– ನಾಲ್ಕು ತಿಂಗಳ ತನಿಖೆ ನಡೆಸಿದ ಎಸ್‌ಐಟಿ ದೋಷಾರೋಪ
ಮಂಗಳೂರು: ಧರ್ಮಸ್ಥಳ ಬುರುಡೆ ಕೇಸ್‌ಗೆ (Dharmasthala Case) ಇಂದೇ ತೆರೆ ಬೀಳುವ ಸಾಧ್ಯತೆ ಇದೆ. ಬರೋಬ್ಬರಿ ನಾಲ್ಕು ತಿಂಗಳುಗಳ ಕಾಲ ತನಿಖೆ ನಡೆಸಿದ ಪೊಲೀಸರು ಬುರುಡೆ ಗ್ಯಾಂಗ್ ಬುಡದಲ್ಲಿ ಚಾರ್ಜ್‌ಶೀಟ್ ಬಾಂಬ್ ಫಿಕ್ಸ್ ಮಾಡಿದ್ದಾರೆ. ಬಣ್ಣ ಬಣ್ಣದ ಕಥೆ ಕಟ್ಟಿದ್ದ ಬುರುಡೆ ಗ್ಯಾಂಗ್‌ಗೆ ಇದೀಗ ನಡುಕ ಶುರುವಾಗಿದೆ.
ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ ಸಂಬಂಧ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ಇಂದು ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ. ಬರೋಬ್ಬರಿ 4,000 ಪುಟಗಳ ಚಾರ್ಜ್‌ಶೀಟ್ ತಯಾರಿಸಲಾಗಿದೆ. ಎಸ್‌ಐಟಿ ಪೊಲೀಸರು ಪ್ರಕರಣದಲ್ಲಿ 6 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಿದ್ದಾರೆಂಬ ಮಾಹಿತಿ ಇದೆ. ಬುರುಡೆ ಗ್ಯಾಂಗ್‌ನ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ, ಬುರುಡೆ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ, ಸುಜಾತ ಭಟ್, ವಿಠಲ್‌ಗೌಡ ಮಾಡಿದ ಷಡ್ಯಂತ್ರ ಚಾರ್ಜ್‌ಶೀಟ್‌ನ ಪ್ರಮುಖ ಅಂಶಗಳಾಗುವ ಸಾಧ್ಯತೆಯಿದೆ.

4,000 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಅನಾಮಿಕ ವ್ಯಕ್ತಿಯ ಹೇಳಿಕೆ, 17ಕ್ಕೂ ಹೆಚ್ಚು ಜಾಗದಲ್ಲಿ ನಡೆದ ಸಮಾಧಿ ಶೋಧ, ತನಿಖೆ ಸಂದರ್ಭದ ವಿಚಾರಣೆ, ಅನಾಮಿಕ ವ್ಯಕ್ತಿಗೆ ಸಂಬಂಧಿಸಿದಂತೆ ಆತನ ಸಂಪರ್ಕದಲ್ಲಿದ್ದವರ ವಿಚಾರಣೆ ಚಾರ್ಜ್ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಪೂರಕ ಸಾಕ್ಷಿಗಳು ಫೋಟೋ ವಿಡಿಯೋ ಹೇಳಿಕೆಗಳು ದೋಷಾರೋಪಣಾ ಪಟ್ಟಿಯಲ್ಲಿದೆ. ಎಲ್ಲರ ಪ್ರತ್ಯೇಕ ಹೇಳಿಕೆ ದಾಖಲು ಮಾಡಿಕೊಂಡಿರುವ ಎಸ್‌ಐಟಿ ಜೂನ್ 22ರಿಂದ ಎರಡು ತಿಂಗಳುಗಳ ಕಾಲ ನಡೆದ ದೂರು ಪ್ರಕ್ರಿಯೆ, ನಾಲ್ಕು ತಿಂಗಳ ಪೊಲೀಸರ ತನಿಖೆ ಸಂಬಂಧಿಸಿದಂತೆ ಎಲ್ಲಾ ಡಿಟೇಲ್‌ಗಳನ್ನು 4,000 ಪುಟಗಳ ಚಾರ್ಜ್ಶೀಟ್‌ನಲ್ಲಿ ಜೋಡಿಸಲಾಗಿದೆ.
ಇಂದು ಚಾರ್ಜ್‌ಶೀಟ್ ಸಲ್ಲಿಕೆ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ ನಡೀತು. ಗೃಹ ಸಚಿವ ಪರಮೇಶ್ವರ್, ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಸೇರಿದಂತೆ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿ ಆಗಿದ್ದರು.
ಚಿನ್ನಯ್ಯ ಅರೆಸ್ಟ್ ಆಗಿದ್ದು, ಉಳಿದವರ ವಿಚಾರಣೆ ನಡೆಸಲಾಗಿದೆ. ಚಾರ್ಜ್ಶೀಟ್ ನಂತರ ಬುರುಡೆ ಗ್ಯಾಂಗ್‌ನ ಕಥೆ ಏನು ಎಂಬುದು ಕುತೂಹಲ ಮೂಡಿಸಿದೆ.
