ಒಡಿಶಾ ಸಿಎಂ ಭೇಟಿಯಾದ ಹೆಚ್‌ಡಿಕೆ; ಉಕ್ಕು ಬೆಳವಣಿಗೆ ಕುರಿತು ಮಹತ್ವದ ಸಮಾಲೋಚನೆ

Public TV
3 Min Read

– 2030ರ ವೇಳೆಗೆ ಭಾರತದಲ್ಲಿ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ

ಭುವನೇಶ್ವರ್‌ (ರೂರ್ಕೆಲಾ): 2030ರ ವೇಳೆಗೆ ಭಾರತವು (India) ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಸಾಮರ್ಥ್ಯವನ್ನ ತಲುಪುತ್ತದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಘೋಷಿಸಿದರು.

ಇಲ್ಲಿನ ರೊರ್ಕೆಲಾ ಉಕ್ಕು ಸ್ಥಾವರಕ್ಕೆ (Rourkela Steel Plant) ಭೇಟಿಯ ನಂತರ ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಿಗದಿಪಡಿಸಿರುವ ಈ ಗುರಿಯನ್ನ ಮುಟ್ಟಲು ರೊರ್ಕೆಲಾ ಉಕ್ಕು ಸ್ಥಾವರದ (ಆರ್‌ಎಸ್‌ಪಿ) ವಿಸ್ತರಣೆ ಮತ್ತು ಉಕ್ಕು ಕ್ಷೇತ್ರದ ವ್ಯಾಪಕ ಅಭಿವೃದ್ಧಿಗೆ ಒಡಿಶಾದ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು ಎಂದು ತಿಳಿಸಿದರು.

ರಾಷ್ಟ್ರದ ಅಭಿವೃದ್ಧಿಯ ಬೆನ್ನೆಲುಬಾಗಿರುವ ಉಕ್ಕು ಕ್ಷೇತ್ರವನ್ನ ಮತ್ತಷ್ಟು ಬಲಪಡಿಸುವ ಮೋದಿ ಅವರ ದೃಷ್ಟಿಕೋನವನ್ನ ಸಾಕಾರಗೊಳಿಸಲು ಉಕ್ಕು ಉತ್ಪಾದನೆಯ ಮುಂಚೂಣಿ ರಾಜ್ಯಗಳಲ್ಲಿ ಒಂದಾದ ಒಡಿಶಾ ಸರ್ಕಾರವೂ ಕೇಂದ್ರಕ್ಕೆ ಎಲ್ಲಾ ಸಹಕಾರವನ್ನ ನೀಡಲಿದೆ. ಈ ಬಗ್ಗೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಜೊತೆ ನಡೆಸಿರುವ ಮಾತುಕತೆ ಫಲಪ್ರಧವಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರನ್ನ ಬುಧವಾರ ಭುವನೇಶ್ವರದಲ್ಲಿ ಭೇಟಿ ಭೇಟಿ ಮಾಡಿ, ರಾಜ್ಯದಲ್ಲಿನ ಉಕ್ಕು ಸಂಬಂಧಿತ ಅಭಿವೃದ್ಧಿ, ವಿಶೇಷವಾಗಿ ರೂರ್ಕೆಲಾ ಉಕ್ಕು ಸ್ಥಾವರದ ಕಾರ್ಯಾಚರಣೆಗಳು ಮತ್ತು ವಿಸ್ತರಣೆ ಯೋಜನೆಗಳ ಬಗ್ಗೆ ವಿವರವಾದ ಮಾತುಕತೆ, ಪರಿಶೀಲನೆ ನಡೆಸಿದರು. ಈ ಸಭೆಯಲ್ಲಿ ಒಡಿಶಾ ರಾಜ್ಯದವರೇ ಆದ ಕೇಂದ್ರದ ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಜುಯಲ್ ಓರಾಮ್ ಕೂಡ ಹಾಜರಿದ್ದರು.

ಈ ಮಾತುಕತೆಯನ್ನು ʻಅತ್ಯಂತ ಫಲಪ್ರದʼ ಎಂದು ಬಣ್ಣಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಪ್ರಮುಖ ಉಕ್ಕು ಮತ್ತು ಗಣಿಗಾರಿಕೆ ಕೇಂದ್ರವಾಗಿ ಒಡಿಶಾದ ಸ್ಥಾನವನ್ನು ಬಲಪಡಿಸುವ ಬಗ್ಗೆ ಚರ್ಚೆಗಳು ಕೇಂದ್ರೀಕೃತವಾಗಿದ್ದವು. ಉಕ್ಕು ಸಚಿವಾಲಯ ಮತ್ತು ಒಡಿಶಾ ಸರ್ಕಾರದ ಹಿರಿಯ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು. ರೂರ್ಕೆಲಾ ಉಕ್ಕು ಸ್ಥಾವರದ ಕಾರ್ಯನಿರ್ವಹಣೆ, ಸೌಲಭ್ಯದ ಯೋಜಿತ ವಿಸ್ತರಣೆ ಮತ್ತು ಒಡಿಶಾದಲ್ಲಿ ಉಕ್ಕು ಮತ್ತು ಗಣಿಗಾರಿಕೆ ಉತ್ಪಾದನೆಯನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ನಾವು ಚರ್ಚಿಸಿದ್ದೇವೆ ಎಂಬುದಾಗಿ ಮಾಹಿತಿ ನೀಡಿದರು.

ಶ್ರೀಮಂತ ಖನಿಜ ಸಂಪನ್ಮೂಲಗಳು ಮತ್ತು ಬಲವಾದ ಕೈಗಾರಿಕಾ ನೆಲೆಯನ್ನ ಹೊಂದಿರುವ ಒಡಿಶಾ ರಾಜ್ಯವು ಭಾರತದ ಉಕ್ಕಿನ ಬೆಳವಣಿಗೆಯ ಕಾರ್ಯತಂತ್ರಕ್ಕೆ ಅತ್ಯಗತ್ಯ ಆಧಾರಸ್ತಂಭವಾಗಿ ಉಳಿದಿದೆ ಎಂದು ಕೇಂದ್ರದ ಉಕ್ಕು ಸಚಿವರು ಒತ್ತಿ ಹೇಳಿದರು. ಅಲ್ಲದೇ ರೂರ್ಕೆಲಾ ಸ್ಥಾವರದ ವಿಸ್ತರಣೆ ಮತ್ತು ಉಕ್ಕಿನ ಕ್ಷೇತ್ರದ ವ್ಯಾಪಕ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು. ʻ2030ರ ವೇಳೆಗೆ 300 ಮಿಲಿಯನ್ ಟನ್ ಉಕ್ಕಿನ ಸಾಮರ್ಥ್ಯವನ್ನ ತಲುಪುವ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನ ಸಾಧಿಸಲು ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದರುʼ ಎಂದು ಸಚಿವರು ತಿಳಿಸಿದರು.

ರೂರ್ಕೆಲಾ ಉಕ್ಕು ಸ್ಥಾವರದ ಉತ್ಪಾದನಾ ಪ್ರಮಾಣವನ್ನ ದ್ವಿಗುಣಗೊಳಿಸಲು ವಿಸ್ತರಣಾ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಾಗಿದೆ. ಈಗಾಗಲೇ 9,000 ಕೋಟಿ ಮೊತ್ತದ ಯೋಜನೆಗಳು ಅನುಷ್ಠಾನಗೊಂಡು ಕಾರ್ಯಾರಂಭ ಮಾಡಿವೆ. ಜೊತೆಗೆ 9,513 ಕೋಟಿ ಮೊತ್ತದ ಯೋಜನೆಗಳು ಕಾರ್ಯಗತವಾಗಲು ತಯಾರಿವೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಒಟ್ಟು 14,513 ಕೋಟಿ ಮೊತ್ತದ ಬೃಹತ್‌ ಯೋಜನೆಗಳು ಕಾರ್ಯಗತವಾಗುತ್ತಿದ್ದು, ಉಕ್ಕು ಕ್ಷೇತ್ರದಲ್ಲಿ ರೊರ್ಕೆಲಾ ಸ್ಥಾವರವು ಪ್ರಮುಖ ಪಾಲುದಾರನಾಗಿ ಹೊರಹೊಮ್ಮಲಿದೆ ಎಂದು ಸಚಿವರು ಮಾಹಿತಿ ನೀಡಿದರು. ಕಚ್ಚಾ ವಸ್ತುಗಳ ಸಕಾರಾತ್ಮಕ ಲಭ್ಯತೆಯ ಬಗ್ಗೆ ಒತ್ತಿ ಹೇಳಿದ ಸಚಿವರು, ಒಡಿಶಾ ಗಣಿ ಸಮೂಹವು ಈ ವರ್ಷ ಅದಿರು ಉತ್ಪಾದನೆಯನ್ನು 5% ಕ್ಕಿಂತ ಹೆಚ್ಚು ಹೆಚ್ಚಿಸಿದೆ ಮತ್ತು 2025–26ರ ಹಣಕಾಸು ವರ್ಷದಲ್ಲಿ ಸುಮಾರು 15 ದಶಲಕ್ಷ ಟನ್‌ ದಾಟುವ ನಿರೀಕ್ಷೆ ಇದೆ. ಇದು ಕಾರ್ಖಾನೆಗೆ ಬಲವಾದ ಕಚ್ಚಾವಸ್ತುಗಳ ಭದ್ರತೆಯನ್ನ ಖಚಿತಪಡಿಸುತ್ತದೆ ಎಂದರು.

ಕಾರ್ಖಾನೆಯ ವಿಸ್ತರಣಾ ಕಾರ್ಯಸೂಚಿಯನ್ನು ವಿವರಿಸಿದ ಅವರು, ʻನಾವು ಆರ್‌ಎಸ್‌ಪಿ ಉತ್ಪಾದನಾ ಸಾಮರ್ಥ್ಯವನ್ನು ಸುಮಾರು 30,000 ರೂ. ಕೋಟಿಗೆ ದ್ವಿಗುಣಗೊಳಿಸುತ್ತೇವೆ. ಸುಮಾರು 9,000 ಕೋಟಿ ರೂ. ವೆಚ್ಚದಲ್ಲಿ ಸ್ಥಾವರದ ಆಧುನೀಕರಣವನ್ನ ಸಹ ಕೈಗೊಳ್ಳಲಾಗಿದೆ. ಕಾರ್ಖಾನೆಯು ಜಾಗತಿಕವಾಗಿ, ಸ್ಪರ್ಧಾತ್ಮಕವಾಗಿ ಮತ್ತು ಭವಿಷ್ಯಕ್ಕೆ ತಕ್ಕಂತೆ ಸಿದ್ಧವಾಗಿರುವುದನ್ನ ಖಚಿತಪಡಿಸಿಕೊಂಡಿದ್ದೇವೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

Share This Article