ಕಾವೇರಿ-2, ಇ-ಸ್ವತ್ತು ಡಿಜಿಟಲ್ ಡೇಟಾ ಲಿಂಕ್‌ಗೆ ತ್ವರಿತ ಪರಿಹಾರ: ಕೃಷ್ಣ ಬೈರೇಗೌಡ

2 Min Read

– ರಾಜ್ಯದ ಎಸಿ ನ್ಯಾಯಾಲಯಗಳಲ್ಲಿನ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ

ಬೆಳಗಾವಿ: ರಾಜ್ಯದಲ್ಲಿ ಕಾವೇರಿ-2 ಮತ್ತು ಇ-ಸ್ವತ್ತು ಡಿಜಿಟಲ್ ಡೇಟಾ ಪರಸ್ಪರ ಲಿಂಕ್ ಮಾಡುವಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byregowda) ಅವರು ಹೇಳಿದರು.

ಪರಿಷತ್ತಿನಲ್ಲಿ ಸದಸ್ಯರಾದ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾವೇರಿ 2.0 ತಂತ್ರಾಂಶದಲ್ಲಿ ವಿಭಾಗಪತ್ರ ಹಾಗೂ ದಾನಪತ್ರಗಳ ನೋಂದಣಿ ಸ್ಥಗಿತವಾಗಿರುವುದಿಲ್ಲ. ಆರ್ಟಿಸಿ, ಮೋಜಿಣಿ ನಕ್ಷೆ, ಇ-ಸ್ವತ್ತು ಖಾತಾ, ಇ-ಆಸ್ತಿ ಖಾತಾ ಹಾಗೂ ಯುಎಲ್‌ಎಮ್‌ಎಸ್ ಖಾತಾ ಹೊಂದಿರುವ ಸ್ವತ್ತುಗಳ ವಿಭಾಗಪತ್ರ ಹಾಗೂ ದಾನಪತ್ರಗಳು ಎಂದಿನಂತೆ ನೋಂದಣಿ ಆಗುತ್ತಿವೆ. ಕಾವೇರಿ 2.0 ತಂತ್ರಾಂಶದಲ್ಲಿ 2024-25ನೇ ಸಾಲಿನಲ್ಲಿ 1,15,068 ವಿಭಾಗ ಪತ್ರಗಳು ಮತ್ತು 1,39,134 ದಾನಪತ್ರಗಳು ಅದೇ ರೀತಿ 2025-26ನೇ ಸಾಲಿನಲ್ಲಿ 79,515 ವಿಭಾಗ ಪತ್ರಗಳು ಹಾಗೂ 92,618 ದಾನಪತ್ರಗಳು ನೋಂದಣಿ ಆಗಿವೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಚಾರ ಕೇಸ್;‌ ಕೋಲ್ಕತ್ತಾ ಹೈಕೋರ್ಟ್‌ಗೆ ಪ್ರಕರಣ ಹಸ್ತಾಂತರಿಸಿದ ಸುಪ್ರೀಂ

ಇನ್ನೂ ಇದೇ ವೇಳೆ ಸರ್ಕಾರದ ಉಪವಿಭಾಗಾಧಿಕಾರಿಗಳ ಎಸಿ ಕೋರ್ಟ್ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಕಳೆದ ಎರಡೂವರೆ ವರ್ಷದಲ್ಲಿ ರಾಜ್ಯ ಸರ್ಕಾರವು ಶೆ.80ರಷ್ಟು ಇತ್ಯರ್ಥಗೊಳಿಸಿದ್ದು, ಇನ್ನುಳಿದ ಬಾಕಿ ಪ್ರಕರಣಗಳನ್ನು ಸಹ ಇತ್ಯರ್ಥಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದರು.

ವಿಧಾನ ಪರಿಷತ್ತಿನಲ್ಲಿ ನಡೆದ ಪ್ರಶ್ನೋತ್ತರ ವೇಳೆ ಸದಸ್ಯರಾದ ರಾಮೋಜಿ ಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹೆಚ್ಚು ಪ್ರಕರಣಗಳು ಬಾಕಿಯಿರುವ ಜಿಲ್ಲೆಗಳಲ್ಲಿನ ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಮೇಲ್ಮನವಿ ಪ್ರಕರಣಗಳನ್ನು ಉಪವಿಭಾಗಾಧಿಕಾರಿ ವೃಂದಕ್ಕೆ ಸಮಾನಾಂತರ ವೃಂದದ ಇತರೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ಎ.ಎಸ್ ಅಧಿಕಾರಿಗಳಿಗೆ ಕಾರ್ಯಹಂಚಿಕೆ ಮಾಡಿ ಸರ್ಕಾರವು ಆದೇಶಿಸಿರುತ್ತದೆ ಎಂದು ಹೇಳಿದರು.

ಕಂದಾಯ ನ್ಯಾಯಲಯಗಳ ನಿರ್ವಹಣೆಯಲ್ಲಿ ಪಾರದರ್ಶಕತೆ, ದಕ್ಷತೆ, ಸಕಾಲಿಕ ವಿಲೇವಾರಿ ಮತ್ತು ಲಭ್ಯತೆಯ ಹಿತದೃಷ್ಟಿಯಿಂದ ಡಿಜಿಟಲ್ ಸಹಿ ಅಥವಾ ಸಮಾನವಾದ ಕಾನೂನು ಬದ್ಧವಾಗಿ ಗುರುತಿಸಲ್ಪಟ್ಟ ಎಲೆಕ್ಟ್ರಾನಿಕ್ ವಿಧಾನಗಳಿಂದ ದೃಢೀಕರಣ ಮಾಡಲಾಗುತ್ತದೆ. ಜೊತೆಗೆ ಕೇಂದ್ರೀಕೃತ ವೇದಿಕೆಯ ಮೂಲಕ ಅಂತಹ ಎಲ್ಲಾ ಎರಡು ಪ್ರಕ್ರಿಯೆಗಳ ಆನ್ಲೈನ್ ಫೈಲಿಂಗ್ ಮತ್ತು ಎಲೆಕ್ಟ್ರಾನಿಕ್ ನಿರ್ವಹಣೆಯನ್ನು ಒದಗಿಸುವುದು ಸೂಕ್ತವೆಂದು ಪರಿಗಣಿಸಿದೆ. ಈ ಸಂಬಂಧ ಕರ್ನಾಟಕ ಕಂದಾಯ ನ್ಯಾಯಾಲಯದ ನಡವಳಿಗಳ ಕುರಿತು (ಆನ್ಲೈನ್ ಸಲ್ಲಿಕೆ, ದೃಢೀಕರಣ ಮತ್ತು ಡಿಜಿಟಲೀಕರಣ) ಸರ್ಕಾರವು 2025ರ ಆಗಸ್ಟ್ 29ರಂದು ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಕಂದಾಯ ನ್ಯಾಯಾಲಯಗಳು ನಿರ್ವಹಣೆಯನ್ನು ಕಡ್ಡಾಯವಾಗಿ ಆರ್ಸಿಸಿಎಂಎಸ್ ತಂತ್ರಾಂಶದಲ್ಲಿಯೇ ನಿರ್ದೇಶಿಸಲಾಗಿರುತ್ತದೆ ಎಂದು ಸದನಕ್ಕೆ ಮಾಹಿತಿ ನೀಡಿದರು.ಇದನ್ನೂ ಓದಿ: ವಲಸೆ ಬಂದ ಸೀಗಲ್ ಹಕ್ಕಿಯಲ್ಲಿ GPS ಟ್ರ್ಯಾಕರ್‌ ಪತ್ತೆ – ಕಾರವಾರ ನೌಕಾನೆಲೆಯಲ್ಲಿ ಚೀನಾ ಗೂಢಚರ್ಯೆ ಶಂಕೆ

Share This Article