ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Actress Ramya) ಸಿನಿಮಾದಿಂದ ದೂರಾಗಿ ಹಲವು ವರ್ಷಗಳೇ ಕಳೆದಿವೆ. ಆಗಾಗ್ಗೆ ಕಮ್‌ಬ್ಯಾಕ್ ಆಗುವ ಸುದ್ದಿ ಕೊಡ್ತಿರ್ತಾರೆ. ಆದರೆ ಇದುವರೆಗೂ ಕಮ್‌ಬ್ಯಾಕ್ ಆಗಿಲ್ಲ. ಅದರರ್ಥ ರಮ್ಯಾಗೆ ಯಾವುದೇ ಸಿನಿಮಾ ಕಥೆ ಇಷ್ಟವಾಗಿಲ್ಲ ಅನ್ನೋದು. ಆದರೀಗ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿರುವ ಐತಿಹಾಸಿಕ ಕಥೆಯಲ್ಲಿ ಅಭಿಯಯಿಸಲು ಮುಂದಾಗಿದ್ದಾರೆ ಎನ್ನಲಾಗ್ತಿದೆ.
ಹೌದು. `ರಾಣಿ ಚೆನ್ನಭೈರಾದೇವಿ’ ಸಿನಿಮಾ (Rani Chennabhairadevi Film) ಚಿತ್ರಕಥೆ ಸಿದ್ಧಪಡಿಸುತ್ತಿರುವ ರಾಜೇಂದ್ರ ಸಿಂಗ್ ಬಾಬು (Rajendra Singh Babu), ಲೀಡ್ ಪಾತ್ರಕ್ಕೆ ರಮ್ಯಾರನ್ನ ಸಂಪರ್ಕಿಸುವ ಸುಳಿವು ನೀಡಿದ್ದಾರೆ.
ಅಂದಹಾಗೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರಿಗೆ ʻರಾಣಿ ಚೆನ್ನಭೈರಾದೇವಿʼ ಪುಸ್ತಕವು ಸಿನಿಮಾ ಆಗಬೇಕು ಎಂಬ ಆಸೆ ಇದೆಯಂತೆ. ಈ ವಿಚಾರವನ್ನ ಹಂಚಿಕೊಂಡ ರಾಜೇಂದ್ರ ಸಿಂಗ್ ಬಾಬು ಹೆಗ್ಗಡೆಯವರು ಪುಸ್ತಕ ಕೊಟ್ಟು ಸಿನಿಮಾ ಮಾಡುವಂತೆ ಸೂಚಿಸಿದ್ದಾರೆ ಎಂದಿದ್ದಾರೆ. ಅದರ ಪ್ರಕಾರ ಸಿನಿಮಾ ಕಥೆಯನ್ನ ಬಾಬು ಅವರು ಸಿದ್ಧಪಡಿಸುತ್ತಿದ್ದು ರಮ್ಯಾರೇ ರಾಣಿ ಚೆನ್ನಭೈರಾದೇವಿ ಪಾತ್ರ ಮಾಡಲು ಸಿದ್ಧತೆಯಲ್ಲಿರೋದಾಗಿ ʻರಕ್ತಕಾಶ್ಮೀರʼ ಚಿತ್ರದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ʻಬಾಹುಬಲಿʼ ಥರದ ಸಿನಿಮಾಗಳನ್ನ ಯಾಕೆ ನಾಯಕ ಪ್ರಧಾನ ಕಥೆಯನ್ನ ಮಾತ್ರ ಇಟ್ಟಕೊಂಡು ಮಾಡ್ಬೇಕು? ನಾನು ನಾಯಕಿ ಪ್ರಧಾನ ಮಾಡ್ತೀನಿ, ರಮ್ಯಾರನ್ನ ಶೀಘ್ರದಲ್ಲೇ ಭೇಟಿ ಮಾಡಿ ಕಥೆ ಹೇಳ್ತೀನಿʼ ಎಂದಿದ್ದಾರೆ.
ಅಲ್ಲಿಗೆ ಬಹುಶಃ ರಮ್ಯಾ ಬಯಸಿದಂತೆ ನಾಯಕಿ ಪ್ರಧಾನ ಕಥೆಯ ಚಿತ್ರದಿಂದ ಬಣ್ಣಕ್ಕೆ ಮತ್ತೆ ಮರಳುವ ಸಾಧ್ಯತೆ ದಟ್ಟವಾಗಿದೆ. ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕನಸಿನಂತೆ ರಮ್ಯಾ ಒಪ್ಪಿಕೊಳ್ತಾರಾ? ರಾಣಿ ಚೆನ್ನಭೈರಾದೇವಿ ಆಗ್ತಾರಾ? ಎಂಬುದು ಇನ್ನಷ್ಟೇ ತಿಳಿಯಬೇಕಿದೆ.


