ಹಾಸನ: ಪತಿ ಹಾಗೂ ಅತ್ತೆಯಿಂದ ಕಿರುಕುಳಕ್ಕೆ (Harassment) ಮನನೊಂದು ಗೃಹಿಣಿಯೊಬ್ಬರು (Housewife) ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ (Hassan) ಜಿಲ್ಲೆ ಅರಕಲಗೂಡು (Arakalgud) ತಾಲೂಕಿನ ರಾಮನಾಥಪುರ ಬಳಿ ನಡೆದಿದೆ.
ಮಹಾದೇವಿ (29) ಆತ್ಮಹತ್ಯೆಗೆ ಶರಣಾದ ಮಹಿಳೆ. ಮಹಾದೇವಿ ಮೂರು ವರ್ಷಗಳ ಹಿಂದೆ ಅರಕಲಗೂಡು ತಾಲೂಕಿನ ಸೀಬಿಹಳ್ಳಿ ಗ್ರಾಮದ ಕುಮಾರ್ ಜೊತೆ ಎರಡನೇ ವಿವಾಹವಾಗಿದ್ದರು. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಸಾಲಿಗ್ರಾಮ ತಾಲೂಕಿನ ಕರ್ಪೂರವಳ್ಳಿ ಗ್ರಾಮದ ಮಹಾದೇವಿ ಎರಡನೇ ಮದುವೆ ಸಂದರ್ಭ ಕುಟುಂಬಸ್ಥರು ವರದಕ್ಷಿಣೆ ರೂಪದಲ್ಲಿ 100 ಗ್ರಾಂ ಚಿನ್ನ ನೀಡಿದ್ದರು. ಆದರೆ ಇತ್ತೀಚಿಗೆ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಕುಮಾರ್, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದ. ಇದನ್ನೂ ಓದಿ: ಕಬ್ಬಿಗೆ ದರ ನಿಗದಿ ವಿಚಾರದಲ್ಲಿ ಸಕ್ಕರೆ ಕಾರ್ಖಾನೆಗಳ ಕಳ್ಳಾಟ – ಸಿಡಿದೆದ್ದ ಕಲಬುರಗಿ ರೈತರು
ಕುಮಾರ್ ಕಿರುಕುಳ ತಾಳಲಾರದೆ ಮಹಾದೇವಿ ಕಳೆದ ಹದಿನೈದು ದಿನಗಳ ಹಿಂದೆ ತವರು ಮನೆ ಸೇರಿದ್ದರು. ಆದರೂ ಸುಮ್ಮನಾಗದ ಪತಿ ಕುಮಾರ್ ಪತ್ನಿಗೆ ಅಶ್ಲೀಲ ಮೆಸೇಜ್ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಗುರುವಾರ ಹಾಸನಕ್ಕೆ ಬಂದಿದ್ದ ಮಹಾದೇವಿಗೆ ಬಸ್ ನಿಲ್ದಾಣದಲ್ಲೇ ಕುಮಾರ್ ನಿಂದಿಸಿದ್ದ. ಇದರಿಂದ ಮನನೊಂದಿದ್ದ ಮಹಾದೇವಿ ನಂತರ ಹಾಸನ ಮಹಿಳಾ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಬಳಿಕ ಡೆತ್ನೋಟ್ ಬರೆದಿಟ್ಟು ಮಗುವಿನೊಂದಿಗೆ ವೀಡಿಯೋ ಮಾಡಿದ್ದರು. ಇದನ್ನೂ ಓದಿ: ಮುಂಜಾನೆ ದೆಹಲಿಯಿಂದ ಆಗಮಿಸಿ ಪತ್ನಿ ಆರೋಗ್ಯ ವಿಚಾರಿಸಿದ ಸಿಎಂ
ಪತಿಯ ನಿಂದನೆ ಸಹಿಸಲು ಆಗುತ್ತಿಲ್ಲ. ನಾನು ಬದುಕಿರುವುದರಿಂದ ಅವನಿಗೆ ತೊಂದರೆ. ನನ್ನ ಸಾವಿಗೆ ನನ್ನ ಗಂಡ, ನನ್ನ ಅತ್ತೆ ಕಾರಣ. ಯಾವುದು ಬೇಡ, ಹೋರಾಟ ಮಾಡಲು, ಓಡಾಡಲು ಆಗುತ್ತಿಲ್ಲ. ನಾನು ಇದ್ದರೆ ತಮ್ಮ, ಅಪ್ಪ-ಅಮ್ಮನಿಗೂ ತೊಂದರೆ. ಬಾಯಿಗೆ ಬಂದಂತೆ ಬಯ್ಯುತ್ತಾನೆ. ಮೂರು ವರ್ಷದಿಂದ ನರಕ ಕೊಟ್ಟಿದ್ದಾನೆ. ಪೊಲೀಸರು ಹೇಳುವಷ್ಟು ಹೇಳಿದ್ದಾರೆ. ನನ್ನ ತಮ್ಮ, ಅಪ್ಪ, ಅಮ್ಮ ಎಲ್ಲರಿಗೂ ಜೀವ ಬೆದರಿಕೆ ಹಾಕಿದ್ದಾನೆ. ನನ್ನಿಂದ ಅವರ ಜೀವನ ಏಕೆ ಹಾಳಾಗಬೇಕು? ಮಗು ನನಗೆ ಹುಟ್ಟಿಲ್ಲ ಅಂತಾನೆ. ಇದನ್ನೆಲ್ಲಾ ಕೇಳಿಕೊಂಡು ಬದುಕಲು ಆಗಲ್ಲ, ಈ ಜೀವನವೇ ಬೇಡ ನನಗೆ ಎಂದು ಆತ್ಮಹತ್ಯೆಗೂ ಮುನ್ನ ಮಹಾದೇವಿ ವೀಡಿಯೋ ಮಾಡಿಟ್ಟು ನಾಪತ್ತೆಯಾಗಿದ್ದರು. ಇದನ್ನೂ ಓದಿ: ದೇಶದಲ್ಲಿ ʻವೈಟ್ ಕಾಲರ್ʼ ರಕ್ಕಸರು – ಹೇಗೆ ಹುಟ್ಟಿಕೊಳ್ತಾರೆ? ಭಾರತಕ್ಕೆ ಏಕೆ ಸವಾಲು?
ಬಳಿಕ ಕುಟುಂಬಸ್ಥರು ಮಹಾದೇವಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದರು. ಸೋಮವಾರ ಅರಕಲಗೂಡು ತಾಲೂಕಿನ, ಬೆಟ್ಟಸೋಗೆ ಬಳಿ ಮಹಾದೇವಿ ಮೃತದೇಹ ಪತ್ತೆಯಾಗಿದೆ. ಶುಕ್ರವಾರ ರಾಮನಾಥಪುರದ ಬಳಿಯ ಕಾವೇರಿ ನದಿಗೆ ಒಂದೂವರೆ ವರ್ಷದ ಮಗುವಿನೊಂದಿಗೆ ಹಾರಿ ಮಹಾದೇವಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಮಗುವಿನ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮದುವೆ ಆಗ್ತೀನಿ, ರಿಲೇಷನ್ಶಿಪ್ನಲ್ಲಿ ಇರ್ತೀನಿ ಅಂತ ಇನ್ನೂ ಮೂವರಿಗೆ ಮೋಸ ಮಾಡಿದ್ದಾಳೆ: ನಟಿ ವಿರುದ್ಧ ಅರವಿಂದ್ ರೆಡ್ಡಿ ಆರೋಪ
