ಫೋನ್‌ ನಂಬರ್‌ ಹಾಕಿದ್ರೆ ಜಾತಕವನ್ನೇ ಬಿಚ್ಚಿಡುತ್ತೆ – ʻಡೇಟಾ ಚೋರಿʼ ಆತಂಕ ಸೃಷ್ಟಿಸಿದ ʻಪ್ರಾಕ್ಸಿ ಅರ್ಥ್‌ʼ!

3 Min Read

ತಂತ್ರಜ್ಞಾನದ ಬೆಳವಣಿಗೆಯು ಅನುಕೂಲಕ್ಕಿಂತ ಅನಾನುಕೂಲಕ್ಕೇ ಹೆಚ್ಚು ದಾರಿ ಮಾಡಿಕೊಡುತ್ತಿದೆ. ಜನರನ್ನ ಯಾಮಾರಿಸೋಕೆ ಹೊಸ ಹೊಸ ದಾರಿ ಹುಡುಕುತ್ತಿರುವ ಸೈಬರ್‌ ನಿಪುಣರು ನಮ್ಮ ದೌರ್ಬಲ್ಯಗಳನ್ನ ಬಂಡವಾಳ ಮಾಡಿಕೊಂಡು ʻಡೇಟಾʼಚೋರಿಗೆ ಇಳಿದಿದ್ದಾರೆ. ಮೊಬೈಲ್‌ನಲ್ಲಿ (Mobile) ಯಾವುದಾದ್ರು ಆ್ಯಪ್ ಡೌನ್‌ಲೋಡ್‌ ಮಾಡಬೇಕಿದ್ರೂ ಸೂಚನೆಗಳನ್ನ ಗಮನಿಸದೇ ಅಗ್ರಿ ಅಗ್ರಿ ಕೊಡ್ತಾ ಇರ್ತೇವೆ, ಡೇಟಾ ಖದೀಮರಿಗೆ ಇದೇ ಬಂಡವಾಳ. ಇದೊಂದೇ ಅಲ್ಲ, ಮಳಿಗೆಗಳಲ್ಲಿ ನಾವು ಪಡೆಯುವ ಝೆರಾಕ್ಸ್‌ ನಮಗೇ ಗೊತ್ತಿಲ್ಲದೇ ಡೇಟಾ (Data) ಪ್ರತಿಯಾಗಿ ಮತ್ತೊಬ್ಬರ ಕೈಸೇರುವ ಸಾಧ್ಯತೆಗಳೂ ಇವೆ. ಜೊತೆಗೆ ಪ್ರಯಾಣ ಮುಗಿಯಿತು ಅಂತ ಬಿಸಾಡೋ ಬೋರ್ಡಿಂಗ್‌ ಪಾಸ್‌ನಲ್ಲಿರುವ ಕ್ಯೂಆರ್‌ ಕೋಡ್‌ (QR Code) ಸಹ ನಮ್ಮ ವೈಯಕ್ತಿಕ ಡೇಟಾ ಸೋರಿಕೆಗೆ ಮೂಲ.

ಕೆಲ ವರ್ಷಗಳ ಹಿಂದೆ ತಮಿಳಿನಲ್ಲಿ ನಟ ಅಥರ್ವ ಅಭಿನಯದ ಕನಿತನ್‌ ಮತ್ತು 100, ನಟ ವಿಶಾಲ್‌ ಅಭಿನಯದ ಇರುಂಬುತಿರೈ, ಕನ್ನಡದ ಗುಲ್ಟು ಇವೆಲ್ಲವೂ ಡೇಟಾ ಸೋರಿಕೆ ಹೇಗೆಲ್ಲಾ ನಡೆಯುತ್ತದೆ. ನಮಗೆ ಸಣ್ಣದಾಗಿ ಕಾಣಿಸುವ ವಿಷಯಗಳು ಡೇಟಾ ಖರೀದಿದಾರರಗೆ ಆಯುಧಗಳಾಗಿ ಮಾರ್ಪಡುತ್ತವೆ ಅನ್ನೋದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

ಇದರ ಮುಂದುವರಿದ ಭಾಗವಾಗಿ ಮತ್ತೊಂದು ಬೆಳವಣಿಗೆ ನಡೆದಿದೆ. ಹೌದು.. ಆ ವೆಬ್‌ಸೈಟ್‌ನಲ್ಲಿ ಮೊಬೈಲ್‌ ನಂಬರ್‌ ಹಾಕಿದ್ರೆ ಸಾಕು ಆ ವ್ಯಕ್ತಿ ಯಾರು? ಎಲ್ಲಿದ್ದಾನೆ? ಆತನ ಇ-ಮೇಲ್‌ ವಿಳಾಸ ಎಲ್ಲವನ್ನೂ ಬಿಚ್ಚಿಡುತ್ತಿದೆಯಂತೆ. ಇದನ್ನ ʻಪ್ರಾಕ್ಸಿ ಅರ್ಥ್‌ʼ (ProxyEarth) ಅಂತ ಹೇಳಲಾಗ್ತಿದೆ. ಇದು ಅನುಕೂಲ ಆಗೋದಕ್ಕಿಂತ ಅನಾನುಕೂಲ ಆಗುವ ಸಾಧ್ಯತೆಯೇ ಹೆಚ್ಚು ಎಂಬ ಕಳವಳ ಉಂಟಾಗಿದೆ. ಅಷ್ಟಕ್ಕೂ ಏನಿದು ಪ್ರಾಕ್ಸಿ ಅರ್ಥ್‌? ಎಲ್ಲಿ ಬಳಕೆಯಾಗ್ತಿದೆ? ಅನ್ನೋದನ್ನ ತಿಳಿಯೋಣ…

ಏನಿದು ಪ್ರಾಕ್ಸಿ ಅರ್ಥ್‌?
ಪ್ರಾಕ್ಸಿ ಅರ್ಥ್‌ ಅನ್ನೋದು ಒಂದು ವೆಬ್‌ಸೈಟ್‌ ಆಗಿದೆ. ಫೋನ್‌ ನಂಬರ್‌ ಮೂಲಕ ವ್ಯಕ್ತಿಯ ಲೈವ್‌ ಲೊಕೆಷನ್‌ ಗುರುತಿಸುವ ಜೊತೆಗೆ ಇಮೇಲ್‌ ವಿಳಾಸ ಸೇರಿ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನೂ ಸಹ ನೀಡುತ್ತದೆ ಎನ್ನಲಾಗಿದೆ. ಆದ್ರೆ ಇದು ಎಲ್ಲಾ ಮೊಬೈಲ್‌ ಸಂಖ್ಯೆಗಳಿಗೂ ಅನ್ವಯಿಸಲ್ಲ. ವೆಬ್‌ಸೈಟ್‌ನ ಡೇಟಾ ಬೇಸ್‌ನಲ್ಲಿ ಫೀಡ್‌ ಮಾಡಲಾದ ನಂಬರ್‌ಗಳ ವಿವರ ಮಾತ್ರ ನೀಡುತ್ತಿದೆ ಎಂದು ವರದಿಗಳು ತಿಳಿಸಿವೆ.

ವೆಬ್‌ಸೈಟ್‌ ಮೂಲ ಯಾವುದು?
ಸದ್ಯದ ವರದಿಗಳ ಪ್ರಕಾರ, ರಾಕೇಶ್‌ ಹೆಸರಿನ ವ್ಯಕ್ತಿ ಈ ವೆಬ್‌ಸೈಟ್‌ ನಡೆಸುತ್ತಿದ್ದಾರೆ. ಆದ್ರೆ ಇದೂ ಕೂಡ ಅಸಲಿಯೋ ಅಥವಾ ನಕಲಿ ಐಡಿಯೋ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. ಈ ವೆಬ್‌ಸೈಟ್‌ ಫೀಡ್‌ ಮಾಡಲಾದ ನಂಬರ್‌ಗಳ ಹುಡುಕಾಟ ನಡೆಸುವಾಗ ಇರುವ ಹಳೆಯ ಡೇಟಾವನ್ನಷ್ಟೇ ನೀಡುತ್ತಿದೆ.

ಡೇಟಾ ಎಲ್ಲಿಂದ ಪಡೆಯುತ್ತದೆ?
ವ್ಯಕ್ತಿಯ ಮೊಬೈಲ್‌ ಸಂಖ್ಯೆ ಹಾಕಿದ್ರೆ ಇಡೀ ಜಾತಕ ಬಿಚ್ಚಿಡುತ್ತೆ ಅನ್ನೋದು ಸರಿ. ಆದ್ರೆ ಈ ವೆಬ್‌ಗೆ ಡೇಟಾ ಎಲ್ಲಿಂದ ಸಿಗುತ್ತದೆ ಅನ್ನೋದೇ ಆಶ್ಚರ್ಯ. ಹಲವಾರು ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ತಮಗಾದ ಅನುಭವವನ್ನ ಹಂಚಿಕೊಂಡಿದ್ದಾರೆ. ತಾನು ಯಾವುದೇ ಡೇಟಾ ಸೋರಿಕೆ ಮಾಡಿಲ್ಲ, ಬದಲಿಗೆ ಜನರಿಂದಲೇ ಹಲವು ಸಮಯಗಳಲ್ಲಿ ಸೋರಿಕೆಯಾದ ಡೇಟಾಗಳನ್ನ ಸಂಗ್ರಹಿಸಿ ಫೀಡ್‌ ಮಾಡಲಾಗಿದೆ. ಇದೇ ಡೇಟಾ ಆಧಾರದ ಮೇಲೆ ಪ್ರಾಕ್ಸಿ ಅರ್ಥ್‌ ವೆಬ್‌ಸೈಟ್‌ ಕಾರ್ಯನಿರ್ವಹಿಸುತ್ತಿದೆಯಂತೆ. ಆದ್ರೆ ಅಸಲಿ ಕಾರಣ ಬೇರೆಯೇ ಇದೆ. ರಾಕೇಶ್‌ ತನ್ನ ಬೇರೆ ಬೇರೆ ಉತ್ಪನ್ನಗಳ ಪ್ರಚಾರಕ್ಕಾಗಿ ಮೊದಲು ಪ್ರೇಕ್ಷಕರ ಗಮನ ಸೆಳೆಯಲು ಈ ವೆಬ್‌ಸೈಟ್‌ ಶುರು ಮಾಡಿದ್ದಾಗಿ ವರದಿಯಾಗಿದೆ.

ಕುತಂತ್ರಾಂಶಗಳಿವೆ ಎಚ್ಚರಿಕೆ
ಈ ರೀತಿ ನಮ್ಮ ಡೇಟಾ ಸೋರಿಕೆಯನ್ನ ತಡೆಯಲು ಮೊದಲು ನಾವು ಎಚ್ಚೆತ್ತುಕೊಳ್ಳಬೇಕು. ಅದಕ್ಕಾಗಿ ಮೊದಲು ನಿಮ್ಮ ಕಂಪ್ಯೂಟರ್ ಆಂಟಿವೈರಸ್ ಹಾಕಿಕೊಳ್ಳಿ.

ನಮ್ಮ ಕೆಲಸದಲ್ಲಿ ಸಹಾಯಮಾಡಲು ತಂತ್ರಾಂಶಗಳು (ಸಾಫ್ಟ್‌ವೇರ್) ಇರುವ ಹಾಗೆ ನಮಗೆ ತೊಂದರೆ ಕೊಡುವ ವೈರಸ್, ವರ್ಮ್ ಮುಂತಾದ ಕುತಂತ್ರಾಂಶಗಳು (ಮಾಲ್‌ವೇರ್) ಕೂಡ ಇವೆ. ಅವುಗಳಿಂದ ಪಾರಾಗಲು ನಿಮ್ಮ ಕಂಪ್ಯೂಟರ್ ಹಾಗೂ ಮೊಬೈಲಿನಲ್ಲಿ ಉತ್ತಮ ಆಂಟಿವೈರಸ್ ಹಾಕಿಕೊಳ್ಳಿ. ಯಾರೋ ಹೇಳಿದರೆಂದು ಸಿಕ್ಕಸಿಕ್ಕ ಆಪ್‌ಗಳನ್ನು ಮತ್ತು ಸಾಫ್ಟ್‌ವೇರ್‌ಗಳನ್ನ ಡೌನ್‌ಲೋಡ್ ಮಾಡಬೇಡಿ. ಹಾಗೆಯೇ ಅಪರಿಚಿತರಿಂದ ಬರುವ ಮೆಸೇಜ್ ಅಥವಾ ಇಮೇಲ್‌ನಲ್ಲಿರುವ ಲಿಂಕ್‌ಗಳ ಮೇಲೂ ಕ್ಲಿಕ್ ಮಾಡಬೇಡಿ, ಅದರಿಂದಲೂ ವೈರಸ್ ಬರಬಹುದು. ಅಲ್ಲದೇ ಝೆರಾಕ್ಸ್‌ ಮಳಿಗೆಗಳಲ್ಲಿ ಅಥವಾ ಸೈಬರ್‌ ಸೆಂಟರ್‌ಗಳಲ್ಲಿ ನಿಮ್ಮ ದಾಖಲೆಗಳನ್ನ ಪ್ರಿಂಟ್ ತೆಗೆಯುವಾಗ ನಿಗಾಯಿಡಿ.

ಪಬ್ಲಿಕ್‌ ವೈಫೈ ಬಳಸುವ ಮುನ್ನ ಎಚ್ಚರ!
ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ ಸೌಲಭ್ಯ ಒದಗಿಸುವ ಅಭ್ಯಾಸ ಇದೀಗ ವ್ಯಾಪಕವಾಗುತ್ತಿದೆ. ಇಂತಹ ಸಂಪರ್ಕಗಳನ್ನು ಯಾರುಬೇಕಾದರೂ ಉಪಯೋಗಿಸಬಹುದಾದ್ದರಿಂದ ಅಲ್ಲಿ ಕುತಂತ್ರಿಗಳಿರುವ ಸಾಧ್ಯತೆ ಖಂಡಿತಾ ಇರುತ್ತದೆ. ಹಾಗಾಗಿ ಅಲ್ಲಿ ಹಣಕಾಸು ವ್ಯವಹಾರ, ಖಾಸಗಿ ಮಾಹಿತಿಯ ರವಾನೆ ಮುಂತಾದವನ್ನು ಮಾಡದಿರುವುದು ಒಳ್ಳೆಯದು. ಇನ್ನು ನಮ್ಮ ಮನೆಗಳಲ್ಲಿ ವೈ-ಫೈ ಸಂಪರ್ಕ ಇರುತ್ತದಲ್ಲ, ಅದನ್ನು ಸದೃಢ ಪಾಸ್‌ವರ್ಡ್ ಮೂಲಕ ಸುರಕ್ಷಿತಗೊಳಿಸಿಕೊಳ್ಳುವುದು ಅತ್ಯಗತ್ಯ. ಹಾಗೆಯೇ ಬೇರೆಯವರಿಂದ ಅದರ ದುರುಪಯೋಗ ಆಗದಂತೆ ನೋಡಿಕೊಳ್ಳಲು ನಮ್ಮ ಪಾಸ್‌ವರ್ಡ್ ಅನ್ನು ಜೋಪಾನ ಮಾಡಿಕೊಳ್ಳುವುದೂ ಅನಿವಾರ್ಯ.

Share This Article