ಚಂಡೀಗಢ: ಪಂಜಾಬ್‌ನ ಲುಧಿಯಾನ ಪೊಲೀಸರು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ದೆಹಲಿ-ಅಮೃತಸರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲಾಡೋವಾಲ್ ಟೋಲ್ ಪ್ಲಾಜಾ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ ಬಬ್ಬರ್ ಖಾಲ್ಸಾ ಗುಂಪಿನೊಂದಿಗೆ ಸಂಪರ್ಕದಲ್ಲಿದ್ದ ಇಬ್ಬರು ಭಯೋತ್ಪಾದಕರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಎನ್‌ಕೌಂಟರ್ ನಡೆಯುವುದಕ್ಕೆ ಒಂದು ದಿನ ಮುಂಚಿತವಾಗಿ ಪೊಲೀಸರು ಹ್ಯಾಂಡ್ ಗ್ರೆನೇಡ್‌ಗಳೊಂದಿಗೆ ಕೆಲವು ಉಗ್ರರನ್ನ ಬಂಧಿಸಿದ್ದರು ಎಂದು ತಿಳಿದುಬಂದಿದೆ.
ಘಟನೆ ಕುರಿತು ಲುಧಿಯಾನ ಪೊಲೀಸ್ ಆಯುಕ್ತ ಸ್ವಪನ್ ಶರ್ಮಾ ಮಾಹಿತಿ ನೀಡಿದ್ದಾರೆ. ನಾವು ಈಗಾಗಲೇ ಭಯೋತ್ಪಾದಕ ಮಾಡ್ಯೂಲ್ ಅನ್ನು ಭೇದಿಸಿ, ಮೂವರು ಶಂಕಿತರನ್ನ ಬಂಧಿಸಿದ್ದೆವು. ಇಂದು, ಐಎಸ್‌ಐ ಆದೇಶದ ಮೇರೆಗೆ ಕೆಲಸ ಮಾಡುತ್ತಿದ್ದ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಸಂಘಟನೆಯ ಇಬ್ಬರು ಭಯೋತ್ಪಾದಕರ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಭಯೋತ್ಪಾದಕರನ್ನ ಎನ್‌ಕೌಂಟರ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ..

ಈ ಇಬ್ಬರು ಶಂಕಿತ ಭಯೋತ್ಪಾದಕರಿಗೆ ಹ್ಯಾಂಡ್ ಗ್ರೆನೇಡ್‌ಗಳನ್ನ ಸಂಗ್ರಹಿಸಿ ಗೊತ್ತುಪಡಿಸಿದ ಸ್ಥಳಗಳಲ್ಲಿ ಎಸೆಯುವ ಕೆಲಸ ವಹಿಸಲಾಗಿತ್ತು. ಸದ್ಯ ಇಬ್ಬರನ್ನು ಎನ್‌ಕೌಟರ್ ಮಾಡಲಾಗಿದ್ದು, ಸ್ಥಳದಲ್ಲಿ ಹ್ಯಾಂಡ್ ಗ್ರೆನೇಡ್‌ಗಳು, ಕೆಲವು ಪಿಸ್ತೂಲ್‌ಗಳು ಮತ್ತು ಕಾರ್ಟ್ರಿಡ್ಜ್‌ಗಳನ್ನ ವಶಪಡಿಸಿಕೊಂಡಿದ್ದಾರೆ.
ಬಬ್ಬರ್ ಖಾಲ್ಸಾ ಭಾರತದಲ್ಲಿರುವ ಸಿಖ್ ಉಗ್ರಗಾಮಿ ಸಂಘಟನೆಯಾಗಿದ್ದು, ಸಿಖ್ ಸ್ವತಂತ್ರ ರಾಜ್ಯವಾದ ಖಲಿಸ್ತಾನದ ಸ್ಥಾಪನೆಗಾಗಿ ಹೋರಾಡುತ್ತಿದೆ. ಇದನ್ನು 1978 ರಲ್ಲಿ ಸುಖದೇವ್ ಸಿಂಗ್ ಬಬ್ಬರ್ ಸ್ಥಾಪಿಸಿದರು. ಭಾರತ, ಕೆನಡಾ, ಜರ್ಮನಿ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಹಲವು ದೇಶಗಳು ಇದನ್ನ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿವೆ.

