ಮಂಡ್ಯ: ಜಿಲ್ಲೆಯ ಮಳವಳ್ಳಿ (Malavalli) ತಾಲೂಕಿನ ಶಿವನಸಮುದ್ರದ ಬಳಿಯ ನಾಲೆಗೆ ಎರಡು ದಿನಗಳ ಹಿಂದೆ ಬಿದ್ದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ (Forest Dept) ಯಶಸ್ವಿಯಾಗಿ ಮೇಲಕ್ಕೆತ್ತಿದೆ.
ಕಳೆದ ಎರಡು ದಿನಗಳ ಹಿಂದೆ ಶಿವನಸಮುದ್ರ ಬಳಿಯ ಖಾಸಗಿ ವಿದ್ಯುತ್ ಉತ್ಪಾದನಾ ಘಟಕದ ಬಳಿ ಆನೆ ಓಡಾಡುವುದನ್ನು ಅಲ್ಲಿನ ಅಧಿಕಾರಿಗಳು ಗಮನಿಸಿದ್ದರು. ಶನಿವಾರ (ನ.15) ರಾತ್ರಿ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಪೂರೈಸುವ ಸುಮಾರು 20 ಅಡಿ ಆಳದ ಕೆನಲ್ ಗೇಟ್ ಮೂಲಕ ಕಾಡಾನೆ ನಾಲೆಗೆ ಇಳಿದಿದೆ. ಆದರೆ ನೀರಿನ ಹರಿವಿನ ರಭಸ ಹೆಚ್ಚಾಗಿದ್ದರಿಂದ ಮತ್ತೆ ಮರಳಿ ವಾಪಸ್ ಬರಲು ಸಾಧ್ಯವಾಗದೇ ಒದ್ದಾಟ ನಡೆಸಿತ್ತು. ಜೊತೆಗೆ ಸತತವಾಗಿ ನೀರಿನಲ್ಲಿದ್ದ ಕಾರಣ ಆನೆ ಸೊಂಡಿಲಿನ ತುದಿ ಹಾಗೂ ಕಾಲು ಬಿಳಿ ಬಣ್ಣಕ್ಕೆ ತಿರುಗಿತ್ತು.ಇದನ್ನೂ ಓದಿ: ಶಿವನಸಮುದ್ರದ ಬಳಿ ನಾಲೆಗೆ ಬಿದ್ದ ಕಾಡಾನೆಯನ್ನು ಯಶಸ್ವಿಯಾಗಿ ಮೇಲೆತ್ತಿದ ಅರಣ್ಯ ಇಲಾಖೆ
ಭಾನುವಾರ ಆನೆ ಕಾಣದಿರುವುದನ್ನು ಗಮನಿಸಿದ ಅಧಿಕಾರಿಗಳಿಗೆ ಆನೆ ನಾಲೆಗೆ ಇಳಿದಿರುವ ವಿಷಯ ಗೊತ್ತಾಗಿದೆ. ಬಳಿಕ ಸಂಜೆವರೆಗೆ ಆನೆ ಮೇಲೆ ಬರುತ್ತದೆ ಎಂದು ಕಾದು ನೋಡಿದರೂ ಕೂಡ ಆನೆ ಮೇಲೆ ಬಂದಿರಲಿಲ್ಲ. ಈ ಹಿನ್ನೆಲೆ ಡಿಸಿಎಫ್ ರಘು ಹಾಗೂ ವನ್ಯಜೀವಿ ವಲಯ ಮೈಸೂರು ವಿಭಾಗ ಡಿಸಿಎಫ್ ಪ್ರಭು ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳು ನಾಲೆಯ ನೀರಿನ ಪ್ರಮಾಣವನ್ನು ತಗ್ಗಿಸಿ ಕಾರ್ಯಾಚರಣೆ ಆರಂಭಿಸಿದರು.
ಇಂದು (ನ.18) ಬೆಳಿಗ್ಗೆಯೇ ಅಧಿಕಾರಿಗಳು ಬೆಂಗಳೂರಿನಿಂದ ಹೈಡ್ರಾಲಿಕ್ ಕ್ರೇನ್ ತರಿಸಿದ್ದರು. ಬಳಿಕ ಆನೆಗೆ ಅರಿವಳಿಕೆ ಮದ್ದು ನೀಡಿ ಮೇಲೆತ್ತಲು ನಿರ್ಧರಿಸಿದ್ದರು. ಅದರಂತೆ ಅರವಳಿಕೆ ನೀಡುವ ಮೊದಲು ಆನೆಗೆ ನಿರಂತರವಾಗಿ ಕಬ್ಬು, ಬೆಲ್ಲವನ್ನ ಆಹಾರವಾಗಿ ಪೂರೈಸುತ್ತಿದ್ದರು. ಈ ವೇಳೆ ಅಧಿಕಾರಿಗಳ ತಂಡದ ಡಾ. ರಮೇಶ್ ಮತ್ತು ಡಾ ಆದರ್ಶ್ ಅವರು ಗನ್‌ನಲ್ಲಿ ಶೂಟ್ ಮಾಡುವ ಆನೆಗೆ ಎರಡು ಬಾರಿ ಅರವಳಿಗೆ ಮದ್ದು ನೀಡಿದರು.
ನಾಲೆಗೆ ಕಂಟೇನರ್‌ನ್ನು ಇಳಿಸಿದ್ದ ಅಧಿಕಾರಿಗಳು ಆನೆ ನಿತ್ರಾಣವಾಗುತ್ತಿದ್ದಂತೆ ಕೆಳಗಿಳಿದು, ಆನೆಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು. ಕೂಡಲೇ ಆನೆಗೆ ಬೆಲ್ಟ್ ಹಾಗೂ ಹಗ್ಗ ಕಟ್ಟಿ ಅದನ್ನು ಕ್ರೇನ್ ಮೂಲಕ ಕಂಟೇನರ್ ಮೇಲೆ ಇರಿಸಲಾಯಿತು. ಬಳಿಕ ಆನೆ ಮಲಗಿದ್ದ ಕಂಟೇನರ್‌ನ್ನು ಕ್ರೇನ್ ಮೂಲಕ ಮೇಲೆತ್ತಿ, ಲಾರಿಯೊಂದಕ್ಕೆ ಶಿಫ್ಟ್ ಮಾಡಿದರು.
ಲಾರಿಯ ಮೂಲಕ ಆನೆಯನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ, ಆರೋಗ್ಯ ತಪಾಸಣೆ ನಡೆಸಿದರು. ಬಳಿಕ ಆನೆಯನ್ನು ಕಾಡಿಗೆ ಬಿಡಬಹುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದು, ಅದರಂತೆ ಆನೆಯನ್ನು ಕಾವೇರಿ ವನ್ಯಜೀವಿ ಧಾಮಕ್ಕೆ ಬಿಡಲಾಗಿದೆ.ಇದನ್ನೂ ಓದಿ: 31 ಕೃಷ್ಣಮೃಗಗಳ ಸಾವಿಗೆ ಟ್ವಿಸ್ಟ್ – 3 ತಿಂಗಳ ಹಿಂದೆ ಮೃಗಾಲಯಕ್ಕೆ ಮುನ್ಸೂಚನೆ ನೀಡಿದ್ದ ಪಶು ವೈದೈಕೀಯ ಸಂಸ್ಥೆ


