– ಎರಡೇ ದಿನಗಳಲ್ಲಿ 36 ವಿಕೆಟ್ ಪತನ
ಮೆಲ್ಬರ್ನ್: ಆಸ್ಟ್ರೇಲಿಯಾ ತವರಿನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಐತಿಹಾಸ ನಿರ್ಮಿಸಿದೆ. ಬರೋಬ್ಬರಿ 5,468 ದಿನಗಳ ಬಳಿಕ ಆಸೀಸ್ ನೆಲದಲ್ಲಿ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ಹೌದು. ಮೆಲ್ಬರ್ನ್ (Melbourne) ಕ್ರಿಕೆಟ್ ಮೈದಾನದಲ್ಲಿ ನಡೆದ ಆಶಸ್ ಟೂರ್ನಿಯ ಬಾಕ್ಸಿಂಗ್ ಡೇ 4ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. 175 ರನ್‌ಗಳ ಗುರಿ ಪಡೆದ ಇಂಗ್ಲೆಂಡ್ 32.2 ಓವರ್‌ಗಳಲ್ಲೇ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಗೆಲುವು ಸಾಧಿಸಿದೆ. ಇದನ್ನೂ ಓದಿ: ವೇಗದ ಶತಕ | 16 ಬೌಂಡರಿ, 15 ಸಿಕ್ಸ್ – ದಾಖಲೆ ಬರೆದ ವೈಭವ್ ಸೂರ್ಯವಂಶಿ
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಇಂಗ್ಲೆಂಡ್ ತಂಡ (England Team) ಆತಿಥೇಯ ಆಸ್ಟ್ರೇಲಿಯಾವನ್ನು 152 ರನ್‌ಗಳಿಗೆ ಆಲೌಟ್ ಮಾಡಿತ್ತು. ಆದ್ರೆ ಆಸೀಸ್ ಬೆಂಕಿ ದಾಳಿಗೆ ತತ್ತರಿಸಿದ ಆಂಗ್ಲಪಡೆ ತನ್ನ ಸರದಿಯ ಮೊದಲ ಇನ್ನಿಂಗ್ಸ್‌ನಲ್ಲೇ ಕೇವಲ 110 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಮೊದಲ ದಿನವೇ 2ನೇ ಇನ್ನಿಂಗ್ಸ್ ಶುರು ಮಾಡಿದ್ದ ಆಸೀಸ್ (Australia Team) 4 ರನ್‌ಗಳಿಸಿ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿತು.
ಇನ್ನೂ 46 ರನ್‌ಗಳ ಮುನ್ನಡೆಯೊಂದಿಗೆ ಕ್ರೀಸ್ ಆರಂಭಿಸಿದ ಆಸೀಸ್ 2ನೇ ಇನ್ನಿಂಗ್ಸ್‌ನಲ್ಲಿ 132 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಎದುರಾಳಿ ಇಂಗ್ಲೆಂಡ್‌ಗೆ 175 ರನ್ ಗುರಿ ನೀಡಿತ್ತು. ಸ್ಪರ್ಧಾತ್ಮಕ ಗುರಿ ಪಡೆದ ಇಂಗ್ಲೆಂಡ್ 32 ಓವರ್‌ಗಳಲ್ಲಿ 178 ರನ್ ಗಳಿಸಿ ಗುರಿ ತಲುಪಿತು.
ಎರಡೇ ದಿನಕ್ಕೆ 36 ವಿಕೆಟ್ ಪತನ
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಬೌಲರ್‌ಗಳ ಕೈಚಳಕವೇ ಮೇಲುಗೈ ಸಾಧಿಸಿತು. ಮೆಲ್ಬರ್ನ್‌ನಲ್ಲಿ ನಡೆದ 4ನೇ ಪಂದ್ಯದಲ್ಲಿ 2 ದಿನದಲ್ಲಿ 36 ವಿಕೆಟ್ ಪತನಗೊಂಡಿತು. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ಗೆ ರೆಡ್‌ಸಿಗ್ನಲ್ – ಸರ್ಕಾರದ ಕ್ರಮ ಸಮರ್ಥಿಸಿಕೊಂಡ ಪರಮೇಶ್ವರ್
ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ಗಸ್ ಅಟ್ಕಿನ್ಸನ್ 2 ವಿಕೆಟ್, ಬ್ರಾಂಡನ್ ಕರ್ಸ್ 1 ವಿಕೆಟ್, ಜೋಶ್ ಟಂಗ್ 5 ವಿಕೆಟ್, ಬೆನ್ ಸ್ಟೋಕ್ಸ್ 1 ವಿಕೆಟ್ ಪಡೆದರೆ, ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 2 ವಿಕೆಟ್, ಮೈಕೆಲ್ ನೆಸರ್ 4 ವಿಕೆಟ್, ಸ್ಕಾಟ್ ಬೊಲೆಂಡ್ 3 ವಿಕೆಟ್, ಕ್ಯಾಮರೂನ್ ಗ್ರೀನ್ 1 ವಿಕೆಟ್ ಪಡೆದರು. ಇದನ್ನೂ ಓದಿ: ಇಂಡೋ, ಆಸೀಸ್ ಮ್ಯಾಚ್ – ಬಾಕ್ಸಿಂಗ್ ಡೇ ಟೆಸ್ಟ್ ಎಂದು ಯಾಕೆ ಕರೆಯುತ್ತಾರೆ?
2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ಗಸ್ ಅಟ್ಕಿನ್ಸನ್ 1 ವಿಕೆಟ್, ಬ್ರಾಂಡನ್ ಕರ್ಸ್ 4 ವಿಕೆಟ್, ಜೋಶ್ ಟಂಗ್ 2 ವಿಕೆಟ್, ಬೆನ್ ಸ್ಟೋಕ್ಸ್ 3 ವಿಕೆಟ್ ಪಡೆದರೆ, ಆಸೀಸ್ ಪರ ಮಿಚೆಲ್ ಸ್ಟಾರ್ಕ್, ಜೇ ರಿಚರ್ಡ್ಸನ್, ಸ್ಕಾಟ್ ಬೊಲೆಂಡ್ ತಲಾ 2 ವಿಕೆಟ್ ಕಿತ್ತರು.
ಬಾಕ್ಸಿಂಗ್ ಡೇ ಟೆಸ್ಟ್ ಅನ್ನೋದು ಯಾಕೆ?
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಟೆಸ್ಟ್ ಪಂದ್ಯಕ್ಕೆ ಬಾಕ್ಸಿಂಗ್ ಡೇ ಎಂದು ಕರೆಯಲು ಕಾರಣವಿದೆ. ಇಂಗ್ಲೆಂಡ್ ಹಾಗೂ ಹಲವು ದೇಶಗಳಲ್ಲಿ ಕ್ರಿಸ್‌ಮಸ್ ಮರುದಿನ ಅಂದರೆ ಡಿಸೆಂಬರ್ 26ರ ರಜಾದಿನವನ್ನ ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ. ಜರ್ಮನಿ, ಪೊಲೆಂಡ್, ರೋಮೆನಿಯಾ, ಹಂಗೇರಿ, ನೆದರ್ಲೆಂಡ್ಸ್ ಸೇರಿದಂತೆ ಕೆಲ ದೇಶಗಳಲ್ಲಿ ಡಿಸೆಂಬರ್ 26ರನ್ನು ಸೆಕೆಂಡ್ ಕ್ರಿಸ್‌ಮಸ್ ಡೇ ಎಂದು ಆಚರಿಸಲಾಗುತ್ತಿದೆ. ಈ ದಿನ ಸಾರ್ವಜನಿಕ ರಜಾ ದಿನವಾಗಿದ್ದು, ಐರ್ಲೆಂಡ್ ಹಾಗೂ ಸ್ಪೇನ್‌ನ ಕ್ಯಾಟಲೋನಿಯಾ ರೀಜನ್‌ನಲ್ಲಿ ʼಸೈಂಟ್ ಸ್ಟೀಫನ್ ಡೇʼ ಎಂದು ಕರೆಯಲಾಗುತ್ತದೆ. ಈ ಹಿಂದೆ ಆಸ್ಟ್ರೇಲಿಯಾ ಬ್ರಿಟಿಷರ ವಸಾಹತು ಆಗಿತ್ತು. ಈ ಸಮಯದಲ್ಲಿ ಇಂಗ್ಲೆಂಡ್ ರಾಜಮನೆತನದವರು ಕ್ರಿಸ್ಮಸ್ ಸಮಯದಲ್ಲಿ ಕೆಲಸ ಮಾಡಿದ ನೌಕರರಿಗೆ ಡಿ.26 ರಂದು ಬಾಕ್ಸ್ ಮೂಲಕ ಉಡುಗೊರೆ ನೀಡುತ್ತಿದ್ದರು. ಬಾಕ್ಸ್‌ಗಳಲ್ಲಿ ಸಿಹಿ ತಿಂಡಿ ಸೇರಿದಂತೆ ಹಲವು ಉಡುಗೊರೆ ಡಿ.26 ರಂದು ಸಿಗುತ್ತಿದ್ದ ಕಾರಣ ಈ ದಿನಕ್ಕೆ ‘ಬಾಕ್ಸಿಂಗ್ ಡೇ’ ಎಂಬ ಹೆಸರು ಬಂತು. ಹೀಗಾಗಿ ಈ ದಿನ ನಡೆಯುವ ಟೆಸ್ಟ್ ಪಂದ್ಯಕ್ಕೆ ‘ಬಾಕ್ಸಿಂಗ್ ಡೇ ಟೆಸ್ಟ್’ ಪಂದ್ಯ ಎಂಬ ಹೆಸರು ಬಂದಿದೆ.




