ದುಬೈ: ಇಲ್ಲಿ ನಡೆದ ಅಂಡರ್ 19 ಏಷ್ಯಾ ಕಪ್ ಫೈನಲ್ (U-19 Asia Cup Final) ಪಂದ್ಯದಲ್ಲಿ ಭಾರತವನ್ನು (India) ಮಣಿಸಿ ಪಾಕಿಸ್ತಾನ (Pakistan) ಕಪ್ ಜಯಿಸಿದೆ. 2ನೇ ಬಾರಿಗೆ ಏಷ್ಯಾ ಕಪ್‌ನ್ನು ಪಾಕ್ ತನ್ನದಾಗಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿತು. ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿ ಸೋಲೊಪ್ಪಿಕೊಂಡಿತು. 156 ಆಲೌಟ್ ಆಗಿ ಪ್ರಶಸ್ತಿ ಕೈಚೆಲ್ಲಿತು. ಇದನ್ನೂ ಓದಿ: 2026ರ ಐಪಿಎಲ್ ಬೆಂಗಳೂರಿನಲ್ಲೇ ನಡೆಯುತ್ತಾ? – ಪರಮೇಶ್ವರ್ ಹೇಳಿದ್ದೇನು?
ಪಾಕ್ ನೀಡಿದ್ದ 348 ರನ್ ಗುರಿ ಬೆನ್ನಟ್ಟಿದ ಭಾರತ ಹೀನಾಯ ಸೋಲು ಕಂಡಿತು. 26 ರನ್ ಗಳಿಸಿ ವೈಭವ್ ಸೂರ್ಯವಂಶಿ ನಿರ್ಗಮಿಸಿದ ನಂತರ ಬ್ಯಾಟಿಂಗ್‌ನಲ್ಲಿ ಭಾರತ ಮೋಡಿ ಮಾಡಲಿಲ್ಲ. ತರಗೆಲೆಯಂತೆ ವಿಕೆಟ್‌ಗಳು ಉದುರಿದವು. ದೀಪೇಶ್ ದೇವೇಂದ್ರನ್ 36, ಖಿಲಾನ್ ಪಟೇಲ್ 19, ಆರನ್ ಜಾರ್ಜ್ 16, ಅಭಿಗ್ಯಾನ್ ಕುಂಡು 13 ರನ್ ಅಷ್ಟೇ ಗಳಿಸಲು ಶಕ್ತರಾದರು. ಅಂತಿಮವಾಗಿ ಟೀಂ ಇಂಡಿಯಾವನ್ನು 156 ರನ್‌ಗಳಿಗೆ ಆಲೌಟ್ ಮಾಡಿ ಪಾಕಿಸ್ತಾನ, 191 ರನ್‌ಗಳ ಜಯ ಸಾಧಿಸಿತು.
ಭಾರತದ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಿತ್ತು ಅಲಿ ರಝಾ ಗಮನ ಸೆಳೆದರು. ಮೊಹಮ್ಮದ್ ಸಯ್ಯಮ್, ಅಬ್ದುಲ್ ಸುಭಾನ್, ಹುಜೈಫಾ ಅಹ್ಸಾನ್ ತಲಾ 2 ವಿಕೆಟ್ ಪಡೆದರು. ಇದನ್ನೂ ಓದಿ: ಟಿ20 ವಿಶ್ವಕಪ್‌ಗೆ ತಂಡ ಪ್ರಕಟ – ಗಿಲ್ ಔಟ್, ಅಕ್ಷರ್ ಪಟೇಲ್‌ಗೆ ಉಪನಾಯಕನ ಪಟ್ಟ
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಉತ್ತಮ ಪ್ರದರ್ಶನ ನೀಡಿತು. ಸಮೀರ್ ಮಿನ್ಹಾಸ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 172 ರನ್ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಅಹ್ಮದ್ ಹುಸೇನ್ 56, ಉಸ್ಮಾನ್ ಖಾನ್ 35 ರನ್‌ಗಳ ಜವಾಬ್ದಾರಿಯುತ ಆಟವಾಡಿದರು.

