Publictv Explainer: ಮತ್ತೆ ಯಾದವಿ ಕಲಹ ಸ್ಫೋಟ; ಬಿಹಾರದ ದೊಡ್ಮನೆ ಒಡೆದು ಚೂರಾಗಿದ್ದೇಕೆ, ಕಾರಣ ಯಾರು?

Public TV
6 Min Read

ಒಂದೆಡೆ ಚುನಾವಣೆಯಲ್ಲಿ ಹೀನಾಯ ಸೋಲು.. ಮತ್ತೊಂದೆಡೆ ಕುಟುಂಬದಲ್ಲಿ ಒಡಕು.. ಬಿಹಾರದ ಅತ್ಯಂತ ಪ್ರಭಾವಶಾಲಿ ರಾಜಕೀಯ ಪಕ್ಷವೊಂದರ ಕುಟುಂಬದಲ್ಲಿನ ಬೆಳವಣಿಗೆ ಅಚ್ಚರಿ ಮೂಡಿಸಿದೆ. ಈಚೆಗೆ ನಡೆದ ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿಗೆ ಭಾರಿ ಮುಖಭಂಗವಾಯಿತು. ಸೋಲಿನ ಆಘಾತದಿಂದ ಚೇತರಿಸಿಕೊಳ್ಳುತ್ತಿರುವಾಗಲೇ, ಮತ್ತೊಂದು ಆಘಾತ ಎದುರಾಗಿದೆ. ಯಾದವ ಕುಟುಂಬದಲ್ಲಿ ಒಡಕು ಮೂಡಿದೆ. ಮನೆಯ ಜಗಳ ಬೀದಿಗೆ ಬಂದು ನಿಂತಿದೆ. ಸಿಎಂ ಆಗಿ ರಾಜ್ಯವನ್ನು ಮುನ್ನಡೆಸಿದ್ದ ತಂದೆ ಲಾಲುಗೆ ಮೂತ್ರಪಿಂಡ ದಾನ ಮಾಡಿ ಯಾದವ ಕುಟುಂಬದ ನಿಷ್ಠೆ ಮತ್ತು ತ್ಯಾಗದ ಸಾಕಾರರೂಪಿಣಿಯಾಗಿದ್ದ ರೋಹಿಣಿ ಆಚಾರ್ಯ ಅವರು ಸಾರ್ವಜನಿಕವಾಗಿಯೇ ಕುಟುಂಬದ ವಿರುದ್ಧ ಬೇಸರ ಹೊರಹಾಕಿದ್ದಾರೆ. ರಾಜಕೀಯ ಅಷ್ಟೇ ಅಲ್ಲ, ತನ್ನ ಕುಟುಂಬದಿಂದಲೇ ದೂರಾಗಿದ್ದಾರೆ. ಅತ್ತ ರಾಜಕೀಯದಲ್ಲಿ ಹಿನ್ನಡೆ, ಇತ್ತ ಮಕ್ಕಳಲ್ಲಿನ ವೈಮನಸ್ಸು ಆರ್‌ಜೆಡಿಯ ಲಾಲು ಕುಟುಂಬಕ್ಕೆ ಒಂದಾದ ಮೇಲೊಂದರಂತೆ ಪೆಟ್ಟು ಕೊಟ್ಟಿದೆ.

ಮಾಜಿ ಸಿಎಂ ಲಾಲು ಕುಟುಂಬದಲ್ಲಿ ಏನಾಗ್ತಿದೆ? ಯಾದವ್‌ ಪುತ್ರಿ ಕುಟುಂಬದಿಂದ ದೂರಾಗಲು ಕಾರಣವೇನು? ಸಹೋದರ-ಸಹೋದರಿಯರೇ ಕಿತ್ತಾಡಿಕೊಳ್ಳುತ್ತಿರೋದ್ಯಾಕೆ? ಕುಟುಂಬದಲ್ಲಿ ಮಹಾಬಿರುಕು ಮೂಡಲು ಕಾರಣವೇನು?

ಲಾಲುಗೆ 7 ಹೆಣ್ಣು, ಇಬ್ಬರು ಗಂಡುಮಕ್ಕಳು
ಲಾಲು ಪ್ರಸಾದ್‌ ಯಾದವ್‌ ಅವರದ್ದು ದೊಡ್ಡು ಕುಟುಂಬ. 1973 ರಲ್ಲಿ ವಿವಾಹವಾದ ಲಾಲು ಯಾದವ್ ಮತ್ತು ರಾಬ್ರಿ ದೇವಿ ಅವರಿಗೆ ಒಂಬತ್ತು ಮಕ್ಕಳಿದ್ದಾರೆ. ಏಳು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು. ಮಕ್ಕಳು ರಾಜಕೀಯದ ಒಳಗೆ ಮತ್ತು ಹೊರಗೆ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಇದು ಅವರನ್ನು ಬಿಹಾರದ ಅತ್ಯಂತ ಶಕ್ತಿಶಾಲಿ ರಾಜಕೀಯ ಕುಟುಂಬಗಳಲ್ಲಿ ಒಂದನ್ನಾಗಿ ಮಾಡಿದೆ. ಈಗ ಆ ಜೇನುಗೂಡಕ್ಕೆ ಬಿರುಕು ಮೂಡಿದೆ.

* ಮಿಸಾ ಭಾರ್ತಿ: ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಅವರ ಹಿರಿಯ ಪುತ್ರಿ ಮಿಸಾ ಭಾರ್ತಿ (49) ಎಂಬಿಬಿಎಸ್ ಪದವೀಧರೆ. ಸಾರ್ವಜನಿಕ ಜೀವನಕ್ಕೆ ಆರಂಭಿಕ ಹಂತದಲ್ಲೇ ಪ್ರವೇಶಿಸಿದ್ದಾರೆ. ಅವರು ಪಾಟಲಿಪುತ್ರದ ಸಂಸದರಾಗಿ ಸೇವೆ ಸಲ್ಲಿಸಿದರು. ಕಂಪ್ಯೂಟರ್ ಎಂಜಿನಿಯರ್ ಶೈಲೇಶ್ ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ದುರ್ಗಾ ಭಾರತಿ, ಗೌರಿ ಭಾರತಿ ಮತ್ತು ಅಧಿರಾಜ್ ಪ್ರತಾಪ್ ಎಂಬ ಮೂವರು ಮಕ್ಕಳಿದ್ದಾರೆ.

* ರೋಹಿಣಿ ಆಚಾರ್ಯ: ಲಾಲು ಎರಡನೇ ಮಗಳು ರೋಹಿಣಿ (46) ಕೂಡ ವೈದ್ಯೆಯಾಗಿದ್ದು, ರಾಜಕೀಯ ಕ್ಷೇತ್ರದಲ್ಲಿ ವಿಫಲರಾಗಿದ್ದರು. ಅವರು ಹೂಡಿಕೆ ಬ್ಯಾಂಕರ್ ಸಮರೇಶ್ ಸಿಂಗ್ ಅವರನ್ನು ವಿವಾಹವಾಗಿ ಸಿಂಗಾಪುರದಲ್ಲಿ ನೆಲೆಸಿದ್ದಾರೆ. ರೋಹಿಣಿ ಲಾಲುಗೆ ತಮ್ಮ ಮೂತ್ರಪಿಂಡವನ್ನು ದಾನ ಮಾಡಿದ್ದಾರೆ. ಈ ದಂಪತಿಗೂ ಅಯನಾ ಸಿಂಗ್, ಆದಿತ್ಯ ಸಿಂಗ್ ಮತ್ತು ಅರಿಹಂತ್ ಸಿಂಗ್ ಹೆಸರಿನ ಮೂವರು ಮಕ್ಕಳಿದ್ದಾರೆ.

* ಚಂದಾ ಸಿಂಗ್: ಇವರು ಮೂರನೇ ಮಗಳು. ಪೈಲಟ್ ವಿಕ್ರಮ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇವರು ಸಾರ್ವಜನಿಕ ಜೀವನದಿಂದ ದೂರ ಇದ್ದಾರೆ.

* ರಾಗಿಣಿ ಯಾದವ್: ನಾಲ್ಕನೇ ಪುತ್ರಿಯಾದ ರಾಗಿಣಿ ಸಮಾಜವಾದಿ ಪಕ್ಷದ ನಾಯಕ ರಾಹುಲ್ ಯಾದವ್ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ರಾಗಿಣಿ ಯಾದವ್ ಎಂಜಿನಿಯರಿಂಗ್ ಓದಿದ್ದಾರೆ.

* ಹೇಮಾ ಯಾದವ್: 5ನೇ ಪುತ್ರಿ ಹೇಮಾ, ತೇಜ್ ಯಾದವ್ ಅವರನ್ನು ವಿವಾಹವಾಗಿದ್ದಾರೆ. ಇವರು ಕೂಡ ರಾಜಕೀಯದಿಂದ ದೂರ ಇದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

* ಅನುಷ್ಕಾ ‘ಧನ್ನು’ ರಾವ್: ಅನುಷ್ಕಾ ಹರಿಯಾಣ ಮೂಲದ ಮಾಜಿ ಕಾಂಗ್ರೆಸ್ ಶಾಸಕ ಚಿರಂಜೀವ್ ರಾವ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ನಂದಿನಿ, ರಾಜಲಕ್ಷ್ಮಿ ಮತ್ತು ವಿಕ್ರಮಾದಿತ್ಯ ಎಂಬ ಮೂವರು ಮಕ್ಕಳಿದ್ದಾರೆ.

* ರಾಜ್ ಲಕ್ಷ್ಮಿ: ಈಕೆ ಲಾಲು ಕಿರಿಯ ಮಗಳು. ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಸಮಾಜವಾದಿ ಪಕ್ಷದ ಶಾಸಕ ಮತ್ತು ಮಾಜಿ ಸಂಸದ ತೇಜ್ ಪ್ರತಾಪ್ ಸಿಂಗ್ ಯಾದವ್ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ಅಭ್ಯುದಯ ಪ್ರತಾಪ್ ಮತ್ತು ಜೈ ಹರ್ಷವರ್ಧನ್ ಎಂಬ ಇಬ್ಬರು ಮಕ್ಕಳಿದ್ದಾರೆ.

* ತೇಜ್ ಪ್ರತಾಪ್ ಯಾದವ್: ಲಾಲು ಕುಟುಂಬದ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ (37) ವಿವಿಧ ಸಾರ್ವಜನಿಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಬಿಹಾರದ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಬೇಜವಾಬ್ದಾರಿಯುತ ವರ್ತನೆ ತೋರಿದ್ದಾನೆಂದು ಲಾಲು ಅವರನ್ನು ಪಕ್ಷದಿಂದ ಮತ್ತು ಕುಟುಂಬದಿಂದ ಹೊರಹಾಕಿದರು. ಕೊನೆಗೆ ತೇಜ್‌ ಯಾದವ್‌ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಅವರು ಐಶ್ವರ್ಯಾ ರೈ ಅವರನ್ನು ವಿವಾಹವಾಗಿದ್ದಾರೆ. ಆದರೆ, ಅವರಿಂದ ಬೇರ್ಪಟ್ಟಿದ್ದು, ವಿಚ್ಛೇದನ ಪ್ರಕ್ರಿಯೆಗಳು ನಡೆಯುತ್ತಿವೆ.

* ತೇಜಸ್ವಿ ಯಾದವ್: ಲಾಲು ಮತ್ತು ರಾಬ್ರಿ ದೇವಿ ದಂಪತಿಯ ಕಿರಿಯ ಪುತ್ರ ತೇಜಸ್ವಿ ಯಾದವ್. ಈ ದಂಪತಿಯ ರಾಜಕೀಯವಾಗಿ ಅತ್ಯಂತ ಸಕ್ರಿಯ ಮಕ್ಕಳಲ್ಲಿ ಒಬ್ಬರು. ಬಿಹಾರದ ಅತ್ಯಂತ ಸಕ್ರಿಯ ರಾಜಕೀಯ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ರಾಜ್ಯದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 2025 ರ ಬಿಹಾರ ಚುನಾವಣೆಯಲ್ಲಿ, ಅವರನ್ನು ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಆದರೆ, ಪಕ್ಷ ಹೀನಾಯ ಸೋಲು ಕಂಡಿತು. ತೇಜಸ್ವಿ ಯಾದವ್‌, ರಾಚೆಲ್ ಗೋಡಿನ್ಹೋ ಅಲಿಯಾಸ್ ರಾಜಶ್ರೀ ಯಾದವ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಕಾತ್ಯಾಯನಿ ಯಾದವ್ ಮತ್ತು ಇರಾಜ್ ಲಾಲು ಯಾದವ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಮನೆ ಬಿಟ್ಟ ಲಾಲು 2ನೇ ಪುತ್ರಿ ರೋಹಿಣಿ
ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿತ್ತು. ಎರಡು ದಶಕಗಳ ಕಾಲ ರಾಜ್ಯವನ್ನಾಳಿದ ಆರ್‌ಜೆಡಿ (ಕೇವಲ 25 ಸ್ಥಾನಗಳ ಗೆಲುವು) ಮಕಾಡೆ ಮಲಗಿತು. ಎನ್‌ಡಿಎ ಮೈತ್ರಿಕೂಟ ಐತಿಹಾಸಿಕ ಗೆಲುವು ದಾಖಲಿಸಿತು. ಬಿಹಾರದ ಫಲಿತಾಂಶ ಯಾದವ್‌ ಕುಟುಂಬವನ್ನು ಕಂಗೆಡಿಸಿತ್ತು. ಈ ಸೋಲಿನ ಹಿನ್ನೆಲೆ ಲಾಲು ಪ್ರಸಾದ್‌ ಯಾದವ್‌ ಅವರ 2ನೇ ಪುತ್ರಿ ರೋಹಿಣಿ ಆಚಾರ್ಯ ಮನೆಯಿಂದ ಹೊರ ನಡೆದರು. ‘ನಾನು ರಾಜಕೀಯದಿಂದ ಹೊರನಡೆಯುತ್ತಿದ್ದೇನೆ.. ಕುಟುಂಬದಿಂದಲೂ ದೂರಾಗುತ್ತಿದ್ದೇನೆ..’ ಎಂದು ನೋವಿನಿಂದ ಪೋಸ್ಟ್‌ ಹಂಚಿಕೊಂಡರು. ಸಹೋದರ ತೇಜಸ್ವಿ ಯಾದವ್‌ ನನ್ನನ್ನು ನಿಂದಿಸಿದ್ದಾನೆಂದು ಆರೋಪ ಹೊರಿಸಿದರು. ಇದು ಕುಟುಂಬದಲ್ಲಿನ ಒಳಜಗಳದ ಬಗ್ಗೆ ಬೆಳಕು ಚೆಲ್ಲಿತು.

ಫ್ಯಾಮಿಲಿಯಿಂದಲೇ ಹೊರದಬ್ಬಿಸಿಕೊಂಡ ತೇಜ್‌ ಪ್ರತಾಪ್‌
ರೋಹಿಣಿ ಆಚಾರ್ಯ ಹೊರಬರುವ ಮುನ್ನವೇ ಕುಟುಂಬದಲ್ಲಿ ಬಿರುಕು ಮೂಡಿತ್ತು. ಕಳೆದ ವರ್ಷ ರೋಹಿಣಿ ಮತ್ತೊಬ್ಬ ಸಹೋದರ ತೇಜ್‌ ಪ್ರತಾಪ್‌ ಯಾದವ್‌ ಅವರನ್ನು ಕುಟುಂಬವೇ ಹೊರಹಾಕಿತ್ತು. ತೇಜ್‌ ಯಾದವ್‌ ಅವರ ವಿವಾಹೇತರ ಸಂಬಂಧದ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಹೀಗಾಗಿ, ಅವರನ್ನು ಕುಟುಂಬದಿಂದಲೇ ಹೊರದಬ್ಬಲಾಯಿತು. ನಂತರ ತೇಜ್‌ ಸಂಬಂಧ ಕಡಿದುಕೊಂಡು ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದರು. ಚುನಾವಣೆಯಲ್ಲಿ ಕುಟುಂಬದವರ ವಿರುದ್ಧವೇ ತೊಡೆ ತಟ್ಟಿ ನಿಂತರು.

ಕುಟುಂಬದಲ್ಲಿ ಬಿರುಕುಂಟಾಗಲು ಕಾರಣ ಯಾರು?
ನಾನು ಕುಟುಂಬದಿಂದ ದೂರಾಗಲು ಸಂಜಯ್‌ ಯಾದವ್‌ ಮತ್ತು ರಮೀಜ್‌ ಕಾರಣ. ನಾನು ಕುಟುಂಬದಿಂದ ಬೇರೆಯಾಗಬೇಕು ಎಂದು ಇವರಿಬ್ಬರು ಬಯಸಿದ್ದರು. ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದ್ದರು. ಸಂಜಯ್ ಅವರೊಂದಿಗಿನ ಘರ್ಷಣೆ ಹೊಸದಲ್ಲ. ನಾನು ನನ್ನ ತಂದೆಗೆ ಮೂತ್ರಪಿಂಡ ದಾನ ಮಾಡಿದ್ದನ್ನು ಸಹ ಕೀಳಾಗಿ ಕಂಡಿದ್ದರು. ಲೋಕಸಭಾ ಟಿಕೆಟ್‌ಗಾಗಿ ಈ ದಾನ ಮಾಡಿದ್ದಾರೆಂದು ಹೇಳಿದ್ದರು. ಅಷ್ಟೇ ಅಲ್ಲ, ಸಹೋದರ ತೇಜ್ ಪ್ರತಾಪ್ ಯಾದವ್ ಅವರನ್ನು ಕುಟುಂಬ ಮತ್ತು ಪಕ್ಷ ಎರಡರಿಂದಲೂ ದೂರ ಮಾಡಲು ಸಂಜಯ್ ಅವರೇ ಕಾರಣ ಎಂದು ಸಂಜಯ್‌ ವಿರುದ್ಧ ರೋಹಿಣಿ ಆರೋಪ ಮಾಡಿದ್ದಾರೆ.

ಕಿಡಿಕಾರಿದ್ದ ರೋಹಿಣಿ
ರಾಜ್ಯಸಭಾ ಸಂಸದ ಸಂಜಯ್ ಯಾದವ್ ಹಾಗೂ ರಮೀಜ್ ನೆಮಾತ್ ಖಾನ್ ಅವರ ಹೇಳಿಕೆ ಮಾತುಗಳನ್ನು ಕೇಳಿದ್ದು, ಪಕ್ಷದ ಸೋಲಿಗೆ ಕಾರಣವಾಯಿತು ಎಂದು ರೋಹಿಣಿ ಆರೋಪಿಸಿದ್ದಾರೆ. ಯಾವುದೇ ಹೆಣ್ಣುಮಗಳು ಮದುವೆಯಾದ ಮೇಲೆ ತನ್ನ ಕುಟುಂಬ ಹಾಗೂ ಅತ್ತೆ ಮಾವನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮದುವೆಯಾದ ಮೇಲೂ ತವರು ಮನೆಯವರ ಸೇವೆಗೆ ನಿಂತರೆ ಇಲ್ಲಿ (ತವರು ಮನೆಯಲ್ಲಿ) ಬೆಲೆ ಇರೋದಿಲ್ಲ. ಹಾಗಾಗಿ, ನಾನು ರಾಜಕೀಯದಿಂದ ಹಾಗೂ ನನ್ನ ಕುಟುಂಬದಿಂದ ನಿರ್ಗಮಿಸುತ್ತಿದ್ದೇನೆ ಎಂದು ರೋಹಿಣಿ ಪೋಸ್ಟ್‌ ಮಾಡಿದ್ದರು.

ಅಕ್ಕನ ಮೇಲೆಯೇ ಚಪ್ಪಲಿ ಎಸೆದಿದ್ರಾ ತೇಜಸ್ವಿ?
ಚುನಾವಣೆಯಲ್ಲಿ ಆರ್‌ಜೆಡಿ ಹೀನಾಯ ಸೋಲಿನಿಂದ ತೇಜಸ್ವಿ ಯಾದವ್‌ ಕಂಗೆಟ್ಟಿದ್ದರು. ಸೋಲಿಗೆ ಅಕ್ಕ ರೋಹಿಣಿ ಆಚಾರ್ಯರೇ ಕಾರಣ ಎಂದು ಕಿಡಿಕಾರಿದ್ದರಂತೆ. ‘ಇದಕ್ಕೆಲ್ಲ ನೀನೇ ಕಾರಣ. ನಿನ್ನಂದಲೇ ಪಕ್ಷ ಹೀನಾಯವಾಗಿ ಸೋತಿತು’ ಎಂದು ರೋಹಿಣಿ ಮೇಲೆ ಕೋಪದಿಂದ ತೇಜಸ್ವಿ ಚಪ್ಪಲಿ ಎಸೆದಿದ್ದರೆಂದು ಮೂಲಗಳು ತಿಳಿಸಿವೆ.

ಕುಟುಂಬ ಕಲಹ ಬಗ್ಗೆ ಲಾಲು ಪ್ರಸಾದ್‌ ಹೇಳಿದ್ದೇನು?
ಇದು ನಮ್ಮ ಕುಟುಂಬದ ಆಂತರಿಕ ವಿಚಾರ. ಇದನ್ನು ಕುಟುಂಬದಲ್ಲೇ ಬಗೆಹರಿಸಿಕೊಳ್ಳುತ್ತೇವೆ. ಅದನ್ನು ನಿಭಾಯಿಸಲು ನಾನಿದ್ದೇನೆ ಎಂದು ಲಾಲು ಪ್ರಸಾದ್‌ ಯಾದವ್‌ ಪ್ರತಿಕ್ರಿಯಿಸಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ಲಾಲು ಪಾಟ್ನಾದಲ್ಲಿದ್ದರೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಸಕ್ರಿಯವಾಗಿ ಪ್ರಚಾರ ಮಾಡದಿರುವುದು ಬಹುಶಃ ಇದೇ ಮೊದಲು. ಅವರು ಮತ ಚಲಾಯಿಸಲು ಮಾತ್ರ ಹೊರಬಂದರು. ಹೆಚ್ಚಾಗಿ ಮೌನವಾಗಿದ್ದರು.

Share This Article