ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯೋವರೆಗೆ SIR ಪ್ರಕ್ರಿಯೆ ಮುಂದೂಡಲು ಸುಪ್ರೀಂಗೆ ಕೇರಳ ಸರ್ಕಾರ ಮನವಿ

Public TV
2 Min Read

ತಿರುವನಂತಪುರಂ: ಕೇರಳದಲ್ಲಿ ಭಾರತೀಯ ಚುನಾವಣಾ ಆಯೋಗ (IEC) ಕೈಗೊಳ್ಳಲು ಹೊರಟಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನ ಮುಂದೂಡುವಂತೆ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ಮನವಿ ಮಾಡಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುವವರೆಗೆ ಎಸ್‌ಐಆರ್‌ (ಸರ್‌) ಪ್ರಕ್ರಿಯೆ ಮುಂದೂಡಬೇಕೆಂದು ಕೇರಳ ಸರ್ಕಾರ (Kerala Government) ಕೋರಿದೆ. ರಾಜ್ಯದಲ್ಲಿ ಡಿಸೆಂಬರ್‌ನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದೆ. ಅದೇ ಹೊತ್ತಿಗೆ ಎಸ್‌ಐಆರ್‌ ಪ್ರಕ್ರಿಯೆ ಆರಂಭಿಸಿದರೆ ಭದ್ರತಾ ವ್ಯವಸ್ಥೆ ಮೇಲೆ ಒತ್ತಡ ಉಂಟಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಮೋಸ್ಟ್‌ ವಾಂಟೆಡ್‌ ನಕ್ಸಲ್‌ ಕಮಾಂಡರ್‌ ಮದ್ವಿ ಹಿದ್ಮಾ ಎನ್‌ಕೌಂಟರ್‌!

ರಾಜ್ಯ ವಿಧಾನಸಭೆ ಚುನಾವಣೆ ನಡೆಯುವುದು 2026ರ ಮೇ ತಿಂಗಳಿನಲ್ಲಿ. ಆದ್ದರಿಂದ ಎಸ್‌ಐಆರ್‌ ತುರ್ತಾಗಿ ನಡೆಸುವ ಅಗತ್ಯವಿಲ್ಲ. ತಾನು ಇಡೀ ಎಸ್‌ಐಆರ್‌ ಪ್ರಕ್ರಿಯೆಯನ್ನ ಪ್ರತ್ಯೇಕವಾಗಿ ಪ್ರಶ್ನಿಸಬಹುದಾದರೂ ಈ ಅರ್ಜಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಮುಂದೂಡುವಂತೆ ಮಾತ್ರ ಕೇಳುತ್ತಿದೆ ಎಂದು ಕೇರಳ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಆತ್ಮಾಹುತಿ ಬಾಂಬ್ ದಾಳಿಯೆಂಬುದು ಹುತಾತ್ಮರ ಕಾರ್ಯಾಚರಣೆ – ಬಾಂಬರ್ ಉಮರ್

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ 68,000 ಪೊಲೀಸ್ ಮತ್ತಿತರ ಭದ್ರತಾ ಸಿಬ್ಬಂದಿ ಜೊತೆಗೆ, ಸರ್ಕಾರಿ ಮತ್ತು ಅರೆ ಸರ್ಕಾರಿ ವಲಯದಿಂದ 1.76 ಲಕ್ಷ ಸಿಬ್ಬಂದಿ ಅಗತ್ಯವಿದೆ. ಎಸ್‌ಐಆರ್‌ ನಡೆಸಲು ಸುಮಾರು 25,668 ಹೆಚ್ಚುವರಿ ಸಿಬ್ಬಂದಿ ಅಗತ್ಯವಿದೆ. ಇದು ಆಡಳಿತ ವ್ಯವಸ್ಥೆ ಮೇಲೆ ಇಡಿಯಾಗಿ ಒತ್ತಡ ಉಂಟು ಮಾಡಿ ದಿನನಿತ್ಯದ ಆಡಳಿತ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಒಂದೇ ತರಬೇತಿ ಪಡೆದ ಸಿಬ್ಬಂದಿಯನ್ನ ಎರಡೂ ಕಾರ್ಯಗಳಿಗೆ ನಿಯೋಜಿಸಲಾಗದು ಎಂದು ಅರ್ಜಿಯಲ್ಲಿ ದೂರಿದೆ.

ಎರಡೂ ಕಾರ್ಯಗಳಿಗೆ ಭಾರೀ ಸಂಖ್ಯೆಯಲ್ಲಿ ನಾಗರಿಕ ಮತ್ತು ಭದ್ರತಾ ಸಿಬ್ಬಂದಿ ಸೇವೆ ಅಗತ್ಯವಾಗಿರುತ್ತದೆ. ಸಂವಿಧಾನಬದ್ಧವಾಗಿ ನಡೆಯಬೇಕಾದ ಚುನಾವಣೆ ಕಾರ್ಯಗಳ ನಡುವೆ ಎಸ್‌ಐಆರ್‌ ಪ್ರಕ್ರಿಯೆಯನ್ನ ತರಾತುರಿಯಲ್ಲಿ ಮತ್ತು ಅಜಾಗರೂಕತೆಯಿಂದ ಪೂರ್ಣಗೊಳಿಸುವುದು ಮತದಾರರ ಪಟ್ಟಿ ಪರಿಷ್ಕರಣೆಯ ಗುಣಮಟ್ಟಕ್ಕೆ ಧಕ್ಕೆ ತರುತ್ತದೆ. ಅಲ್ಲದೇ ಪ್ರಜಾಪ್ರಭುತ್ವದ ಆಧಾರ ಸ್ತಂಭವಾದ ಮತದಾರರು ತಮ್ಮ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಾದ ಮತದಾನದ ಹಕ್ಕನ್ನು ಸದುಪಯೋಗಪಡಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಿದೆ.

ಎಸ್‌ಐಆರ್‌ ಪೂರ್ಣಗೊಳಿಸಲು ಈಗ ಯಾವುದೇ ತುರ್ತು ಇಲ್ಲ. ಅಲ್ಲದೇ ರಾಜ್ಯದಲ್ಲಿ ಸಮಗ್ರ ಪರಿಷ್ಕರಣೆಗೆ ಭಾರತೀಯ ಚುನಾವಣಾ ಆಯೋಗ ವಿಶೇಷ ಕಾರಣಗಳನ್ನ ನೀಡಿಲ್ಲ ಎಂದು ಕೇರಳ ವಾದಿಸಿದೆ. ಇದನ್ನೂ ಓದಿ: ದೆಹಲಿ ಬಾಂಬ್‌ ಸ್ಫೋಟ – ಅಲ್-ಫಲಾಹ್ ವಿವಿ ಸೇರಿದಂತೆ 25 ಕಡೆ ಇಡಿ ದಾಳಿ

ರಾಜ್ಯದಲ್ಲಿ 2025ರ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಡಿಸೆಂಬರ್ 21ರ ಒಳಗೆ ಪೂರ್ಣಗೊಳಿಸಲು ಸಂವಿಧಾನ ಹಾಗೂ ಕಾನೂನುಬದ್ಧ ಆದೇಶವಿದ್ದರೂ, ಚುನಾವಣೆಯ ಜೊತೆಯಲ್ಲೇ ಎಸ್‌ಐಆರ್‌ ನಡೆಸಬೇಕು ಎನ್ನುವುದಕ್ಕೆ ಯಾವುದೇ ಕಾನೂನುಬದ್ಧ ಒತ್ತಾಯ ಇಲ್ಲ ಅಥವಾ ತುರ್ತು ಅಗತ್ಯವೂ ಇಲ್ಲ. ರಾಜ್ಯದಲ್ಲಿ ಎಸ್‌ಐಆರ್‌ ನಡೆಸಲು ಇರುವ ವಿಶೇಷ ಅಗತ್ಯತೆಗಳನ್ನ ಚುನಾವಣಾ ಆಯೋಗ ವಿವರಿಸಿಲ್ಲ. ಹೀಗಾಗಿ ಚುನಾವಣೆ ಮುಗಿಯುವವರೆಗೆ ಎಸ್‌ಐಆರ್‌ ಮುಂದೂಡಿದರೆ ಯಾವುದೇ ಪಕ್ಷಕಾರರಿಗೆ ಹಾನಿಯಾಗುವುದಿಲ್ಲ ಎಂದು ವಕೀಲ ಸಿ ಕೆ ಶಶಿ ಅವರ ಮೂಲಕ ಸಲ್ಲಿಸಿರುವ ಅರ್ಜಿ ತಿಳಿಸಿದೆ.

Share This Article