45 ವರ್ಷಗಳ ಎಲ್‌ಡಿಎಫ್‌ ಆಡಳಿತ ಅಂತ್ಯ – ತಿರುವನಂತಪುರಂ ಪಾಲಿಕೆಯಲ್ಲಿ ಬಿಜೆಪಿ ಕಮಾಲ್‌

2 Min Read

ತಿರುವನಂತಪುರಂ: ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು ರಾಜಧಾನಿ ತಿರುವನಂತಪುರಂ ಪಾಲಿಕೆಯಲ್ಲಿ(Thiruvananthapuram Corporation) ಇದೇ ಮೊದಲ ಬಾರಿಗೆ ಬಿಜೆಪಿ(BJP) ನೇತೃತ್ವದ ಎನ್‌ಡಿಎ (NDA) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

101 ವಾರ್ಡ್‌ಗಳಲ್ಲಿ 50 ರಲ್ಲಿ ಬಿಜೆಪಿ ಜಯಗಳಿಸಿದೆ. ಈ ಮೂಲಕ ಎಲ್‌ಡಿಎಫ್‌ನ 45 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದೆ. ಆಡಳಿತದಲ್ಲಿರುವ ಎಲ್‌ಡಿಎಫ್‌ 29 ವಾರ್ಡ್‌ಗಳಲ್ಲಿ ಜಯಗಳಿಸಿದರೆ ಯುಡಿಎಫ್‌ ಮೈತ್ರಿಕೂಟ 19 ವಾರ್ಡ್‌ಗಳಲ್ಲಿ ಮಾತ್ರ ಜಯ ಸಾಧಿಸಿದೆ. ಎರಡು ಕ್ಷೇತ್ರವನ್ನು ಇತರರು ಗೆದ್ದಿದ್ದಾರೆ.  ಬಹುಮತಕ್ಕೆ 51 ಸ್ಥಾನಗಳ ಅಗತ್ಯವಿರುವ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ನಿಂತು ಜಯಗಳಿಸಿದ ಇಬ್ಬರು ಸದಸ್ಯರ ಜೊತೆ ಬಿಜೆಪಿ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಕೇರಳದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಆರ್. ಶ್ರೀಲೇಖಾ ಅವರು ತಿರುವನಂತಪುರಂ ಕಾರ್ಪೊರೇಷನ್‌ನ ಶಾಸ್ತಮಂಗಲಂ ವಿಭಾಗದಿಂದ ಗೆದ್ದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಏರಿದರೆ ಶ್ರೀಲೇಖಾ ಅವರು ಮೇಯರ್‌ ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ.

2020ರ ಚುನಾವಣೆಯಲ್ಲಿ ಎಲ್‌ಡಿಎಫ್‌ 51, ಯುಡಿಎಫ್‌ 10, ಎನ್‌ಡಿಎ 34, ಇತರರು 5 ಕ್ಷೇತ್ರಗಳಲ್ಲಿ ಜಯಗಳಿಸಿದ್ದರು. ಇದನ್ನೂ ಓದಿ: ಖ್ಯಾತ ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ – 6 ಆರೋಪಿಗಳಿಗೆ 20 ವರ್ಷ ಜೈಲು

ಬಿಜೆಪಿಗೆ ಕೇರಳದಲ್ಲಿ ಹೇಳಿಕೊಳ್ಳುವಷ್ಟು ದೊಡ್ಡ ನೆಲೆ ಇಲ್ಲ. ಇಲ್ಲಿನ ಚುನಾವಣೆಯಲ್ಲಿ ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್‌, ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮಧ್ಯೆ ನೇರಾನೇರಾ ಸ್ಪರ್ಧೆ ನಡೆಯುತ್ತಿವೆ. ಆದರೆ ಈ ಬಾರಿ ತಿರುವನಂತಪುರಂದಲ್ಲಿ ಕಮಲ ಅರಳುವಲ್ಲಿ ಯಶಸ್ವಿಯಾಗಿದೆ. ಸದ್ಯ ಕಾಂಗ್ರೆಸ್‌ ನಾಯಕರ ವಿರೋಧಕ್ಕೆ ಕಾರಣವಾಗಿರುವ ಶಶಿ ತರೂರ್‌ ತಿರುವನಂತಪುರಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

2026 ರಲ್ಲಿ ಕೇರಳ ವಿಧಾನಸಭಾ ಚುನಾವಣೆ ನಡೆಯಲಿದೆ. ಆಡಳಿತರೂಡ ಎಲ್‌ಡಿಎಫ್‌ಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಿದೆ. ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ. ನಗರ ಪ್ರದೇಶದಲ್ಲಿ ಬಿಜೆಪಿ ಪರ ಒಲವು ವ್ಯಕ್ತವಾಗುತ್ತಿದೆ. ಇಂದು ಸಂಜೆ ವೇಳೆಗೆ ಅಂತಿಮ ಫಲಿತಾಂಶ ಪ್ರಕಟವಾಗಲಿದೆ.

Share This Article