– 60-70ರ ದಶಕದಲ್ಲಿದ್ದಾಗ ಸಲಿಂಗಕಾಮ ಇತ್ತು
– ಕಲಾವಿದರ ನೋವನ್ನು ಕಂಡು ಹೇಳಿಕೆ ನೀಡಿದ್ದೆ
ಬೆಂಗಳೂರು: ಯಕ್ಷಗಾನ ಕಲಾವಿದರಿಗೆ ನಾನು ಅವಮಾನ ಮಾಡಿಲ್ಲ. ನನ್ನ ಹೇಳಿಕೆಯಿಂದ ಬೇಸರವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ (Purushottama Bilimale) ಹೇಳಿದ್ದಾರೆ.
ತನ್ನ ಹೇಳಿಕೆ ವಿವಾದವಾದ ಬೆನ್ನಲ್ಲೇ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಈಗ ಸಲಿಂಗಕಾಮ (Homosexuality) ಇಲ್ಲ. 60-70 ರ ದಶಕದಲ್ಲಿದ್ದಾಗ ಇದು ಯಕ್ಷಗಾನದಲ್ಲಿ ಇತ್ತು. ನಾನು ವಿದ್ಯಾರ್ಥಿಯಾಗಿದ್ದಾಗ ನೋಡಿದ್ದನ್ನು ಹೇಳಿದ್ದೇನೆ. ಯಾರನ್ನೂ ನೋಯಿಸುವ ಉದ್ದೇಶವನ್ನು ಈ ಹೇಳಿಕೆಯನ್ನು ನಾನು ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಾನು ಕಳೆದ 30 ವರ್ಷಗಳಿಂದ ಯಕ್ಷಗಾನವನ್ನು ಮಾಡುತ್ತಾ ಬಂದಿದ್ದೇನೆ. ಈಗಲೂ ತಾಳಮದ್ದಳೆ ಅರ್ಥವನ್ನು ಹೇಳುತ್ತಿದ್ದೇನೆ. ನನಗೆ ಯಕ್ಷಗಾನದ ಬಗ್ಗೆ ಬಹಳಷ್ಟು ಗೌರವವಿದೆ ಎಂದರು.
ಹಿಂದೆ ರಾತ್ರಿಯಿಡಿ ಯಕ್ಷಗಾನ ನಡೆಯುತ್ತಿತ್ತು. ಒಮ್ಮೆ ಮೇಳಕ್ಕೆ ಹೊರಟರೆ 6 ತಿಂಗಳ ನಂತರ ಕಲಾವಿದರು ಮನೆಗೆ ಬರುತ್ತಿದ್ದರು. ಸ್ತ್ರೀ ವೇಷಧಾರಿಗಳಿಗೆ ಆಗುತ್ತಿದ್ದ ನೋವನ್ನು ಹೇಳಿದ್ದೇನೆ. ಈಗ ಯಕ್ಷಗಾನ ಸಂಜೆ ಆರಂಭವಾಗಿ ರಾತ್ರಿ ಮುಕ್ತಾಯವಾಗುತ್ತದೆ. ಕಾಲಮಿತಿಯಲ್ಲಿ ಯಕ್ಷಗಾನ ಮುಕ್ತಾಯವಾಗುತ್ತಿರುವ ಕಾರಣ ಕಲಾವಿದರು ರಾತ್ರಿಯೇ ಮನೆಗೆ ಬರುತ್ತಿದ್ದಾರೆ ಎಂದು ವಿವರಿಸಿದರು.
ಮೈಸೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುವಾಗ ನಮ್ಮ ಊರಿನ ಯಕ್ಷಗಾನದ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಹಿಂದೆ ಯಕ್ಷಗಾನ ನಡೆಯುತ್ತಿದ್ದಾಗ ಆರು ತಿಂಗಳು ಮನೆಯಲ್ಲಿ ಇರಲು ಕಲಾವಿದರಿಗೆ ಸಾಧ್ಯವಾಗುತ್ತಿರಲಿಲ್ಲ. ಮನೆಯವರ ಸಂಪರ್ಕಕ್ಕೆ ಅವರು ಬರುತ್ತಿರಲಿಲ್ಲ. ಅವರಿಗೆ ನಾನಾ ಸಮಸ್ಯೆಯ ಜೊತೆ ದೈಹಿಕ ಕಾಮನೆಗಳು ಇರುತ್ತದೆ ಎಂದು ಹೇಳಿ ಕಲಾವಿದರ ಆಂತರಿಕ ಬಿಕ್ಕಟ್ಟಿನ ಬಗ್ಗೆ ತಿಳಿಸಿದ್ದೆ ಎಂದು ಹೇಳಿದರು.
ಬಿಳಿಮಲೆ ಹೇಳಿದ್ದೇನು?
ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ಮಂಗಳವಾರ ‘ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು’ ಹಾಗೂ ‘ನಾವು ಕೂಗುವ ಕೂಗು’ ಕೃತಿಗಳನ್ನು ಬಿಡುಗಡೆ ಮಾಡಿ ಪುರುಷೋತ್ತಮ ಬಿಳಿಮಲೆ ಮಾತನಾಡಿದ್ದರು.
ಈ ವೇಳೆ, ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು ಇರುತ್ತಿದ್ದರು. ಅಲ್ಲಿ ಅಂತಹ ಅನಿವಾರ್ಯತೆ ಇತ್ತು. ಯಕ್ಷಗಾನದೊಳಗೆ ಎಷ್ಟೋ ಬಾರಿ ಹೋಮೋಸೆಕ್ಸ್ ಬೆಳೆಯುತ್ತಿದ್ದವು. ಸಲಿಂಗಕಾಮವನ್ನು ಸ್ತ್ರೀವೇಷದ ಕಲಾವಿದ ನಿರಾಕರಿಸುತ್ತಿದ್ದರೆ, ಭಾಗವತರು ಮರು ದಿವಸ ಅವರಿಗೆ ಪದ್ಯವನ್ನೇ ನೀಡುತ್ತಿರಲಿಲ್ಲ. ಮುಂದಿನ ವರ್ಷ ಆ ಕಲಾವಿದರಿಗೆ ಮೇಳ ಸಿಗುತ್ತಿರಲಿಲ್ಲ. ವೇದಿಕೆಯ ಮೇಲೆ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲಾಗುತ್ತಿತ್ತು. ಮೇಳದಲ್ಲಿ ಅವಕಾಶ ಇಲ್ಲದೆ ಹೋದರೆ ಬದುಕೇ ಇಲ್ಲವೆಂಬ ಒತ್ತಡದಲ್ಲಿ ಕಲಾವಿದರು ಇರುತ್ತಿದ್ದರು ಎಂದಿದ್ದರು.
