ರಾಯಚೂರು: ಎಸ್ಡಿಎಂಸಿ ಅಧ್ಯಕ್ಷ ವೈಯಕ್ತಿಕ ಸಾಲ ತೀರಿಸದೇ ಇದ್ದಿದ್ದಕ್ಕೆ ರಾಯಚೂರು (Raichur) ತಾಲೂಕಿನ ಕೂಡ್ಲೂರು ಗ್ರಾಮದ ಪ್ರಾಥಮಿಕ ಶಾಲೆಯ ಮಕ್ಕಳ ಬಿಸಿಯೂಟಕ್ಕೆ (Mid Day Meal) ಬ್ಯಾಂಕ್ (Bank) ಕತ್ತರಿ ಹಾಕಿದೆ.
ರಾಯಚೂರಿನಲ್ಲಿ ಬ್ಯಾಂಕೊಂದು ಯಾರದೋ ಸಾಲಕ್ಕೆ ಇನ್ಯಾರಿಗೋ ಸಮಸ್ಯೆ ಉಂಟು ಮಾಡುತ್ತಿದೆ. ಬ್ಯಾಂಕ್ ಅಧಿಕಾರಿಗಳ ಹಠಮಾರಿತನದಿಂದ 255 ಮಕ್ಕಳ ಬಿಸಿಯೂಟಕ್ಕೆ ಸಮಸ್ಯೆ ಎದುರಾಗಿದೆ. ಈ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಇದೇ ಬ್ಯಾಂಕ್ನಲ್ಲಿ ವೈಯಕ್ತಿಕ ಸಾಲ ತೆಗೆದುಕೊಂಡು ತೀರಿಸದಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ಯರಮರಸ್ ಶಾಖೆಯಲ್ಲೇ ಶಾಲೆಯ ಜಂಟಿ ಖಾತೆ ಹಾಗೂ ಎಸ್ಡಿಎಂಸಿ ಅಧ್ಯಕ್ಷನ ಸಾಲ ಇದೆ. ಬ್ಯಾಂಕ್ ಸಿಬ್ಬಂದಿ ಸಾಲ ತೀರಿಸಿದರೆ ಮಾತ್ರ ಶಾಲೆಯ ಚೆಕ್ಗಳನ್ನ ಪಾಸ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದನ್ನೂ ಓದಿ: ಕುರ್ಚಿ ಕಿತ್ತಾಟದ ಮಧ್ಯೆ ಬೆಳಗಾವಿಯಲ್ಲೂ ಡಿನ್ನರ್ ಪಾಲಿಟಿಕ್ಸ್
ತರಕಾರಿ, ಮೊಟ್ಟೆ, ಬಾಳೆಹಣ್ಣು, ಅಡುಗೆ ಅನಿಲದ ಸಿಲಿಂಡರ್ ವೆಚ್ಚವನ್ನ ಚೆಕ್ ಮೂಲಕವೇ ಭರಿಸಲಾಗುತ್ತೆ. ಆದ್ರೆ ಬ್ಯಾಂಕ್ ಸಿಬ್ಬಂದಿ ಚೆಕ್ ಪಾಸ್ ಮಾಡದಿರುವುದರಿಂದ ಬಿಸಿಯೂಟದ ಸಾಮಗ್ರಿಗಳ ಖರೀದಿಗೆ ಸಮಸ್ಯೆ ಉಂಟಾಗುತ್ತಿದೆ. ಎಸ್ಡಿಎಂಸಿ ಅಧ್ಯಕ್ಷ ಹಾಗೂ ಮುಖ್ಯೋಪಾಧ್ಯಾಯರ ಹೆಸರಿನಲ್ಲಿರುವ ಜಂಟಿ ಖಾತೆಗೂ ಎಸ್ಡಿಎಂಸಿ ಅಧ್ಯಕ್ಷರ ವೈಯಕ್ತಿಕ ಸಾಲಕ್ಕೂ ಬ್ಯಾಂಕ್ ಸಂಬಂಧ ಕಲ್ಪಿಸಬಾರದು ಅಂತ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಬ್ಯಾಂಕ್ಗೆ ಅಲೆದಾಡುತ್ತಿದ್ದಾರೆ. ವಿದ್ಯಾರ್ಥಿಗಳ ಬಿಸಿಯೂಟಕ್ಕೆ ತೊಂದರೆಯಾಗುತ್ತಿದ್ದು ಹಣದ ಕೊರತೆ ಎದುರಾಗಿದೆ ಅಂತ ಅಸಹಾಯಕತೆ ಹೊರಹಾಕಿದ್ದಾರೆ.
ಎಸ್ಡಿಎಂಸಿ ಅಧ್ಯಕ್ಷ ಜಗದೀಶ್ ಬ್ಯಾಂಕ್ನಲ್ಲಿ ಒಂದು ಲಕ್ಷ ರೂ. ವೈಯಕ್ತಿಕ ಸಾಲ ತೆಗೆದುಕೊಂಡಿದ್ದು, ಎರಡು ಕಂತು ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ಬಿಸಿಯೂಟದ ಸಾಮಗ್ರಿಗಳನ್ನ ಖರೀದಿಸಿ ವ್ಯಾಪಾರಿಗಳಿಗೆ ನೀಡಿದ ಚೆಕ್ಗಳು ಪಾಸ್ ಆಗದೇ ವ್ಯಾಪಾರಿಗಳು ಚೆಕ್ ವಾಪಸ್ ಕೊಡುತ್ತಿದ್ದಾರೆ. ಈ ಹಿಂದೆ ಒಂದು ಕಂತು ಕಟ್ಟಿದಾಗ ಮಾತ್ರ ಚೆಕ್ ಪಾಸ್ ಮಾಡಿದ್ರು. ಈಗ ಪುನಃ ಸಮಸ್ಯೆ ಎದುರಾಗಿದೆ.
ಸಾಲದ ಕಂತು ಕಟ್ಟಲು ಕಾಲಾವಕಾಶ ಕೊಡಿ ಕಟ್ಟುತ್ತೇನೆ. ಕಂತು ಕಟ್ಟದಿದ್ರೆ ನನ್ನ ಮೇಲೆ ಕ್ರಮ ಕೈಗೊಳ್ಳಿ ಆದ್ರೆ, ಶಾಲೆಯ ಚೆಕ್ ಪಾಸ್ ಮಾಡದೆ ತೊಂದರೆ ಕೊಡಬೇಡಿ ಅಂತ ಎಸ್ಡಿಎಂಸಿ ಅಧ್ಯಕ್ಷ ಜಗದೀಶ್ ಬ್ಯಾಂಕ್ ಮ್ಯಾನೇಜರ್ಗೆ ಮನವಿ ಮಾಡಿದ್ದಾರೆ.
ಇದೇ ಶಾಲೆಗೆ ಈ ಹಿಂದೆ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನ ಕಲ್ಪಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಮಾಡಿಕೊಟ್ಟಿತ್ತು. ಆದ್ರೆ ಬ್ಯಾಂಕ್ ಯಾರದೋ ಸಾಲಕ್ಕೆ ಇನ್ಯಾರಿಗೋ ಸಮಸ್ಯೆ ಉಂಟು ಮಾಡುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತು ಕ್ರಮಕ್ಕೆ ಮುಂದಾಗಬೇಕಿದೆ. ಇದನ್ನೂ ಓದಿ: ಉತ್ತರ ಕರ್ನಾಟಕದ ರೈತರಿಗೆ ಅನ್ಯಾಯ, ಬೆಳೆ ಹಾನಿ, ಮಳೆ ಹಾನಿ ಪರಿಹಾರ ಇಲ್ಲ, ಶ್ವೇತಪತ್ರ ಬಿಡುಗಡೆ ಮಾಡಲಿ: ಅಶೋಕ್ ಆಗ್ರಹ


