಮ ಸಕ್ರಮಕ್ಕೆ ಕ್ರಮ: ಮಧು ಬಂಗಾರಪ್ಪ

Share This Article