– ಎಲ್ಲದರಲ್ಲೂ ಅಂಬೇಡ್ಕರ್ ಹೆಸರಿನ ಲೇಬಲ್ ಬೇಡ : ಶರತ್ ಅನಂತಮೂರ್ತಿ
ಶಿವಮೊಗ್ಗ: ಜೀವನ ಪಥವನ್ನು ದರ್ಶನ ಮಾಡಿಸುವುದೇ ಭಗವದ್ಗೀತೆ ಎಂದು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಬಣ್ಣಿಸಿದರು.
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ (Kuvempu University) ಆಯೋಜಿಸಿದ್ದ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ಕುರಿತ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ವೇಳೆ ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ಧ್ಯಾನಯೋಗಗಳ ದಾರಿಗಳ ಮೂಲಕ ಮನುಷ್ಯನ ಜೀವನಕ್ಕೆ ಉತ್ತಮ ಗ್ರಾಸವನ್ನು ಒದಗಿಸುವ ಶ್ರೇಷ್ಠಗ್ರಂಥ ಭಗವದ್ಗೀತೆಯಾಗಿದೆ. ಸುಖ-ದುಃಖ, ಜಯ-ಅಪಜಯಗಳನ್ನು ಸಮಚಿತ್ತತೆಯಿಂದ ನೋಡುವುದೇ ಭಗವದ್ಗೀತೆಯ ಸಾರವಾಗಿದೆ. ನಾವು ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿದ್ದೇವೆಯೇ ಎಂಬ ಪ್ರಶ್ನೆಗಳಿಗೆಲ್ಲಾ ಭಗವದ್ಗೀತೆ ಉತ್ತರ ಕೊಡುವ ಗ್ರಂಥವಾಗಿದೆ ಎಂದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅರವಿಂದೋ ಘೋಷ್, ಸ್ವಾಮಿ ವಿವೇಕಾನಂದ, ಸುಭಾಶ್‌ಚಂದ್ರ ಬೋಸ್, ಮಹಾತ್ಮ ಗಾಂಧೀಜಿ ಮೊದಲಾದವರ ಮೇಲೆ ಭಗವದ್ಗೀತೆ ಪ್ರಭಾವ ಬೀರಿದ್ದು ಅವರಿಗೆ ಆತ್ಮಶಕ್ತಿಯನ್ನು ನೀಡಿತ್ತು. ಶ್ರೇಷ್ಠ ವಿಜ್ಞಾನಿ ಐನ್‌ಸ್ಟೀನ್ ಕೂಡ ಭಗವದ್ಗೀತೆಯಿಂದ ಸಮಾಜದ ಮೇಲಾಗುವ ಪರಿಣಾಮಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಮಹಾತ್ಮ ಗಾಂಧೀಜಿಯವರು ಭಗವದ್ಗೀತೆಯನ್ನು ಅಪಾರವಾಗಿ ಗೌರವಿಸುತ್ತಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ (Sharath Ananthamurthy) ಮಾತನಾಡಿ, ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ವಿಶ್ವವಿದ್ಯಾಲಯ ಅಂದರೆ ಸಂವಿಧಾನದಡಿಯಲ್ಲಿ ಸ್ಥಾಪಿತವಾಗಿರುವ ಜಾತ್ಯತೀತ ಸಂಸ್ಥೆ. ವಿಶ್ಲೇಷಣಾತ್ಮಕ ನಿಟ್ಟಿನಲ್ಲಿ ನಡೆಯುವ ಚರ್ಚೆಯಾಗಬೇಕು. ವಿಷಯಗಳಿಗೆ ಗಾಂಭೀರ್ಯತೆ ಹಾಗೂ ಚರ್ಚೆಗೆ ಅವಕಾಶ ಇರಬೇಕು. ಸೆನ್ಸಾರ್‌ಶಿಪ್‌ಗೆ ಅವಕಾಶ ಇರಕೂಡದು. ಭಗವದ್ಗೀತೆ ವಿರೋಧಿಸುವ ಹೋರಾಟಗಾರರು ದಿಟ್ಟತನ ತೋರಿಸುತ್ತಿಲ್ಲ. ಹೋರಾಟದಲ್ಲಿ ಗಟ್ಟಿತನ ತೋರಿಸಬೇಕು ಇಲ್ಲ ಎಂದರೆ ಅದು ಅಪಾಯಕಾರಿಯಾಗುತ್ತದೆ. ಎಲ್ಲದರಲ್ಲೂ ಅಂಬೇಡ್ಕರ್‌ರವರ ಹೆಸರಿನ ಲೇಬಲ್ ಮಾಡಿಕೊಳ್ಳಬೇಡಿ.
