ದುಬೈ ಏರ್‌ಶೋನಲ್ಲಿ ತೇಜಸ್ ಫೈಟರ್ ಜೆಟ್ ಪತನ – ಪೈಲಟ್ ದುರ್ಮರಣ; ತನಿಖೆಗೆ ಆದೇಶ

1 Min Read

– ʻನೆಗೆಟಿವ್ ಯೂ ಟರ್ನ್ʼನಿಂದ ರಿಕವರ್ ಆಗಲು ವಿಫಲವಾಗಿದ್ದೇ ದುರಂತಕ್ಕೆ ಕಾರಣವಾ?
– 2016ರಿಂದ ಸೇವೆಯಲ್ಲಿದ್ದ ಫೈಟರ್‌ ಜೆಟ್‌

ಅಬುಧಾಬಿ: ʻದುಬೈ ಅಂತಾರಾಷ್ಟ್ರೀಯ ಏರ್‌ಶೋʼನಲ್ಲಿ (Dubai Air Show) ಭಾರತದ ತೇಜಸ್‌ ಲಘು ಯುದ್ಧವಿಮಾನ (Tejas Fighter Jet) ಪತನಗೊಂಡಿದ್ದು, ಪೈಲಟ್ ದುರ್ಮರಣಕ್ಕೀಡಾಗಿದ್ದಾರೆ. ನಮನ್ ಸಯಾಲ್ ಸಾವಿಗೀಡಾದ ಪೈಲಟ್‌.

ಬೆಂಗಳೂರಿನ ಹೆಚ್‌ಎಎಲ್ ನಿರ್ಮಿತ ಲಘು ಯುದ್ಧ ವಿಮಾನ (ಸಿಂಗಲ್ ಸೀಟ್) ಇಂದು ಮಧ್ಯಾಹ್ನ 2:10ರ ಸುಮಾರಿಗೆ ವೈಮಾನಿಕ ಪ್ರದರ್ಶನ ನೀಡುವಾಗಲೇ ಪತನಗೊಂಡಿದೆ. ವಿಮಾನ ಪತನಗೊಂಡ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ವೈಮಾನಿಕ ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದ ಸಾವಿರಾರು ಸಂಖ್ಯೆಯ ಪ್ರೇಕ್ಷಕರಲ್ಲಿ ಆತಂಕ ಮೂಡಿಸಿದೆ.

ದುರ್ಘಟನೆ ಬಗ್ಗೆ ಭಾರತದ ವಾಯುಸೇನೆ (IAF) ಆಘಾತ ವ್ಯಕ್ತಪಡಿಸಿದ್ದು, ತನಿಖೆಗೆ ಆದೇಶಿಸಿದೆ. ದುರಂತದಲ್ಲಿ ಪೈಲಟ್ ಮೃತಪಟ್ಟಿದ್ದು, ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದೆ.

`ನೆಗೆಟಿವ್ ಯೂ ಟರ್ನ್’ನಿಂದ ರಿಕವರ್ ಆಗಲು ವಿಫಲ
ಇನ್ನೂ ತೇಜಸ್‌ ಪತನ ದುರಂತಕ್ಕೆ `ನೆಗೆಟಿವ್ ಯು ಟರ್ನ್’ (ನೆಗೆಟಿವ್‌-G – Negative G) ಕಾರಣ ಅಂತ ವಾಯುಯಾಣ ತಜ್ಞರು ಪ್ರಾಥಮಿಕ ಮೌಲ್ಯಮಾಪನದ ಬಳಿಕ ಅಂದಾಜಿಸಿದ್ದಾರೆ. ನೆಗೆಟಿವ್‌-G ಅಂದ್ರೆ ವಿಮಾನವು ಗುರುತ್ವಾಕರ್ಷಣೆಯ ವಿರುದ್ಧ ದಿಕ್ಕಿನಲ್ಲಿ ಕಾರ್ಯನಿರ್ವಹಿಸುವ ಬಲವನ್ನು ಸೂಚಿಸುತ್ತದೆ. ತೀವ್ರ ಪ್ರಕ್ಷುಬ್ಧತೆಯ ಸಮಯದಲ್ಲಿ ಇದು ಕಂಡುಬರುತ್ತದೆ. ತೇಜಸ್‌ ಯುದ್ಧ ವಿಮಾನ ನೆಲಕ್ಕಪ್ಪಳಿಸುವ ಮೊದಲು ʻನೆಗೆಟಿವ್‌ ಯೂ ಟರ್ನ್‌ʼ ಪಡೆಯುತ್ತಿತ್ತು. ಆದ್ರೆ ಇದು ವಿಫಲಗೊಂಡಿದ್ದರಿಂದ ದುರಂತ ಸಂಭವಿಸಿದೆ ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿದೆ. ಸಂಪೂರ್ಣ ತನಿಖೆ ಬಳಿಕವಷ್ಟೇ ಏನಾಗಿದೆ ಅಂತ ಹೇಳಬಹುದು ಎಂದು ತಜ್ಞರು ಹೇಳಿದ್ದಾರೆ.

ಅಲ್ಲದೇ ನೆಗೆಟಿವ್‌ ಯೂ ಟರ್ನ್‌ ಸಂಭವಿಸಿದಾಗ ಫೈಟರ್‌ ಪೈಲಟ್‌ ದಿಗ್ಭ್ರಮೆಗೊಳ್ಳುವ ಅಥವಾ ಪ್ರಜ್ಞೆ ಕಳೆದುಕೊಳ್ಳುವ ಸಾಧ್ಯತೆಗಳೂ ಇರುತ್ತವೆ. ಇದಕ್ಕಾಗಿಯೇ ಪೈಲಟ್‌ಗಳಿಗೆ ವಿಶೇಷ ತರಬೇತಿಯನ್ನೂ ನೀಡಲಾಗಿರುತ್ತದೆ ಎಂದಿದ್ದಾರೆ ತಜ್ಞರು. ಆದ್ರೆ ಈ ಘಟನೆಯಲ್ಲಿ ನೆಗೆಟಿವ್‌ ಯೂಟರ್ನ್‌ ಸಂಭವಿಸಿದಾಗ ಪೈಲಟ್‌ ಈ ಸಮಸ್ಯೆಯ ಅನುಭವಿಸಿದ್ದಾರೆಯೇ ಅನ್ನೋದು ಇನ್ನೂ ತಿಳಿದುಬಂದಿಲ್ಲ.

ಇನ್ನೂ ಪತನಗೊಂಡ ತೇಜಸ್‌ ಲಘು ಯುದ್ಧವಿಮಾನ ತಮಿಳುನಾಡಿನ ಸುಲೂರಿನಲ್ಲಿರುವ ಸ್ಕ್ವಾಡ್ರನ್‌ಗೆ ಸೇರಿದ್ದು, ಇದು 2016 ರಿಂದ ಸೇವೆಯಲ್ಲಿದೆ.

Share This Article