ಆಸ್ಟ್ರೇಲಿಯಾದಲ್ಲಿ ಅಪಘಾತ – ಬೆಂಗಳೂರು ಮೂಲದ ಟೆಕ್ಕಿ, 8 ತಿಂಗಳ ಗರ್ಭಿಣಿ ಸಾವು

Public TV
2 Min Read

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ (Sydney) ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ (Australia) ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಮೃತಪಟ್ಟಿದ್ದಾರೆ.

ಸಮನ್ವಿತಾ ಧಾರೇಶ್ವರ್‌ (33) ಮೃತ ಮಹಿಳೆ. ನ.8 ರಂದು ಈ ಘಟನೆ ನಡೆದಿದ್ದು ಪತಿ ಮತ್ತು 3 ವರ್ಷದ ಮಗನೊಂದಿಗೆ ಜರ್ಜ್ ಸೇಂಟ್‌ ಇನ ಹಾರ್ನ್‌ಸ್ಬಿ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಕಾರೊಂದು ಗುದ್ದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಅವರು ಮೃತಪಟ್ಟಿದ್ದಾರೆ.

ಶುಕ್ರವಾರ ರಾತ್ರಿ 8 ಗಂಟೆಗೆ ಈ ಕುಟುಂಬ ರಸ್ತೆ ದಾಟುತ್ತಿತ್ತು. ದಾರಿಯಲ್ಲಿ ಬರುತ್ತಿದ್ದ ಕಿಯಾ ಕಾರ್ನಿವಲ್ ಚಾಲಕ ಕಾರನ್ನು ನಿಲ್ಲಿಸಿ ಕುಟುಂಬಕ್ಕೆ ದಾರಿ ಮಾಡಿಕೊಟ್ಟಿದ್ದ. ಆದರೆ ಈ ಕಾರಿಗೆ ಹಿಂದಿನಿಂದ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ, ಕಿಯಾ ಕಾರು ಸಮನ್ವಿತಾ (Samanvitha Dhareshwar) ಅವರಿಗೆ ಡಿಕ್ಕಿ ಹೊಡೆದಿದೆ. ಸಮನ್ವಿತಾ ಅವರನ್ನು ಕೂಡಲೇ ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರಿಂದ ಅವರು ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ.

ಸಮನ್ವಿತಾ ಅವರು ಒಂದು ವಾರದಲ್ಲಿ ಹೆರಿಗೆಯಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಅಪಘಾತದ ತೀವ್ರತೆಗೆ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಿಎಂಡಬ್ಲ್ಯೂ ಓಡಿಸುತ್ತಿದ್ದ 19 ವರ್ಷದ ಯುವಕ ಮತ್ತು ಕಿಯಾ ಚಾಲನೆ ಮಾಡುತ್ತಿದ್ದ 48 ವರ್ಷದ ವ್ಯಕ್ತಿಯೂ ಗಾಯಗೊಂಡಿದ್ದಾರೆ. ಬಿಎಂಡಬ್ಲ್ಯೂ ಚಾಲಕ ಆ್ಯರಾನ್‌ ಪಾಪಾಗ್ಲೂನನ್ನು  ಪೊಲೀಸರು ಬಂಧಿಸಿದ್ದಾರೆ. ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದ ಆರೋಪದ ಅಡಿ ಕೇಸ್‌ ದಾಖಲಾಗಿದೆ. ಅಪಘಾತದ ಭೀಕರತೆಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ನ್ಯಾಯಾಲಯ ಚಾಲಕನಿಗೆ ಜಾಮೀನು ನೀಡಲು ನಿರಾಕರಿಸಿದೆ. ಇದನ್ನೂ ಓದಿ: ಕಾಲ್ತುಳಿತದಿಂದ 11 ಮಂದಿ ಸಾವಿಗೆ ಆರ್‌ಸಿಬಿಯೇ ನೇರ ಹೊಣೆ: ಚಾರ್ಜ್‌ಶೀಟ್‌ ಸಲ್ಲಿಕೆಗೆ ಸಿಐಡಿ ತಯಾರಿ

ಸಮನ್ವಿತಾ ಅವರ ಅತ್ತೆ ಆಸ್ಟ್ರೇಲಿಯಾದಲ್ಲಿದ್ದರೆ,  ಪೋಷಕರು ಈಗ ಮಗಳನ್ನು ನೋಡಲು ಸಿಡ್ನಿಗೆ ತೆರಳಿದ್ದಾರೆ. ಲಿಂಕ್‌ಡಿನ್‌ ಪ್ರೊಫೈಲ್‌ನಲ್ಲಿ ಅಲಸ್ಕೊ ಯೂನಿಫಾರ್ಮ್ಸ್‌ ಎಂಬ ಕಂಪನಿಯಲ್ಲಿ ಐಟಿ ಸಿಸ್ಟಂ ಅನಲಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದೇನೆ ಸಮನ್ವಿತಾ ಬರೆದುಕೊಂಡಿದ್ದಾರೆ.  ಸಮನ್ವಿತಾ ಬೆಂಗಳೂರಿನ ಆಕ್ಸ್‌ಫರ್ಡ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನಲ್ಲಿ 2010 ರಿಂದ 2014 ರವರೆಗೆ ಎಂಜಿನಿಯರಿಂಗ್‌ ಪದವಿ ಓದಿದ್ದರು.

ಕುಟುಂಬ ಇತ್ತೀಚೆಗೆ ಗ್ರಂಥಮ್ ಫಾರ್ಮ್‌ನಲ್ಲಿ ಭೂಮಿಯನ್ನು ಖರೀದಿಸಿತ್ತು ಮತ್ತು ಎರಡು ಅಂತಸ್ತಿನ ಮನೆ ನಿರ್ಮಿಸಲು ಅನುಮೋದನೆಗಳಿಗಾಗಿ ಅರ್ಜಿ ಸಲ್ಲಿಸಿತ್ತು ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ. ನೆರೆಹೊರೆಯವರು ಪ್ರತಿಕ್ರಿಯಿಸಿ, ಸಮನ್ವಿತಾ ಅವರು ತುಂಬಾ ಬೆರೆಯುವ, ಶಾಂತ ಮತ್ತು ಸಭ್ಯ ವ್ಯಕ್ತಿಯಾಗಿದ್ದರು. ಅಪಘಾತ ಸಂಭವಿಸುವ ಕೇವಲ ಎರಡು ಗಂಟೆಗಳ ಮೊದಲು ಧಾರೇಶ್ವರ್ ಅವರೊಂದಿಗೆ ಮಾತನಾಡಿದ್ದೆ ಎಂದು ಹೇಳಿದ್ದಾರೆ.

Share This Article