ಉಡುಪಿ: ದೇಶದ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾದ ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹೆಸರಲ್ಲಿ ವಂಚಿಸುತ್ತಿದ್ದ ನಾಸಿರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಭಕ್ತರ ಹಣ ಲೂಟಿ ಮಾಡಲು ಈತ ಯೋಜಿಸಿದ ತಂತ್ರಗಾರಿಕೆ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ದೂರದ ರಾಜಸ್ಥಾನದಿಂದ ಆರೋಪಿಯನ್ನು ಹೆಡೆಮುರಿ ಕಟ್ಟಿ ತಂದಿದ್ದಾರೆ.
ಜನರ ಭಕ್ತಿಯನ್ನು ಬಂಡವಾಳ ಮಾಡಿಕೊಳ್ಳಲು ವಂಚಕರು ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಈ ಆಸಾಮಿಯ ಹೆಸರು ನಾಸಿರ್. ಈತ ಇರೋದು ಉತ್ತರ ಭಾರತದ ರಾಜಸ್ಥಾನದ ತಿಜಾರಿ ಜಿಲ್ಲೆಯಲ್ಲಿ. ನಕಲಿ ವೆಬ್‌ಸೈಟ್ ತೆರೆದಿದ್ದ. ಅಸಲಿ ಖಾತೆಗೆ ಸಡ್ಡು ಹೊಡೆಯುವ ರೀತಿಯಲ್ಲಿ, ಈ ವೆಬ್ ಕಾರ್ಯನಿರ್ವಹಿಸುತ್ತಿತ್ತು. ರೂಮ್ ಬುಕಿಂಗ್, ಹರಕೆ ಬುಕಿಂಗ್ ಎಲ್ಲವೂ ಈ ನಕಲಿ ವೆಬ್‌ಸೈಟ್‌ನಲ್ಲಿ ಲೀಲಾಜಾಲವಾಗಿ ನಡೆಯುತ್ತಿತ್ತು. ದೂರು ಪಡೆದು ಬೆನ್ನುಹತ್ತಿದ ಪೊಲೀಸರು ರಾಜಸ್ಥಾನದಿಂದ ನಾಸಿರ್ ಎಂಬಾತನನ್ನು ಬಂಧಿಸಿ ಕರೆತಂದಿದ್ದಾರೆ.
ಸರ್ಕಾರಿ ಯೋಜನೆಗಳ ಹೆಸರಲ್ಲಿ ವಂಚನೆ ಮಾಡುವ ಅನೇಕ ಮಂದಿ ಈ ಜಿಲ್ಲೆಯಲ್ಲಿ ಇದ್ದು, ಅವರಿಂದಲೇ ಪ್ರೇರಣೆ ಪಡೆದು ತಾನು ಈ ಸಂಚು ಮಾಡಿರುವುದಾಗಿ ನಾಸಿರ್ ಒಪ್ಪಿಕೊಂಡಿದ್ದಾನೆ.

