– ನಿಮ್ಮ ಜಿಲ್ಲೆಯ ವಾತಾವರಣ ಹೇಗಿದೆ?
ಬೆಂಗಳೂರು: ʻದ್ವಿತ್ವಾʼ ಚಂಡಮಾರುತದ (Cyclone Ditwah) ಪ್ರಭಾವದಿಂದ ಬೆಂಗಳೂರು ನಗರದಲ್ಲಿ ವಿಪರೀತ ಅನಿಸುವಷ್ಟು ಚಳಿಯ ಅನುಭವ ಆಗುತ್ತಿದೆ. ಕೇವಲ ಮುಂಜಾನೆ, ಸಂಜೆ ಅಲ್ಲದೇ ದಿನವಿಡಿಯೂ ಕಳೆದೆರಡು ದಿನದಿಂದ ಮೋಡ ತುಂಬಿದ್ದು, ಇವತ್ತೂ ಕೂಡಾ ಇದೇ ವಾತಾವರಣ ಕಂಡುಬಂದಿದೆ. ಮೈಕೊರೆವ ಚಳಿಯೊಂದಿಗೆ ತುಂತುರು ಮಳೆ ಕೂಡ ಅಲ್ಲಲ್ಲಿ ಬೀಳುತ್ತಿದೆ. ಈ ನಡುವೆ ಬೆಂಗಳೂರು (Bengaluru) ಸೇರಿದಂತೆ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ.
ದಿತ್ವಾ ಚಂಡಮಾರುತದ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಹಗುರ ಮಳೆಯಾಗುವ (Lite Rain) ಮುನ್ಸೂಚನೆ ನೀಡಿದೆ. ಜೊತೆಗೆ ಹಗಲಿನಲ್ಲಿ ಗರಿಷ್ಠ ಉಷ್ಣಾಂಶ ಗಣನೀಯವಾಗಿ ಇಳಿಮುಖವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಎಲ್ಲೆಲ್ಲಿ ಮಳೆ?
ದಕ್ಷಿಣ ಒಳನಾಡು ಕರಾವಳಿ ಜಿಲ್ಲೆಗಳಿಗೆ ಹಗುರ ಮಳೆಯ ಮುನ್ಸೂಚನೆ ನೀಡಿದ್ದರೆ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿಯ ಕೆಲವೆಡೆ ಸಾಧಾರಣ ಮಲೆಯಾಗಲಿದೆ ಎಂದು ತಿಳಿಸಿದೆ.
ಅಲ್ಲದೇ ಮುಂದಿನ ಮೂರು ದಿನಗಳ ಕಾಲ ಚಳಿಯ ವಾತಾವರಣ ಮುಂದುವರೆಯಲಿದೆ. ಬೆಂಗಳೂರಲ್ಲಿ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ಗೆ ಇಳಿಯಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ಮಾಹಿತಿ ನೀಡಿದೆ.


